ನ.7ಕ್ಕೆ ನ್ಯಾಯ ಬೆಲೆ ಅಂಗಡಿ ಬಂದ್ ಗೆ ಕರೆ

ಶೇರ್ ಮಾಡಿ

ಅನ್ನಭಾಗ್ಯ ಯೋಜನೆಯಡಿ ಕಾರ್ಡ್‍ದಾರರಿಗೆ ಹಣ ಬದಲು ಅಕ್ಕಿ ನೀಡುವಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ಸರಕಾರಿ ಪಡಿತರ ವಿತರಕ ಸಂಘದ ನೇತೃತ್ವದಲ್ಲಿ ನ.7ಕ್ಕೆ ನ್ಯಾಯ ಬೆಲೆ ಅಂಗಡಿ ಬಂದ್ ಮಾಡಿ ಧರಣಿ ನಡೆಸಲಾಗುತ್ತಿದೆ.

ಗುರುವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ನ.7ಕ್ಕೆ ಬೃಹತ್ ಧರಣಿ ನಡೆಸಲಾಗುತ್ತಿದ್ದು, ರಾಜ್ಯದ ಎಲ್ಲ ಭಾಗಗಳಿಂದ ಪಡಿತರ ವಿತರಕರು ಪಾಲ್ಗೊಳ್ಳಿದ್ದು, ಅಂದು ಯಾವುದೇ ಚಟುವಟಿಕೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಸಮಸ್ಯೆಗಳ ಬಗೆಹರಿಸಲು ಹಲವು ಬಾರಿ ಆಹಾರ ಇಲಾಖೆ ಸಚಿವರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ ಜ್ವಲಂತವಾಗಿ ಕಾಡುತ್ತಿರುವ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್ ಉಚಿತವಾಗಿ 10 ಕೆಜಿ ಅಕ್ಕಿ ವಿತರಿಸುವುದಾಗಿ ಗ್ಯಾರಂಟಿ ಯೋಜನೆ ಘೋಷಿಸಿತ್ತು. ಅದರಂತೆ, ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರಕಾರ, ಅಕ್ಕಿ ಸಿಗುತ್ತಿಲ್ಲ ಎಂದ ಕಾರಣವೊಡ್ಡಿ ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಯನ್ನು ಜುಲೈಯಿಂದ ಜಾರಿಗೆ ತಂದಿದೆ. ಇದರಿಂದಾಗಿ ನಮಗೆ ಸಿಗಬೇಕಿದ್ದ ಕಮಿಷನ್ ಹಣವೂ ಖೋತಾವಾಯಿತು. ಹೀಗಾಗಿ, ಕಾರ್ಡ್‍ದಾರರಿಗೆ ಕಡ್ಡಾಯವಾಗಿ ಅಕ್ಕಿ ವಿತರಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅದೇ ರೀತಿ, ಆಹಾರಧಾನ್ಯ ವಿತರಣೆ ವೇಳೆ ಕಾರ್ಡ್‍ದಾರರಿಗೆ ಮುದ್ರಿತ ರಸೀದಿ ನೀಡುವಂತೆ ಹೊರಡಿಸಿರುವ ಆದೇಶವನ್ನು ತಕ್ಷಣ ಸರಕಾರ ವಾಪಸ್ ಪಡೆಯಬೇಕು. ಮಾಲಕರ ಆರ್ಥಿಕ ಪರಿಸ್ಥಿತಿ ತುಂಬ ಹದಗಟ್ಟಿದೆ. ಪಡಿತರ ವಿತರಣೆಗೆ ನೀಡಲಾಗುವ ಕಮಿಷನ್ ಹಣವೂ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಕೂಡಲೇ ಇದನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು.

Leave a Reply

error: Content is protected !!