ಆರೋಗ್ಯ ಇಲಾಖೆಯಿಂದ ಒಂದರಿಂದ ಹದಿನೈದು ವರ್ಷದ ಮಕ್ಕಳಿಗೆ ಶಾಲಾ ಮಟ್ಟದಲ್ಲಿಯೇ ಲಸಿಕೆ ವಿತರಣೆ.

ನೆಲ್ಯಾಡಿ: ಮಕ್ಕಳಿಗೆ ಕಾಡುವ ಮೆದುಳು ಜ್ವರಕ್ಕೆ ಆರೋಗ್ಯ ಇಲಾಖೆಯು ಮುಂದಿನ ದಿನಗಳಲ್ಲಿ “ಜಪಾನೀಸ್ ಎಸ್ನಫಲೈಟಿಸ್” ಎನ್ನುವ ಲಸಿಕೆ ನೀಡಲಿದ್ದು. ಈ ಬಗ್ಗೆ ಆರೋಗ್ಯ ಇಲಾಖೆ ಗ್ರಾಮ ಮಟ್ಟದಿಂದಲೇ ತಯಾರಿ ನಡೆಸಲು ಸಜ್ಜಾಗಿದೆ.
ಈ ವರ್ಷದ ದಶoಬರ 5 ರಿಂದ 24 ರ ವರೆಗೆ ಎಲ್ಲಾ ಶಾಲೆ ಹಾಗೂ ಅಂಗನವಾಡಿಗಳಲ್ಲಿ 1 ವರ್ಷದ ಮಕ್ಕಳಿಂದ ಆರಂಭಿಸಿ 10 ನೇ ತರಗತಿ ಮಕ್ಕಳವರೆಗೆ, ಎಲ್ಲಾ ಮಕ್ಕಳಿಗೂ ಜೆಇ(ಮೆದುಳು ಜ್ವರ) ಲಸಿಕೆ ನೀಡಲಾಗುವುದು. ಈ ಮೂಲಕ ಜೆಇ ಲಸಿಕೆಯು ನಮ್ಮ ಜಿಲ್ಲೆಯೂ ಸೇರಿದಂತೆ ರಾಜ್ಯದ ಒಟ್ಟು 20 ಜಿಲ್ಲೆಗಳಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಸೇರಲ್ಪಡುತ್ತದೆ. ಈ ಅಭಿಯಾನದಲ್ಲಿ ಸುರಕ್ಷಿತ, ಪರಿಣಾಮಕಾರಿ ಹಾಗೂ ಸುಲಭವಾಗಿ ಲಭ್ಯವಿರುವ ಜೆಇ ಲಸಿಕೆಯನ್ನು ಒಂದು ಬಾರಿ ನೀಡಲಾಗುತ್ತದೆ.
ನಂತರ ದಿನಗಳಲ್ಲಿ 9 ರಿಂದ 12 ತಿಂಗಳಲ್ಲಿ ಹಾಗೂ 16 ರಿಂದ 24 ತಿಂಗಳಲ್ಲಿ ಕ್ರಮವಾಗಿ ಮೊದಲನೇ ಹಾಗೂ ದ್ವಿತೀಯ ಡೋಸ್ ಲಸಿಕೆ ನೀಡಲಾಗುವುದು.
