ಕೊರೊನಾ ವೈರಸ್ ಉಪತಳಿ ವೇಗವಾಗಿ ಹರಡುತ್ತೆ ಎಚ್ಚರ!
– ನ್ಯೂ ಇಯರ್‌ಗೆ ಇಲ್ವಾ ಯಾವುದೇ ರೂಲ್ಸ್?
– ಜೆಎನ್.1 ಲಕ್ಷಣಗಳೇನು? ಹೇಗೆ ಹರಡುತ್ತೆ? ನಿಯಂತ್ರಣ ಹೇಗೆ?
ಚಳಿಗಾಲ ಮತ್ತೆ ಬಂದಿದೆ. ಹೊಸ ವರ್ಷವೂ ಬರುತ್ತಿದೆ. ಈ ಹೊತ್ತಿನಲ್ಲೇ ಕೆಲಕಾಲ ವಿರಾಮದ ಬಳಿಕ ಕೊರೊನಾ ವೈರಸ್‌ನ (Corona Virus) ಹೊಸ ಉಪತಳಿ ಜೆಎನ್.1 ವಕ್ಕರಿಸಿದ್ದು, ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಹೊಸ ವರುಷವನ್ನು ಹರುಷದಿಂದ ಸ್ವಾಗತಿಸಲು ಕಾಯುತ್ತಿದ್ದವರಲ್ಲಿ ನಿರಾಸೆ ಮಡುಗಟ್ಟಿದೆ. ಮತ್ತೆ ಕೊರೊನಾ ಆತಂಕದಲ್ಲೇ ದಿನ ದೂಡುವಂತಹ ಸ್ಥಿತಿ ನಿರ್ಮಾಣವಾಗಿದೆ.
2019 ರಲ್ಲಿ ಕಾಣಿಸಿಕೊಂಡ ಕೋವಿಡ್-19 (Covid-19) ರೂಪಾಂತರಗೊಳ್ಳುತ್ತಲೇ ಇದೆ. ಡೆಲ್ಟಾ, ಓಮಿಕ್ರಾನ್ ಕೊರೊನಾ ವೈರಸ್‌ನ ತಳಿಗಳು. ಇವುಗಳಲ್ಲಿ ಮತ್ತೆ ಹತ್ತು ಹಲವು ಉಪತಳಿಗಳು ಹುಟ್ಟಿಕೊಂಡಿವೆ. ಬಿಎ.2.86 ಓಮಿಕ್ರಾನ್‌ನ ಉಪತಳಿ. ಇದರ ಉಪತಳಿಯೇ ಜೆಎನ್.1. ಇದು ದೇಶ, ವಿದೇಶಗಳಲ್ಲಿ ವೇಗವಾಗಿ ಹರಡುತ್ತಿದ್ದು, ಜನರಲ್ಲಿ ಭೀತಿ ಹುಟ್ಟಿಸಿದೆ. ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟದಿಂದ ಬಳಲಿ ಬೆಂಡಾಗಿದ್ದ ದೇಶಗಳು ಮತ್ತೆ ಚಿಂತೆಯಲ್ಲಿ ಮುಳುಗಿವೆ. ಭಾರತದಲ್ಲಿ ಹೊಸ ತಳಿ ವೇಗವಾಗಿ ಹರಡುತ್ತಿದ್ದು, ಈಗಾಗಲೇ ರಾಜ್ಯಗಳಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ. ಹಾಗಾದರೆ, ಏನಿದು ಜೆಎನ್.1? ಇದು ಎಷ್ಟರ ಮಟ್ಟಿಗೆ ಅಪಾಯಕಾರಿ? ನಿಯಂತ್ರಣ ಹೇಗೆ? ಮುಂಜಾಗ್ರತಾ ಕ್ರಮಗಳೇನು?
ಏನಿದು ಜೆಎನ್.1?
