ಗುಂಡ್ಯ: ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಮಧ್ಯೆ ಗುಂಡ್ಯ ಎಂಬಲ್ಲಿ ಎ.2ರ ಬೆಳಗ್ಗೆ ರಸ್ತೆಯ ಬದಿಯಲ್ಲಿ ಮಲಗಿದ ವ್ಯಕ್ತಿಯ ಮೇಲೆ ಲಾರಿಯೊಂದು ಚಲಾಯಿಸಿ ಲಾರಿ ಸಮೇತ ಚಾಲಕ ಪರಾರಿಯಾದ ಕೆಲವೇ ಕ್ಷಣದಲ್ಲಿ ಚಾಲಕ ಹಾಗೂ ಲಾರಿಯನ್ನು ಉಪ್ಪಿನಂಗಡಿ-ನೆಲ್ಯಾಡಿ ಪೊಲೀಸರು ವಶಕ್ಕೆ ಪಡೆದುಕೊಂಡರು.
ಘಟನೆಯಲ್ಲಿ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಕೇರಳದ ಪೊನ್ನಪ್ಪನ್(ವ.50) ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿಯು ಮೂಲತಃ ಕೇರಳದವನಾಗಿದ್ದು, ಕಳೆದ 15 ವರ್ಷದಿಂದ ಗುಂಡ್ಯ ಪರಿಸರದಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಾ, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ರಸ್ತೆಯ ಬದಿಯಲ್ಲಿ ಮಲಗುತ್ತಿದ್ದ.
ವಿಷಯ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ರಾಜೇಶ್ ಹಾಗೂ ನೆಲ್ಯಾಡಿ ಹೂರಠಾಣೆ ಹೆಡ್‍ಕಾನ್‍ಸ್ಟೇಬಲ್ ಕುಶಾಲಪ್ಪ ನಾಯ್ಕ, ಬಾಲಕೃಷ್ಣ, ಪ್ರತಾಪ್ ರೆಡ್ಡಿ, ನಾಗರಾಜ್ ಪಂಜಳ ಸಮೀಪ ಲಾರಿ ಚಾಲಕ ಅಜಯ್ ನನ್ನು ಬಂಧಿಸಿ ಲಾರಿ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಿಂದ ಉಡುಪಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಆಗಿದ್ದು ಚಾಲಕ ಅಜಯ್ ಮೂಲತಃ ಬೆಂಗಳೂರಿನವನಾಗಿದ್ದಾನೆ. ಮೃತ ದೇಹವನ್ನು ಉಪ್ಪಿನಂಗಡಿ ಆಸ್ಪತ್ರೆಯ ಶವಗಾರಕ್ಕೆ ಕಳಿಸಲಾಗಿದೆ.