ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆಯ ಗ್ಯಾರಂಟಿಯಾದ ಗೃಹ ಲಕ್ಷ್ಮಿ ಯೋಜನೆಗೆ ಜು. 17ರಿಂದ ಚಾಲನೆ ದೊರಕಲಿದೆ. ಜು. 19ರಿಂದ ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತದೆ. ತೆರಿಗೆದಾರ ಮಹಿಳೆಯರು ಈ ಯೋಜನೆಗೆ ಅರ್ಹರಲ್ಲ. ಹಾಗೆಯೇ, ಅರ್ಜಿದಾರರ ಮಹಿಳೆಯ ಪತಿಯು ತರಿಗೆದಾರನಾಗಿದ್ದರೆ, ಜಿಎಸ್ ಟಿ ಪಾವತಿಸುತ್ತಿದ್ದರೆ ಅಂಥ ಮಹಿಳೆಯರಿಗೂ ಈ ಯೋಜನೆ ಅನ್ವಯವಾಗುವುದಿಲ್ಲ. ಹಾಗಾಗಿ, ಅರ್ಜಿ ಸಲ್ಲಿಸುವಾಗ ಪತಿಗೆ ಸಂಬಂಧಿಸಿದ ವಿವರಗಳನ್ನು ಕೇಳಲಾಗುತ್ತದೆ. ಆ ನಿಟ್ಟಿನಲ್ಲಿ ಯಾವ ವಿವರ ಸಲ್ಲಿಸಬೇಕು, ಒಂದೊಮ್ಮೆ ಪತಿಯು ತೆರಿಗೆದಾರನಾಗಿದ್ದು ಆತನಿಂದ ಅರ್ಜಿದಾರ ಮಹಿಳೆಯು ವಿಚ್ಛೇದನ ಪಡೆದಿದ್ದರೆ ಆಕೆ ಯಾವ ದಾಖಲೆ ಸಲ್ಲಿಸಬೇಕು, ಪತಿಯು ಇತ್ತೀಚೆಗಷ್ಟೇ ಮರಣ ಹೊಂದಿದ್ದರೆ ಆಕೆಯು ಯಾವ ದಾಖಲೆಯನ್ನು ಸಲ್ಲಿಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಸರ್ಕಾರದ ಈ ಯೋಜನೆಗೆ ನೀಡಿರುವ ಸಹಾಯವಾಣಿಯ ಸಿಬ್ಬಂದಿಯಿಂದಲೇ ಪಡೆದು ಅದನ್ನು ಇಲ್ಲಿ ವಿವರವಾಗಿ ಹೇಳಲಾಗಿದೆ.
ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸುವಾಗ ಪತಿಯ ಆದಾಯ ತೆರಿಗೆ ವಿವರಗಳು, ಅವರ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಗಳನ್ನು ಸಲ್ಲಿಸಬೇಕೇ ಎಂಬ ಗೊಂದಲ ಹಲವರಲ್ಲಿದೆ. ಏಕೆಂದರೆ, ಅರ್ಜಿದಾರರ ಪತಿಯು ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಅವರ ಅರ್ಜಿಯು ಮಾನ್ಯವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಇನ್ನು, ಪತಿಯಿಂದ ವಿಚ್ಛೇದನ ಪಡೆದಿರುವ ಮಹಿಳೆ, ಇತ್ತೀಚೆಗಷ್ಟೇ ಗಂಡನನ್ನು ಕಳೆದುಕೊಂಡಿರುವ ಮಹಿಳೆಯರು ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ವಿಚಾರಗಳು ಇಲ್ಲಿವೆ.
ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವಾಗ ಪತಿಗೆ ಸಂಬಂಧಿಸಿದ ಯಾವ ದಾಖಲೆಗಳನ್ನು ನೀಡಬೇಕು ಎಂಬ ಗೊಂದಲ ಹಲವರಲ್ಲಿದೆ. ಈ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ಈ ಯೋಜನೆಯ ಹೆಲ್ಪ್ ಲೈನ್ ಸಂಖ್ಯೆಯಾದ 1902 ಸಂಖ್ಯೆಗೆ ಕರೆ ಮಾಡಿದಾಗ ಅಲ್ಲಿನ ಸಿಬ್ಬಂದಿಯು ನೀಡಿದ ಮಾಹಿತಿಯನ್ನು ಆಧರಿಸಿ ಇಲ್ಲೊಂದಿಷ್ಟು ವಿವರಗಳನ್ನು ಹಂಚಿಕೊಳ್ಳಲಾಗಿದೆ.
