ಮುಂಗಾರು ಮಾರುತ ಆಗಮನಕ್ಕೆ ವಿಳಂಬ ಏಕೆ? ಮಳೆಗಾಲ ಶುರುವಾಗೋದು ಯಾವಾಗ?

ಶೇರ್ ಮಾಡಿ

ಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ಜನ ಮುಂಗಾರು ಮಳೆ ಶುರುವಾಗೋದು ಯಾವಾಗ ಅಂತಾ ಕಾದು ಕೂತಿದ್ದಾರೆ. ರೈತರಂತೂ ಬಿತ್ತನೆ ಕಾರ್ಯ ಮಾಡೋಕೆ ಹಿಂದೆ ಮುಂದೆ ನೋಡುವಂತಾಗಿದೆ. ಹವಾಮಾನ ಇಲಾಖೆ ಪ್ರಕಾರ ಮುಂಗಾರು ಆರಂಭ ಆಗೋಕೆ ಇನ್ನೂ 4 ದಿನ ತಡ ಆಗಬಹುದು ಅನ್ನೋ ಮಾಹಿತಿ ಸಿಗ್ತಿದೆ. ಮುಂಗಾರು ಮಾರುತಗಳು ಇನ್ನೂ ಕೇರಳ ರಾಜ್ಯವನ್ನೇ ಪ್ರವೇಶ ಮಾಡಿಲ್ಲ. ಏಕೆ ಹೀಗೆ? ಮುಂಗಾರಿನ ಆರಂಭ ಯಾವಾಗ? ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಬಹುದಾ? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ..

ಮುಂಗಾರು ತಡ ಆಗ್ತಿರೋದು ಏಕೆ?
ರಾಜ್ಯದಲ್ಲಿ ಮುಂಗಾರು ಆಗಮನಕ್ಕೆ ಮುನ್ನವೇ ಕೆಲವು ದಿನಗಳ ಕಾಲ ಮಳೆ ಆಗಿತ್ತು. ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ ಕೇರಳಕ್ಕೆ ಆಗಮಿಸಿ ಕೆಲವೇ ದಿನಗಳಲ್ಲಿ ರಾಜ್ಯಕ್ಕೂ ಕಾಲಿಡುವ ನಿರೀಕ್ಷೆ ಇತ್ತು. ಆದ್ರೆ, ಹವಾಮಾನದಲ್ಲಿ ಭಾರೀ ಬದಲಾವಣೆ ಎದುರಾಗಿದೆ. ಅರಬ್ಬಿ ಸಮುದ್ರದಲ್ಲಿ ಮಾರುತಗಳ ಚಲನೆ ವೇಗ ಪಡೆದುಕೊಂಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕೂಡಾ ಕಂಡು ಬಂದಿದ್ದು, ಮೇಲ್ಮೈ ಸುಳಿಗಾಳಿ ಎದ್ದಿದೆ. ಮಾರುತಗಳು ಗೋವಾ ಹಾಗೂ ಮುಂಬೈ ಕಡೆಗೆ ವೇಗವಾಗಿ ಬೀಸುತ್ತಿವೆ. ಹೀಗಾಗಿ, ಮುಂಗಾರು ವಿಳಂಬ ಆಗ್ತಿದೆ. ವಾತಾವರಣದಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಯಿಂದಾಗಿ ಹವಾಮಾನ ಇಲಾಖೆಗೂ ಕೂಡಾ ಸ್ಪಷ್ಟವಾದ ದಿನಾಂಕ ಕೊಡೋಕೆ ಸಾಧ್ಯವಾಗ್ತಿಲ್ಲ. ಜೂನ್ 4ಕ್ಕೆ ಮುಂಗಾರು ಕೇರಳ ಪ್ರವೇಶ ಮಾಡಬಹುದು ಅಂತಾ ಈ ಹಿಂದೆ ಹವಾಮಾನ ಇಲಾಖೆ ಹೇಳಿತ್ತು. ನಂತರ ಜೂನ್ 7ಕ್ಕೆ ಬರಬಹುದು ಅಂತಾ ಅಂದಾಜಿಸಿತ್ತು. ಇದೀಗ ಮುಂಗಾರು ಮತ್ತಷ್ಟು ತಡವಾಗಿದೆ. ಆದ್ರೆ, ತಡವಾಗಿಯಾದರೂ ಮುಂಗಾರು ಮಾರುತಗಳು ಭರ್ಜರಿಯಾಗಿ ಎಂಟ್ರಿ ಕೊಡುವ ನಿರೀಕ್ಷೆ ಇದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಕೇರಳ ರಾಜ್ಯಕ್ಕೆ ಮುಂಗಾರು ಮಾರುತಗಳ ಆಗಮನವಾದ್ರೆ, ನಂತರ ಒಂದೆರಡು ದಿನಗಳಲ್ಲೇ ಕರ್ನಾಟಕ ರಾಜ್ಯಕ್ಕೂ ಕಾಲಿಡಲಿವೆ. ಈ ಮೂಲಕ ಮುಂದಿನ ವಾರ ರಾಜ್ಯದಲ್ಲಿ ಮುಂಗಾರಿನ ಆರ್ಭಟ ಶುರುವಾಗಬಹುದು ಅನ್ನೋ ನಿರೀಕ್ಷೆ ಇದೆ. ಕಳೆದ 5 ವರ್ಷಗಳ ದಾಖಲೆ ಗಮನಿಸಿದರೆ, ಈ ಬಾರಿ ಮುಂಗಾರು ಆಗಮನ ತುಂಬಾನೆ ತಡ ಎನ್ನಬಹುದು.

