ಮಹಿಳೆಯರೇ ರೆಡಿಯಾಗಿ ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಆರಂಭ; ದಾಖಲೆಗಳು, ಅರ್ಜಿ ಸಲ್ಲಿಕೆ ಸ್ಥಳ ಮಾಹಿತಿ ಇಲ್ಲಿದೆ

ಶೇರ್ ಮಾಡಿ

ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ‘ಗೃಹಲಕ್ಷ್ಮಿ’ ಯೋಜನೆಯಡಿ ನೋಂದಣಿ ಪ್ರಕ್ರಿಯೆಗೆ ಬುಧವಾರ ಚಾಲನೆ ಸಿಗಲಿದೆ. ಯೋಜನೆ ಅನುಷ್ಠಾನ ಸಂಬಂಧ ಅನುಸರಿಸಬೇಕಾದ ಕ್ರಮಗಳ ಕುರಿತು ಸರಕಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ನೀಡಲಾಗಿದೆ.

ಯೋಜನೆ ಜಾರಿ ಸಂಬಂಧ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೊ ಸಂವಾದದಲ್ಲಿನ ಚರ್ಚೆಯಂತೆ ಇಲಾಖಾ ನಿರ್ದೇಶಕರು ಯೋಜನೆ ಜಾರಿಗೆ ಕೆಳಕಂಡ ಕ್ರಮಗಳನ್ನು ಅನುಸರಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಯೋಜನೆಯ ಅರ್ಹ ಫಲಾನುಭವಿಧಿಗಳ ನೋಂದಣಿಗೆ ಗುರುತಿಸಲ್ಪಟ್ಟಿರುವ ಗ್ರಾಮ ಒನ್‌/ ಬೆಂಗಳೂರು ಒನ್‌/ ಕರ್ನಾಟಕ ಒನ್‌/ ಬಾಪೂಜಿ ಸೇವಾ ಕೇಂದ್ರ/ ನಗರ ಸ್ಥಳೀಯ ಆಡಳಿತ ಕಚೇರಿಯ ಕೇಂದ್ರಗಳಲ್ಲಿ ಮೇಲ್ವಿಚಾರಣೆ ನಿರ್ವಹಿಸಲು ಸರಕಾರಿ ಅಧಿಕಾರಿ/ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಒಬ್ಬ ಪೊಲೀಸ್‌ ಸಿಬ್ಬಂದಿ ನೇಮಿಸಲಾಗುತ್ತಿದೆ.

ನೋಂದಣಿ ಕೇಂದ್ರಗಳಲ್ಲಿ ವಿದ್ಯುತ್‌ ಕಡಿತ ಉಂಟಾದರೆ ನೋಂದಣಿ ಕಾರ್ಯಕ್ಕೆ ತೊಂದರೆಯಾಗದಂತೆ ಬ್ಯಾಟರಿ ಬ್ಯಾಕ್‌ಅಪ್‌, ಸುಸ್ಥಿತಿಯ ಪ್ರಿಂಟರ್‌ ವ್ಯವಸ್ಥೆಯಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲಿ ಸಹಾಯ ಕೇಂದ್ರ (ಹೆಲ್ಪ್‌ ಡೆಸ್ಕ್‌) ಸ್ಥಾಪಿಸುವುದು ಜಿಲ್ಲಾಉಸ್ತುವಾರಿ ಸಚಿವರಿಂದ ಪ್ರಜಾಪ್ರತಿನಿಧಿಗಳ ಪಟ್ಟಿ ಪಡೆದು ಅವರ ನೋಂದಣಿ ಮಾಡಿಸುವುದು. ತಾಲೂಕು ಮಟ್ಟದಲ್ಲಿಅವರಿಗೆ ತರಬೇತಿ ಒದಗಿಸುವುದು ಫಲಾನುಭವಿಗಳ ನೋಂದಣಿ ಕೇಂದ್ರಕ್ಕೆ ನಿಯೋಜಿಸಿದ ನೋಡಲ್‌ ಅಧಿಕಾರಿ ವಿವರವನ್ನು ಇ- ಆಡಳಿತ ಇಲಾಖೆ ಒದಗಿಸುವ ಲಿಂಕ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಸಚಿವರು ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಕಾರ್ಯಕ್ರಮ
ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಆದೇಶವನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಹಂಚಿಕೆ ಮಾಡಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಯೋಜನೆಯ ಲಾಂಛನ ಮತ್ತು ಪೋಸ್ಟರ್‌ ಅನಾವರಣಗೊಳಿಸಲಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ರಾಜೀವ್‌ ಚಂದ್ರಶೇಖರ್‌, ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ರಿಜ್ವಾನ್‌ ಅರ್ಷದ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಬೇಕಾಗಿರುವ ದಾಖಲೆಗಳು ಏನು?
ಪಡಿತರ ಚೀಟಿ ಸಂಖ್ಯೆ, ಪತಿ ಹಾಗೂ ಇಬ್ಬರೂ ವ್ಯಕ್ತಿಗಳ ಆಧಾರ್ ಕಾರ್ಡ್ ಪ್ರತಿ ನೀಡಬೇಕು.
ಆಧಾರ್ ಕಾರ್ಡ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಬೇಕಾದರೆ ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್ ಝೆರಾಕ್ಸ್ ಪ್ರತಿ ನೀಡಬೇಕು.
ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ತೆಗೆದುಕೊಂಡು ಬರಬೇಕು.

ಗೃಹಲಕ್ಷ್ಮೀ ನೋಂದಣಿ ಎಲ್ಲಿ?
ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಮನೆಯೊಡತಿಗೆ ಅವರು ನೀಡಿರುವ ಮೊಬೈಲ್ ಆಧರಿಸಿ ಅವರು ನೋಂದಣಿ ಮಾಡಬೇಕಾದ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರಗಳನ್ನು ಇ-ಆಡಳಿತ ಇಲಾಖೆ ಮೂಲಕ ತಿಳಿಸಲಾಗುವುದು. ಅದೇ ಸಂದೇಶದಲ್ಲಿ ಸೂಚಿಸಿದ ಸಮಯಕ್ಕೆ ಗ್ರಾಮಾಂತರ ಪ್ರದೇಶದವರು ನಿಗದಿತ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಪ್ರದೇಶದವರು ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಬಹುದು. ನೋಂದಣಿ ಮಾಡಿದ ಬಳಿಕ ಸ್ಥಳದಲ್ಲೇ ಮಂಜೂರಾತಿ ಪತ್ರವೂ ನೀಡಲಾಗುತ್ತದೆ. ಪ್ರಜಾಪ್ರತಿನಿಧಿ ಮೂಲಕ ನೋಂದಣಿ ಮಾಡಿಕೊಂಡರೆ ನಿಧಾನವಾಗಿ ಮನೆಗೆ ಮಂಜೂರಾತಿ ಪತ್ರ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಯೋಜನೆಯ ಪ್ರಮುಖ ಅಂಕಿ ಅಂಶಗಳು
ಅರ್ಹ ಫಲಾನುಭವಿಗಳು- 1.28 ಕೋಟಿ
ಪ್ರತಿ ವರ್ಷ ತಗಲುವ ವೆಚ್ಚ – 30,000 ಕೋಟಿ ರೂ.
2023 ವರ್ಷ ತಗಲುವ ವೆಚ್ಚ – 17,500 ಕೋಟಿ ರೂ.
ನೋಂದಣಿ ಶುಲ್ಕ – 12 ರೂ.

Leave a Reply

error: Content is protected !!