ಜೂನ್‌ 11 ರಿಂದ ಮಹಿಳೆ ಉಚಿತ ಪ್ರಯಾಣದ ಶಕ್ತಿ! ಬಸ್‌ ಹತ್ತುವ ಮುನ್ನ ಈ 9 ಅಂಶಗಳನ್ನು ಮರೆಯಬೇಡಿ

ಶೇರ್ ಮಾಡಿ

ಬೆಂಗಳೂರು : ನೂತನ ಕಾಂಗ್ರೆಸ್‌ ಸರಕಾರದ ಐದು ‘ಗ್ಯಾರಂಟಿ’ ಯೋಜನೆಗಳ ಪೈಕಿ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಭಾನುವಾರ (ಜೂನ್‌ 11) ಚಾಲನೆ ಸಿಕ್ಕಿದ್ದು. ಸರಕಾರ ಅಸ್ತಿತ್ವಕ್ಕೆ ಬಂದ 23 ದಿನಗಳಲ್ಲಿಯೇ ಮೊದಲ ಭರವಸೆ ಅನುಷ್ಠಾನಗೊಳ್ಳುತ್ತಿದೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ರಾಜ್ಯದ ಎಲ್ಲ ನಾಲ್ಕು ಸಾರಿಗೆ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಶೂನ್ಯ ಟಿಕೆಟ್‌ ಪಡೆದು ಭಾನುವಾರದಿಂದಲೇ ರಾಜ್ಯದೊಳಗೆ ಪ್ರಯಾಣ ಮಾಡಬಹುದು. ರಾಜ್ಯಾದ್ಯಂತ ಏಕಕಾಲಕ್ಕೆ ಭಾನುವಾರ ಬೆಳಗ್ಗೆ 11 ಗಂಟೆಗೆ ಮಹಿಳೆಯರು ಉಚಿತ ಬಸ್‌ ಪ್ರಯಾಣ ಸೌಲಭ್ಯ ಉದ್ಘಾಟನೆಗೊಂಡಿತ್ತು, ವಿಧಾನಸೌಧ ಮುಂಭಾಗ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಜಿಲ್ಲಾಉಸ್ತುವಾರಿ ಸಚಿವರು ಆಯಾ ಜಿಲ್ಲಾಕೇಂದ್ರಗಳಲ್ಲಿ ಹಾಗೂ ಶಾಸಕರು ತಾಲೂಕು ಕೇಂದ್ರಗಳಲ್ಲಿ’ಶಕ್ತಿ’ ಯೋಜನೆಗೆ ಹಸಿರು ನಿಶಾನೆ ತೋರಲಿದ್ದಾರೆ. ಮಧ್ಯಾಹ್ನ 1 ಗಂಟೆ ನಂತರ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.

ಈ ಸೌಲಭ್ಯ ಪಡೆಯಲು ಮಹಿಳೆಯರು ಕಡ್ಡಾಯವಾಗಿ ಈ 9 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ.