ಬಿಎ.2.86 ಓಮಿಕ್ರಾನ್‌ನ ಒಂದು ಉಪತಳಿ. ಇದರ ಉಪತಳಿಯೇ ಜೆಎನ್.1 ಆಗಿದೆ. ಬಿಎ.2.86 ಹಾಗೂ ಜೆಎನ್.1 ಉಪತಳಿಗಳ ನಡುವೆ ಅಷ್ಟೇನು ವ್ಯತ್ಯಾಸವಿಲ್ಲ. ಸೋಂಕಿನ ಮುಳ್ಳು ಚಾಚಿಕೆಗಳಲ್ಲಿ ಸಣ್ಣದೊಂದು ಬದಲಾವಣೆ ಇದೆಯಷ್ಟೇ. ಹೊಸ ಉಪತಳಿ ಜೆಎನ್.1 ಬಹು ವೇಗವಾಗಿ ಹರಡುತ್ತದೆ. ಹೆಚ್ಚೇನು ಅಪಾಯಕಾರಿ ಅಲ್ಲ. ಆದರೆ ಎಚ್ಚರಿಕೆ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಮೊದಲು ಕಾಣಿಸಿಕೊಂಡಿದ್ದೆಲ್ಲಿ?
ಅಮೆರಿಕದಲ್ಲಿ ಸೆಪ್ಟೆಂಬರ್ ಹೊತ್ತಿಗೆ ಮೊದಲ ಬಾರಿಗೆ ಜೆಎನ್.1 ಉಪತಳಿ ಕಾಣಿಸಿಕೊಂಡಿತು. ಡಿಸೆಂಬರ್ ಮೊದಲ ವಾರದ ಹೊತ್ತಿಗೆ ಸೋಂಕಿತರ ಸಂಖ್ಯೆಯಲ್ಲಿ 15ರಿಂದ 29% ರಷ್ಟು ಏರಿಕೆಯಾಯಿತು ಎಂದು ಅಮೆರಿಕ ಆರೋಗ್ಯ ಸಂಸ್ಥೆ ತಿಳಿಸಿದೆ. ಚೀನಾ, ಸಿಂಗಾಪುರದಲ್ಲೂ ತೀವ್ರಗತಿಯಲ್ಲಿ ಹರಡುತ್ತಿದೆ. ಈ ದೇಶಗಳ ಆರೋಗ್ಯ ಸಚಿವಾಲಯಗಳು ಜನರಿಗೆ ಎಚ್ಚರಿಕೆಯ ಸೂಚನೆ ನೀಡಿವೆ. ಯುಕೆ, ಐಸ್‌ಲ್ಯಾಂಡ್, ಪೋರ್ಚುಗಲ್, ಸ್ಪೇನ್, ನೆದರ್ಲೆಂಡ್ಸ್ ದೇಶಗಳಲ್ಲೂ ಹೊಸ ಉಪತಳಿ ಹರಡುತ್ತಿರುವುದು ವರದಿಯಾಗಿದೆ.
ಭಾರತಕ್ಕೂ ಕಾಲಿಟ್ಟ ಹೊಸ ಉಪತಳಿ!
ಜೆಎನ್.1 ಉಪತಳಿ ಭಾರತಕ್ಕೂ ಕಾಲಿಟ್ಟಿದೆ. ಡಿಸೆಂಬರ್ 6 ರಂದು ಕೇರಳದಲ್ಲಿ 79 ವರ್ಷದ ವೃದ್ಧೆಯಲ್ಲಿ ಈ ಸೋಂಕು ಪತ್ತೆಯಾಯಿತು. ಜೆಎನ್.1 ಸೋಂಕಿಗೆ ಭಾರತದಲ್ಲಿ ಮೊದಲ ಬಲಿಯೂ ಆಗಿದೆ. ಈಗ ನೆರೆರಾಜ್ಯ ಕರ್ನಾಟಕದಲ್ಲೂ ಹೊಸ ಉಪತಳಿಯ ಸೋಂಕು ಕೆಲವರಲ್ಲಿ ಪತ್ತೆಯಾಗಿದೆ. ದೇಶದಲ್ಲಿ ಇದುವರೆಗೆ ಹೊಸ ಸೋಂಕಿನ 21 ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ 19, ಕೇರಳ ಹಾಗೂ ಮಹಾರಾಷ್ಟ್ರದಲ್ಲೂ ತಲಾ 1 ಪ್ರಕರಣ ದೃಢಪಟ್ಟಿದೆ.