ಏನಿದು ಜಪಾನೀಸ್ ಎನ್ಸಫಲೈಟಿಸ್(ಮೆದುಳು ಜ್ವರ)
ಇದೊಂದು ವೈರಸ್‌ನಿಂದ ಬರುವ ಖಾಯಿಲೆಯಾಗಿದ್ದು ಪ್ರಾಣಿ/ ಪಕ್ಷಿಗಳಿಂದ ಮನುಷ್ಯರಿಗೆ ಸೊಳ್ಳೆಗಳ ಮೂಲಕ ಹರಡುತ್ತದೆ. ಕಾಯಿಲೆಗೆ ನಿಗದಿತ ಚಿಕಿತ್ಸೆ ಇದುವರೆಗೂ ಲಭ್ಯವಿಲ್ಲದ ಕಾರಣ ಲಸಿಕೆ ಪಡೆಯುವುದರ ಮೂಲಕ ಮಾತ್ರ ಈ ಖಾಯಿಲೆಯನ್ನು ತಡೆಗಟ್ಟಲು ಸಾಧ್ಯ. 2007 ರಿಂದ ಕರ್ನಾಟಕದಲ್ಲಿ ಈ ಲಸಿಕೆ ನೀಡಲಾಗುತ್ತಿದೆ. ಆರಂಭದಲ್ಲಿ ರಾಜ್ಯದ 8 ಜಿಲ್ಲೆಗಳಲ್ಲಿ, 2013 ರಿಂದ 2 ಜಿಲ್ಲೆಗಳಲ್ಲಿ ಜೆಇ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೀಡಲಾಗಿದೆ. ಈ ಹಿಂದೆ ಮೆದುಳು ಜ್ವರದಿಂದ ಶೇ.30 ರಷ್ಟು ಮಕ್ಕಳು ಮರಣ ಹೊಂದುತ್ತಿದ್ದು, ಲಸಿಕೆಯ ನಂತರದಲ್ಲಿ ಮರಣ ಪ್ರಮಾಣ ತುಂಬಾ ಇಳಿಕೆಯಾಗಿದೆ. ಈ ಬಾರಿ ದಕ್ಷಿಣ ಕನ್ನಡ ಉಡುಪಿ, ಹಾಸನ ಸೇರಿದಂತೆ ಒಟ್ಟು 10 ಜಿಲ್ಲೆಗಳಿಗೆ ಈ ವ್ಯಾಕ್ಸಿನ್ ಹೊಸದಾಗಿ ನೀಡಲಾಗುತ್ತಿದೆ.
ಭಯ ಬೇಡ ಮುಕ್ತವಾಗಿ ಲಸಿಕೆ ಹಾಕಿಸಿಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಲಸಿಕೆ ಎಂದಾಕ್ಷಣ ಸಾರ್ವಜನಿಕ ವಲಯದಲ್ಲಿ ತಪ್ಪು ಕಲ್ಪನೆಗಳೇ ಹೆಚ್ಚು. ಲಸಿಕೆಯ ಅಡ್ಡಪರಿಣಾಗಳ ಬಗ್ಗೆ ಪೋಷಕರಿಗೆ ಭಯ ಇರುವುದು ಸಹಜ. ಆದರೆ ಜೆಇ ಲಸಿಕೆಯ ಬಗ್ಗೆ ಭಯ ಬೇಡ ಹಾಗೂ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಮಕ್ಕಳ ದೇಹದಲ್ಲಿ ಮೆದುಳು ಜ್ವರದೊಂದಿಗೆ ಇತರೆ ಸಣ್ಣ ಪುಟ್ಟ ಜ್ವರದ ವಿರುದ್ದ ಹೋರಾಡಲೂ ಈ ಲಸಿಕೆ ಪರಿಣಾಮಕಾರಿಯಾಗಿದ್ದು, ತಜ್ಞ ವೈದ್ಯರು, ಅನುಭವಿ ಸಿಬ್ಬಂದಿ ಹಾಗೂ ಪೂರ್ಣ ಪ್ರಮಾಣದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಈ ಲಸಿಕೆ ಅಭಿಯಾನ ಆರಂಭಗೊಳ್ಳಲಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 1 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಬಗ್ಗೆ ಪೂರ್ವಭಾವಿಯಾಗಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ, ಎಲ್ಲಾ ಶಾಲೆಗಳ ಆಧ್ಯಾಪಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಇತ್ಯಾದಿ ನೀಡಲಾಗುವುದು. ಆರೋಗ್ಯ ಇಲಾಖಾಧಿಕಾರಿಗಳು ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿಯೊಂದಿಗೆ ಮತ್ತು ಪೋಷಕರೊಂದಿಗೆ ಸಭೆ ಸಮಾಲೋಚನೆ ಕೈಗೊಂಡು ಲಸಿಕಾ ಅಭಿಯಾನ ನಡೆಸಲಾಗುವುದು.
◉ ಡಾ. ಪ್ರಕಾಶ್ ಬಿ. ಪ್ರಭಾರ ತಾಲೂಕು ಆರೋಗ್ಯಾಧಿಕಾರಿ, ಬೆಳ್ತಂಗಡಿ ತಾಲೂಕು.