 1. ಗುರುತಿನ ಚೀಟಿ ಕಡ್ಡಾಯ
  ಉಚಿತ ಪ್ರಯಾಣಕ್ಕೆ ಹೊರಟ ಮಹಿಳೆಯರು ಕಡ್ಡಾಯವಾಗಿ ಯಾವುದಾದರೊಂದು ಮನೆ ವಿಳಾಸ/ ಭಾವ ಚಿತ್ರ ಇರುವ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಟಿಕೆಟ್‌ ಶುಲ್ಕ ಪಾವತಿಸಬೇಕಾಗುತ್ತದೆ. ವೋಟರ್‌ ಐಡಿ, ಆಧಾರ್‌ ಕಾರ್ಡ್‌, ವಾಹನ ಚಾಲನಾ ಪರವಾನಗಿ, ರೇಷನ್‌ ಕಾರ್ಡ್‌ ಸೇರಿದಂತೆ ಸರ್ಕಾರದಿಂದ ನೀಡಲಾಗುವ ಇತರೆ ಗುರುತಿನ ಚೀಟಿಗಳಲ್ಲಿ ಒಂದನ್ನು ಪ್ರಯಾಣ ಸಂದರ್ಭದಲ್ಲಿ ಹೊಂದಿರಬೇಕು.
 2. ಐಶಾರಾಮಿ ಬಸ್‌ ಹತ್ತುವಂತಿಲ್ಲ
  ಮಹಿಳೆಯರು ಉಚಿತ ಬಸ್‌ ಪ್ರಯಾಣ ಸೌಲಭ್ಯ ಬೇಕು ಅಂದರೆ ಕೇವಲ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಾತ್ರ ಸಂಚರಿಸಬೇಕು. ಐಶಾರಾಮಿ ಬಸ್‌ಗಳಾದ ರಾಜಹಂಸ, ಎಸಿ ಬಸ್‌, ಸ್ಲೀಪರ್‌, ವಾಯುವಜ್ರ, ಐರಾವತ, ಅಂಬಾರಿ ಡ್ರೀಮ್‌ ಕ್ಲಾಸ್‌, ವೋಲ್ವೋ ಮಾದರಿಯ ಬಸ್‌ಗಳನ್ನು ಹತ್ತಬಾರದು.
 3. ಅಂತರ್‌ರಾಜ್ಯ ಬಸ್‌ಗಳಲ್ಲಿ ಅವಕಾಶ ಇಲ್ಲ
  ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯವಿದೆ ಎಂದು ಅಂತರ್‌ರಾಜ್ಯದ ಸಾರಿಗೆ ಬಸ್‌ಗಳನ್ನು ಹತ್ತುವಂತಿಲ್ಲ ಕೇವಲ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಾಹನಗಳಿಗೆ ಮಾತ್ರ ಉಚಿತ ಸೌಲಭ್ಯ ಅನ್ವಯವಾಗುತ್ತದೆ.
 4. ಅಂತರ್‌ರಾಜ್ಯ ಪ್ರಯಾಣ ಇಲ್ಲ
  ಸಾರಿಗೆ ಬಸ್‌ಗಳಲ್ಲಿ ಕೇವಲ ರಾಜ್ಯದೊಳಗೆ ಪ್ರಯಾಣಕ್ಕೆ ಅವಕಾಶ ಇರುತ್ತದೆ. ನೆರೆಯ ರಾಜ್ಯದ ಸ್ಥಳಗಳಿಗೆ ತೆರಳಬೇಕು ಎಂದರೆ ಹಣ ಪಾವತಿಸಬೇಕಾಗುತ್ತದೆ.
 5. ಮೂರು ತಿಂಗಳೊಳಗೆ ಪಡೆಯಿರಿ ಶಕ್ತಿ ಸ್ಮಾರ್ಟ್‌ ಕಾರ್ಡ್
  ಉಚಿತ ಪ್ರಯಾಣ ಸೌಲಭ್ಯ ಇದೆ ಎಂದು ಕೇವಲ ಗುರುತಿನ ಚೀಟಿ ತೋರಿಸಿಕೊಂಡು ಪ್ರಯಾಣ ಮಾಡುವಂತಿಲ್ಲ. ಮುಂದಿನ ಮೂರು ತಿಂಗಳಲ್ಲಿ ಸಾರಿಗೆ ಸಂಸ್ಥೆಗಳಿಂದ ನೀಡುವ ಶಕ್ತಿ ಸ್ಮಾರ್ಟ್‌ ಕಾರ್ಡ್‌ ಪಡೆದುಕೊಳ್ಳಬೇಕು. ‘ಶಕ್ತಿ’ ಸ್ಮಾರ್ಟ್‌ ಕಾರ್ಡ್‌ಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಜೂ.15ರಿಂದ ಅವಕಾಶ ನೀಡಲಾಗಿದೆ.