2022ರಲ್ಲಿ ಮೇ 29ಕ್ಕೆ ಕೇರಳ ತೀರಕ್ಕೆ ಮುಂಗಾರು ಆಗಮನವಾಗಿತ್ತು. 2021ರಲ್ಲಿ ಜೂನ್ 03ಕ್ಕೆ ಮುಂಗಾರು ಆಗಮಿಸಿತ್ತು. 2020ರಲ್ಲಿ ಜೂನ್ 01ಕ್ಕೆ ಬಂದಿತ್ತು. 2019 – ಜೂನ್ 08ಕ್ಕೆ ಆಗಮನವಾಗಿತ್ತು. 2018ಕ್ಕೆ ಮೇ 29ಕ್ಕೆ ಮುಂಗಾರು ಕೇರಳ ಕರಾವಳಿಗೆ ಅಪ್ಪಳಿಸಿತ್ತು. ಆದ್ರೆ, ಈ ಬಾರಿ ಜೂನ್ 10ಕ್ಕೆ ಆಗಮನ ಆಗಬಹುದು ಅನ್ನೋ ನಿರೀಕ್ಷೆ ಇದೆ.

ಆತಂಕದಲ್ಲಿದ್ದಾರೆ ಘಟ್ಟ ಪ್ರದೇಶದ ಜನರು!
ಮುಂಗಾರು ಮಳೆ ತಡವಾಗಿಯಾದ್ರೂ ಭರ್ಜರಿಯಾಗಿ ಎಂಟ್ರಿ ಕೊಡುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಜನರು ಆತಂಕದಲ್ಲಿದ್ದಾರೆ. ಆಗುಂಬೆ ಘಾಟ್, ಚಾರ್ಮಾಡಿ ಘಾಟ್, ಶಿರಾಡಿ ಘಾಟ್ ಹಾಗೂ ಸಂಪಾಜೆ ಘಾಟ್‌ಗಳಲ್ಲಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಮಳೆಗಾಲದ ಆರಂಭದಲ್ಲಿ ರಭಸದಿಂದ ಗಾಳಿ ಬೀಸುವ ಕಾರಣ, ಶಿರಾಡಿ ಘಾಟ್‌ನಲ್ಲಿ ರಸ್ತೆಗೆ ವಾಲಿರುವ ಮರಗಳು ಮುರಿದು ಬೀಳುವ ಭೀತಿ ಇದೆ. ಜೊತೆಗೆ ಈ ಭಾಗದಲ್ಲಿ ರಸ್ತೆ ಕಾಮಗಾರಿ ಕೂಡಾ ಅಷ್ಟಕ್ಕಷ್ಟೇ ಅನ್ನೋ ಪರಿಸ್ಥಿತಿ ಇದೆ. ಸಂಪಾಜೆ ಘಾಟ್‌ನಲ್ಲಿ ಭೂ ಕುಸಿತದ ಸಾಧ್ಯತೆಗಳೂ ಇವೆ. ಇನ್ನು ಆಗುಂಬೆ ಹಾಗೂ ಚಾರ್ಮಾಡಿ ಘಾಟ್‌ಗಳ ಪರಿಸ್ಥಿತಿ ಕೂಡಾ ಇದಕ್ಕಿಂತಾ ಭಿನ್ನವಾಗಿಲ್ಲ. ಒಂದು ವೇಳೆ ಈ ಘಾಟಿ ರಸ್ತೆಗಳ ಸಂಪರ್ಕ ಕಡಿತವಾದರೆ ಕರಾವಳಿ ನಗರಗಳ ಸಂಪರ್ಕವೇ ಕಡಿತ ಆಗೋದಂತೂ ಖಚಿತ.

