ನೆಲ್ಯಾಡಿ: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮುಂಚೆ ರಾಜ್ಯೋತ್ಸವ ಪ್ರಯುಕ್ತ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ನೆಲ್ಯಾಡಿ ಪೇಟೆಯಿಂದ ಕಾಲೇಜಿನವರೆಗೆ “ಫಿಟ್ ಇಂಡಿಯಾ ಫ್ರೀಡಮ್ ರನ್ ಕಾಲ್ನಡಿಗೆ ಜಾಥಾ” ವನ್ನು ಎನ್‌ಎಸ್ಎಸ್ ಸಂಯೋಜನಾಧಿಕಾರಿ ವನಿತಾ ಪಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಜಾಥಾ ಕ್ಕೆ ಚಾಲನೆ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಆನಂದ್ ಅವರು ಮಾತನಾಡಿ ಉತ್ತಮ ಆರೋಗ್ಯ ಮತ್ತು ಸ್ವಚ್ಛ ಮನಸ್ಸಿನ ಪರಿಕಲ್ಪನೆಯೆಂಬ ಈ ಜಾಥಾ ದ ಮುಖ್ಯ ಧ್ಯೇಯವನ್ನು ಕುರಿತು ವಿವರಿಸಿದರು.
ಜಾಥಾ ನಂತರ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮದ ಮೂಲಕ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುರೇಶ್ ಕೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಮ್ಮ ಉದ್ಘಾಟನೆ ನುಡಿಗಳಲ್ಲಿ ನಮ್ಮ ಕನ್ನಡ ನಾಡಿನ ನೆಲ, ಜಲ, ಸಾಮರಸ್ಯದ ಬದುಕು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಈ ಸಂಸ್ಕೃತಿ ಮತ್ತು ಪ್ರಕೃತಿಯನ್ನು ಒಟ್ಟಿಗೆ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಸಹ ಸಂಯೋಜಕರಾದ ಡಾ.ಸೀತಾರಾಮ ಪಿ ಅವರು ಮಾತನಾಡಿ ಕರ್ನಾಟಕದ ಏಕೀಕರಣ ಚಳುವಳಿಯ ಹೆಜ್ಜೆಗಳನ್ನು ಪ್ರಸ್ತಾಪಿಸಿದರು. ಕನ್ನಡ ನಾಡೆಲ್ಲವೂ ಕುವೆಂಪು ಚಿತ್ರಿಸಿದಂತೆ ಅಖಂಡ ಕರ್ನಾಟಕವಾಗಲು ಕನ್ನಡ ಕವಿಗಳೆಲ್ಲರೂ ವ್ಯಕ್ತಪಡಿಸಿದ ದನಿಗಳು, ಉಕ್ತಿಗಳು ಕನ್ನಡ ಕಾವ್ಯಲೋಕದಲ್ಲಿ ಇಂದಿಗೂ ನಮಗೆ ಕನ್ನಡಾಭಿಮಾನವನ್ನು ತುಂಬುತ್ತವೆ. ಇಂತಹ ಕವನಗಳನ್ನೇ ನಾವು ಕೋಟಿ ಕಂಠ ಗಾಯನದಲ್ಲಿ ಹಾಡಿದ್ದೇವೆ. ಈ ಹಾಡುಗಳಲ್ಲಿ ವ್ಯಕ್ತವಾಗುವ ಕನ್ನಡಿಗರ ಅಭಿಮಾನ, ಹೋರಾಟದ ಬದುಕು, ವೈವಿಧ್ಯತೆಯ ಚೆಲುವನ್ನು ಇಂದಿಗೂ ಮುಂದುವರೆಸಿಕೊಂಡು ಹೋಗಲು ಪ್ರೇರಣೆಯನ್ನು ತಂದುಕೊಡುತ್ತವೆ ಎಂದರು. ರಾಜ್ಯೋತ್ಸವ ಪ್ರಯುಕ್ತ ಕಾಲೇಜಿನ ಕನ್ನಡ ಸಂಘದ ವತಿಯಿಂದ ಏರ್ಪಡಿಸಿದ ಪ್ರಬಂಧ ಮತ್ತು ಸ್ವರಚಿತ ಕವನ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಾದ ಧನ್ಯಶ್ರೀ, ಸುಮಿತ್ರ, ಪುಷ್ಪಲತಾ, ಫಿರ್ದೋಶಿಯಾ, ಶ್ರೇಷ್ಠ ಮತ್ತು ಪುನೀತ ಕುಮಾರ್ ಅವರಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಏಕೀಕರಣ ಚಳುವಳಿ ಕುರಿತು ವಿದ್ಯಾರ್ಥಿ ಪುನೀತ್ ಕುಮಾರ್ ಅಭಿಪ್ರಾಯಗಳನ್ನು ಹಂಚಿಕೊಂಡರು.
ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಯೋಜಿಸಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನೂರಂದಪ್ಪ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ಶೃತಿ ಅವರು ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಆನಂದ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೆರೊಣಿಕಾ ಪ್ರಭಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸ್ಪೂರ್ತಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಡೀನಾ ಪಿ.ಪಿ, ಎನ್.ಎಸ್.ಎಸ್ ಸಂಯೋಜನಾಧಿಕಾರಿ ವನಿತಾ ಪಿ ಹಾಗೂ ಬೋಧಕೇತರ ಸಿಬ್ಬಂದಿ ವಸಂತ್, ಶ್ರೀಮತಿ ವಿಮಲಾ, ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.