ಮೊದಲು ಅರ್ಜಿಯಲ್ಲಿ ದೃಢೀಕರಣ ಮಾಡಬೇಕು
ಕೆಲ ದಿನಗಳ ಹಿಂದೆ ಗೃಹ ಲಕ್ಷ್ಮೀ ಅರ್ಜಿ ನಮೂನೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ 11 ಹಂತಗಳಿದ್ದು ಅದರಲ್ಲಿ ಅರ್ಜಿ ಸಲ್ಲಿಸುವ ಮಹಿಳೆಯು ತನ್ನ ಹೆಸರು, ಪತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಪಡಿತರ ಚೀಟಿಯ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಬೇಕು. ಕಡೆಯ ವಿಭಾಗದಲ್ಲಿ ತನ್ನ ಪತಿಯು ತೆರಿಗೆದಾರರಲ್ಲ ಎಂಬುದನ್ನು ಘೋಷಿಸಬೇಕಾಗುತ್ತದೆ. ಅಂದರೆ, ತಮ್ಮ ಪತಿ ತೆರಿಗೆದಾರರಲ್ಲ, ಜಿಎಸ್ ಟಿ ಪಾವತಿದಾರರಲ್ಲ ಎಂಬುದನ್ನು ಸ್ವಯಂ ಆಗಿ ಘೋಷಿಸಬೇಕು. ಈ ಸ್ವಯಂ ಘೋಷಣೆಯ ಕೆಳಗಡೆ ಇರುವ ಎಡಭಾಗದಲ್ಲಿ ಅರ್ಜಿ ಭರ್ತಿ ಮಾಡಿದ ದಿನಾಂಕ, ಸ್ಥಳವನ್ನು ನಮೂದಿಸಿ ಸಹಿ ಹಾಕಬೇಕು. ಸಹಿ ಹಾಕಲು ಗೊತ್ತಿಲ್ಲದವರಿಗೆ ಎಡಗೈ ಅಥವಾ ಬಲಗೈ ಹೆಬ್ಬೆಟ್ಟಿನ ಗುರುತು ಒತ್ತಬೇಕಿರುತ್ತದೆ.
ಪತಿಯ ಯಾವ ದಾಖಲೆಗಳನ್ನು ಸಲ್ಲಿಸಬೇಕು?
ಗೃಹ ಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸುವ ಮಹಿಳೆಯು ತನ್ನ ಪತಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಲ್ಲಿಸಿದರೆ ಸಾಕು ಎಂದು ಈ ಯೋಜನೆಯ ಕುಂದುಕೊರತೆ ವಿಭಾಗದ ಸಿಬ್ಬಂದಿಯು ತಿಳಿಸಿದ್ದಾರೆ. ಪತಿಯ ಆಧಾರ್ ಕಾರ್ಡ್ ಇದ್ದರೆ ಸಾಕು ಅರ್ಜಿ ಸಲ್ಲಿಕೆಯ ನಂತರ ಪತಿಯು ತೆರಿಗೆದಾರರೇ, ಅಲ್ಲವೇ ಅಥವಾ ಜಿಎಸ್ ಟಿ ಪಾವತಿದಾರರೇ, ಅಲ್ಲವೇ ಎಂಬುದನ್ನು ತಿಳಿದುಕೊಳ್ಳುತ್ತಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ, ಅರ್ಜಿಯನ್ನು ಸಲ್ಲಿಸುವಾಗ ಪತಿಯ ಪ್ಯಾನ್ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಸ್ಷಷ್ಟಪಡಿಸಿದ್ದಾರೆ.
ಮಹಿಳೆಯೇ ಆದಾಯ ತೆರಿಗೆದಾರಳಾಗಿದ್ದರೆ ಹೇಗೆ?
ಅರ್ಜಿ ಸಲ್ಲಿಸುವ ಮಹಿಳೆಯೇ ತೆರಿಗೆದಾರಳಾಗಿದ್ದರೆ ಅಥವಾ ಆಕೆಯೇ ಯಾವುದಾದರೂ ಉದ್ದಿಮೆಯನ್ನು ಹೊಂದಿದ್ದು ಅದಕ್ಕೆ ಜಿಎಸ್ ಟಿ ಪಾವತಿಸುತ್ತಿದ್ದರೆ, ಆ ಮಹಿಳೆಗೆ ಗೃಹ ಲಕ್ಷ್ಮಿ ಯೋಜನೆಯು ಸಿಗುವುದಿಲ್ಲ. ಅಷ್ಟೇ ಅಲ್ಲ, ಅರ್ಜಿದಾರ ಮಹಿಳೆ ಸರ್ಕಾರಿ ನೌಕರಿಯಲ್ಲಿದ್ದರೂ ಇದೇ ನಿಯಮ ಅನ್ವಯವಾಗುತ್ತದೆ. ಏಕೆಂದರೆ, ಈ ಯೋಜನೆಯು ಮಧ್ಯಮ, ಕೆಳ ಮಧ್ಯಮ ಹಾಗೂ ಬಡ ಮಹಿಳೆಯರ ಜೀವನೋಪಾಯಕ್ಕಾಗಿ ರೂಪಿಸಿರುವ ಯೋಜನೆಯಾದ್ದರಿಂದಾಗಿ ಅವರಿಗೆ ಮಾಸಿಕವಾಗಿ 2 ಸಾವಿರ ರೂ.ಗಳನ್ನು ನೀಡುವುದೇ ಪ್ರಮುಖ ಗುರಿಯಾಗಿದೆ. ಹಾಗಾಗಿ, ಆದಾಯ ತೆರಿಗೆದಾರ ಮಹಿಳೆಯರಿಗೆ ಈ ಯೋಜನೆಯಲ್ಲಿ ಆದ್ಯತೆಯಿಲ್ಲ. ಆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಪಾವತಿಸುವ ಮಹಿಳೆಯರನ್ನು, ಜಿಎಸ್ ಟಿ ಪಾವತಿಸುವ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರು ಎಂದು ಪರಿಗಣಿಸಲಾಗಿದೆ.