ರಾಜಧಾನಿ ಬೆಂಗಳೂರಿಗೂ ಆತಂಕ ಕಡಿಮೆ ಏನಿಲ್ಲ!
ಚುನಾವಣಾ ಜ್ವರದಿಂದಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಚರಂಡಿ ಹಾಗೂ ರಾಜಕಾಲುವೆಗಳ ಸ್ವಚ್ಛತಾ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಮುಂಗಾರು ಪೂರ್ವ ಮಳೆಗೇ ಬೆಂಗಳೂರಿನ ಅಂಡರ್‌ ಪಾಸ್ ನಲ್ಲಿ ನೀರು ನಿಂತು ಯುವತಿ ಸಾವನ್ನಪ್ಪಿದ್ದ ಘಟನೆಯನ್ನ ಯಾರೂ ಮರೆತಿಲ್ಲ. ಅಂತಾದ್ರಲ್ಲಿ ಅಬ್ಬರದ ಮುಂಗಾರು ಎದುರಾದರೆ ಏನು ಕಥೆ ಅನ್ನೋ ಆತಂಕ ಇದ್ದೇ ಇದೆ. ಬೆಂಗಳೂರಿನ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನ ಭೂಗಳ್ಳರು ತುಂಡರಿಸಿ ಯಾವುದೋ ಕಾಲವಾಗಿದೆ. ನೀರು ಸರಾಗವಾಗಿ ಹರಿದು ಹೋಗಲು ಅವಕಾಶವೇ ಇಲ್ಲದ ಸಂದರ್ಭಗಳಲ್ಲಿ ಜನ ವಸತಿ ಪ್ರದೇಶಗಳಿಗೆ ನುಗ್ಗೋದು ಸಹಜವೇ.. ಈ ಹಂತದಲ್ಲಿ ಬಿಬಿಎಂಪಿ ಏನು ಮಾಡ್ತಿದೆ ಅನ್ನೋದೇ ದೊಡ್ಡ ಪ್ರಶ್ನೆ.. ಅರ್ಧ ಗಂಟೆ ಕಾಲ ಸುರಿವ ಮಳೆಯನ್ನ ನಿಭಾಯಿಸೋಕೇ ಕಷ್ಟವಾಗಿರುವ ಸಂದರ್ಭದಲ್ಲಿ ಮುಂಗಾರು ಅಬ್ಬರಿಸಿದರೆ ಬೆಂಗಳೂರು ನಗರದ ಜನರ ಕಥೆ ಏನು? ವಾಹನ ಸವಾರರ ಪಾಡೇನು ಎಂಬ ಪ್ರಶ್ನೆ ಎದ್ದಿದೆ.