 6. ಶೇ.50 ರಷ್ಟು ಆಸನಗಳನ್ನು ಪುರುಷರಿಗೆ ಮೀಸಲಿಡಬೇಕು
  ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಸೌಲಭ್ಯ ಇರುವುದರಿಂದ ಶುಲ್ಕ ಪಾವತಿಸುವ ಪುರುಷರಿಗೆ ಶೇ.50 ರಷ್ಟು ಆಸನ ಮೀಸಲಿಡಲಾಗಿದೆ. ಹೀಗಾಗಿ, ಅಗತ್ಯ ಬಿದ್ದರೆ ಪುರುಷರಿಗೆ ಸೀಟ್‌ ಬಿಟ್ಟುಕೊಡಬೇಕು.
 7. ಉಚಿತವಿದ್ದರು ಟಿಕೆಟ್‌ ಪಡೆದುಕೊಳ್ಳುವುದು ಕಡ್ಡಾಯ
  ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿಯ ಪ್ರಯಾಣ ಸೌಲಭ್ಯ ಇದ್ದರೂ ಶೂನ್ಯ ಶುಲ್ಕ ನಮೂದಿಸಿದ ಬಸ್‌ ಟಿಕೆಟ್‌ ನೀಡಲಾಗುತ್ತದೆ. ಬಸ್‌ ಹತ್ತಿದ ಪ್ರತಿಯೊಬ್ಬ ಮಹಿಳೆಯರು ಈ ಟಿಕೆಟ್‌ ಹೊಂದಿರಬೇಕು. ಇಲ್ಲವಾದರೆ ತಪಾಸಣೆ ಸಂದರ್ಭದಲ್ಲಿ ದಂಡ ಕಟ್ಟಬೇಕಾಗುತ್ತದೆ.
 8. ಲಗೇಜ್‌ ಶುಲ್ಕ ಪಾವತಿಸಬೇಕು
  ಒಬ್ಬ ಪ್ರಯಾಣಿಕರಿಗೆ ಸಾರಿಗೆ ಬಸ್‌ಗಳಲ್ಲಿ 30 ಕೆ.ಜಿವರೆಗೂ ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ಲಗೇಜ್‌ ಸಾಗಿಸಲು ಅವಕಾಶವಿದೆ. ಅದರ ಮೇಲಿನ ಲಗೇಜ್‌ಗೆ ಶುಲ್ಕ ಪಾವತಿಸಬೇಕಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಕಾರಣಕ್ಕೆ ಲಗೇಜ್‌ ಉಚಿತವಲ್ಲ. 30 ಕೆ.ಜಿ ಮೇಲಿದ್ದರೆ ಶುಲ್ಕ ಕಟ್ಟಬೇಕು.
 9. ಉಚಿತ ಪ್ರಯಾಣವೆಂದು ಟಿಕೆಟ್‌ ಪಡೆದಕ್ಕಿಂತ ಹೆಚ್ಚು ಪ್ರಯಾಣ ಇಲ್ಲ
  ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯವಿದೆ ಎಂಬ ಕಾರಣಕ್ಕೆ ಟಿಕೆಟ್‌ ಪಡೆದುಕೊಂಡ ಸ್ಥಳಕ್ಕಿಂತ ಹೆಚ್ಚಿನ ದೂರ ಕ್ರಮಿಸುವಂತಿಲ್ಲ. ಒಂದು ವೇಳೆ ಟಿಕೆಟ್‌ ಪಡೆದ ಸ್ಥಳದಲ್ಲಿ ಬಸ್‌ ಇಳಿಯದೇ ಹೆಚ್ಚುವರಿ ದೂರು ತೆರಳಬೇಕಿದ್ದರೆ ಮತ್ತೆ ಟಿಕೆಟ್‌ ಕಡ್ಡಾಯವಾಗಿ ಪಡೆದುಕೊಳ್ಳಬೇಕು.

Leave a Reply

error: Content is protected !!