ಮಕ್ಕಳ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಬೇಕೇ?
ಇಲ್ಲ. ಅವುಗಳನ್ನು ಸಲ್ಲಿಸುವ ಅವಶ್ಯಕತೆಯಿಲ್ಲ. ಈ ಮೊದಲು ಅರ್ಜಿದಾರರ ಮಗಳು ಅಥವಾ ಮಗ ತೆರಿಗೆದಾರರಾಗಿದ್ದರೆ ಅವರನ್ನು ಯೋಜನೆಯ ವ್ಯಾಪ್ತಿಯಿಂದ ಆಚೆ ಇಡುವ ಬಗ್ಗೆ ಸರ್ಕಾರದಲ್ಲಿ ಚಿಂತನೆ ನಡೆಸಲಾಗಿತ್ತು. ಆದರೆ, ಈ ಯೋಜನೆಯು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಮಹಿಳೆಯರಿಗಾಗಿ ಜಾರಿ ಮಾಡುತ್ತಿರುವ ಗ್ಯಾರಂಟಿಯಾದ್ದರಿಂದ ಮಕ್ಕಳು ತೆರಿಗೆದಾರರಾಗಿದ್ದರೆ ಅಂಥವರನ್ನು ಯೋಜನೆಯಿಂದ ಕೈಬಿಡುವ ಪ್ರಸ್ತಾವನೆಯನ್ನೇ ಕೈಬಿಡಲಾಯಿತು.
ಪತಿ ಮೃತನಾಗಿದ್ದರೆ, ವಿಚ್ಛೇದನ ಪಡೆದಿದ್ದರೆ ಏನು ಮಾಡಬೇಕು?
ಯಾವುದೇ ಅರ್ಜಿದಾರರ ಪತಿಯು ಇತ್ತೀಚೆಗೆ ಮೃತರಾಗಿದ್ದು ಅವರು ಗೃಹ ಲಕ್ಷ್ಮಿ ಅರ್ಜಿಯನ್ನು ಸಲ್ಲಿಸುವಾಗ ತಮ್ಮ ದಾಖಲೆಯ ಜೊತೆಗೆ ಪತಿಯ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಪತಿಯ ಆಧಾರ್ ಕಾರ್ಡ್ ನ ಪ್ರತಿಯೊಂದನ್ನು ಸಲ್ಲಿಸಲು ಕೇಳಿದರೆ ಅದನ್ನೂ ಸಲ್ಲಿಸಬೇಕಾಗುತ್ತದೆ. ಇಲ್ಲಿ, ಎರಡು ವಿಚಾರಗಳು ಬರುತ್ತವೆ. ಪತಿಯು ಸರ್ಕಾರಿ ನೌಕರಿಯಲ್ಲಿದ್ದು ಅವರು ಮೃತಪಟ್ಟರೆ ಅವರ ಕೆಲಸ ಅನುಕಂಪದ ಆಧಾರದಲ್ಲಿ ಪತ್ನಿಗೆ ಸಿಗುವ ಹಾಗಿದ್ದರೆ ಅಂಥವರೂ ಸಹ ಅರ್ಜಿ ಸಲ್ಲಿಸಬಹುದು. ಪತಿಯು ಖಾಸಗಿ ನೌಕರಿಯಲ್ಲಿದ್ದು ಆತ ಮೃತಪಟ್ಟಿದ್ದರೆ ಅಂಥವರೂ ಸಹ ಅರ್ಜಿಯಲ್ಲು ಸಲ್ಲಿಸಬಹುದು.
ಆದರೆ, ಪತಿಯು ಬದುಕಿದ್ದು ಆತನೊಂದಿಗೆ ವಿಚ್ಛೇದನ ಪಡೆದಿದ್ದರೆ ಅಥವಾ ವಿಚ್ಛೇದನ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದರೂ ಸಹ ಅಂಥವರು ಅರ್ಜಿಯನ್ನು ಸಲ್ಲಿಸಬಹುದು.