ವರುಣನ ಕೃಪೆಗಾಗಿ ಕಾಯುತ್ತಾ ಬಿತ್ತನೆ ಕುಂಠಿತ!
ಮಳೆಗಾಲಕ್ಕೂ ಕೃಷಿಗೂ ಅವಿನಾಭಾವ ಸಂಬಂಧ. ಒಂದು ವೇಳೆ ಮಳೆ ಸರಿಯಾಗಿ ಆಗದಿದ್ದರೆ ಕೃಷಿ ಕಾರ್ಯಕ್ಕೆ ಭಾರೀ ಹಿನ್ನಡೆ ಆಗುತ್ತೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗುತ್ತೆ. ಈ ಬಾರಿ ಮುಂಗಾರು ಕೊಂಚ ತಡವಾಗಿರುವ ಕಾರಣ ರೈತಾಪಿ ವರ್ಗ ಬಿತ್ತನೆ ಕಾರ್ಯಕ್ಕೇ ಹಿಂದೆ ಮುಂದೆ ನೋಡುವಂತಾಗಿದೆ. ಮುಂಗಾರು ಬಿತ್ತನೆ ಕಾರ್ಯಕ್ಕೆ ರೈತಾಪಿ ಜನರು ಈಗಾಗಲೇ ಭರ್ಜರಿ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ಮುಂಗಾರಿಗೆ ಮುನ್ನವೇ ಉತ್ತಮವಾಗಿ ಮಳೆ ಆದ ಕಾರಣ ರಾಜ್ಯದಲ್ಲಿ 2.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬಿತ್ತನೆ ಆಗುವ ಗುರಿ ಹಾಕಿಕೊಳ್ಳಲಾಗಿತ್ತು. ಈ ಪೈಕಿ 2.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಆಗಿದೆ. ಆದ್ರೆ ಮುಂಗಾರು ವಿಳಂಬ ಆದ ಕಾರಣ ಬಾಕಿ ಪ್ರದೇಶಗಳಲ್ಲಿ ಬಿತ್ತನೆ ಕುಂಠಿತವಾಗಿದೆ. ಒಂದು ಮಳೆ ಇನ್ನಷ್ಟು ತಡವಾದ್ರೆ ಈಗಾಗಲೇ ಬಿತ್ತನೆ ಮಾಡಿದ ಪ್ರದೇಶಗಳಲ್ಲಿ ಆರಂಭದಲ್ಲೇ ಬೆಳೆ ಒಣಗುವ ಭೀತಿಯೂ ಇದೆ.

ತಡವಾಗಿ ಬಂದರೂ ಅಬ್ಬರಿಸಿ ಬರುತ್ತಾ ಮುಂಗಾರು?
ತಡವಾಗಿ ಬಂದ ಮಳೆ ಅಬ್ಬರದಿಂದ ಬರುತ್ತೆ ಅನ್ನೋ ಮಾತಿದೆ. ಈ ಮಾತು ನಿಜವಾದ್ರೆ ಖುಷಿಯೇ. ಆದ್ರೆ, ಪ್ರವಾಹ ಪರಿಸ್ಥಿತಿ ನಿರ್ಮಾಣ ಆದ್ರೆ ಮಾತ್ರ ಆತಂಕ. ಹೀಗಾಗಿ, ಆದಷ್ಟು ಬೇಗ ಮಳೆ ಬರಲಿ, ಜೊತೆಗೆ ವರುಣನಿಗೆ ಸಂಯಮವೂ ಇರಲಿ ಅನ್ನೋದೇ ಎಲ್ಲರ ಆಶಯ.

Leave a Reply

error: Content is protected !!