ಕರ್ನಾಟಕದಲ್ಲಿ ಕೋವಿಡ್ ಸ್ಥಿತಿಗತಿ ಹೇಗಿದೆ?
ರಾಜ್ಯದ ತುಮಕೂರಿನ ಹನುಮಂತಪುರ ಬಡಾವಣೆಯ 66 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ ರೂಪಾಂತರಿ ತಳಿ ಜೆಎನ್.1 ದೃಢಪಟ್ಟಿದೆ. ಕರ್ನಾಟಕದಲ್ಲಿ ಬುಧವಾರ 3 ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ಹೊಸ ಸಬ್‌ವೇರಿಯಂಟ್ ಜೆಎನ್.1 ನಿಂದ ಸಾವು ಸಂಭವಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಗಮನಿಸಿದರೆ, ಗುರುವಾರ 24 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 105 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೋವಿಡ್‌ನಿಂದ 2 ಸಾವು
ರಾಜ್ಯದಲ್ಲಿ ಕೊರೊನಾ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 44 ವರ್ಷದ ವ್ಯಕ್ತಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದ 76 ವರ್ಷದ ಹಿರಿಯರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೋವಿಡ್ ಪರೀಕ್ಷೆಯಲ್ಲಿ ಇವರು ಸೋಂಕಿತರು ಎಂಬುದು ದೃಢಪಟ್ಟಿತ್ತು. ಇಬ್ಬರೂ ಕೋವಿಡ್ ಲಸಿಕೆ ಪಡೆದವರಾಗಿದ್ದರು.
60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ
ಕೋವಿಡ್ ಹೊಸ ತಳಿ ಜೆಎನ್.1 ವೇಗವಾಗಿ ಹರಡುತ್ತಿದ್ದು, ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವು ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. 60 ವರ್ಷ ಮೇಲ್ಪಟ್ಟವರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ. ಸ್ವಚ್ಛತೆ, ಸಾಮಾಜಿಕ ಅಂತರದ ಬಗ್ಗೆಯೂ ಸಲಹೆ ನೀಡಲಾಗಿದೆ. ಕೊರೊನಾ ಪರೀಕ್ಷೆಗಳ ಸಂಖ್ಯೆ ಹೆಚ್ಚಳಕ್ಕೆ ಆರೋಗ್ಯ ಇಲಾಖೆ ಆದೇಶಿಸಿದೆ. ಅಲರ್ಟ್ ಆಗಿರುವಂತೆ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ. ಕೋವಿಡ್ ಸಂಬಂಧ ಅಧಿಕಾರಿಗಳೊಂದಿಗೆ ಸಭೆಗಳನ್ನು ಸರ್ಕಾರ ನಡೆಸುತ್ತಿದೆ.
ಇರಲಿ ಎಚ್ಚರ!
ಕೊರೊನಾ ವೈರಸ್‌ನ ಹೊಸ ಉಪತಳಿ ಮೊದಲು ಕಾಣಿಸಿಕೊಂಡಿದ್ದು ಅಮೆರಿಕದಲ್ಲಿ. ನಂತರ ಚೀನಾದಲ್ಲೂ ಹರಡಿದೆ. ಅಲ್ಲಿಂದ ಸಿಂಗಾಪುರದಲ್ಲೂ ಸಹ ಕಾಣಿಸಿಕೊಂಡಿದೆ. ಅಲ್ಲಿಂದ ಭಾರತಕ್ಕೆ ಮರಳಿದವರ ಪೈಕಿ ದೇಶದ ವಿವಿಧ ಭಾಗಗಳ ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ದೇಶದಲ್ಲೂ ಸೋಂಕು ಹರಡುತ್ತಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಈ ಸಂದರ್ಭದಲ್ಲಿ ಸೋಂಕು ಹರಡುವ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಚಳಿಗಾಲದ ವಾತಾವರಣ ಸಹ ಸೋಂಕಿಗೆ ಇನ್ನಷ್ಟು ಬಲ ತುಂಬಬಹುದು. ಇದನ್ನು ನಿಯಂತ್ರಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಸಹ ಎಚ್ಚರಿಕೆ ವಹಿಸಬೇಕು. ಹೊಸ ಸೋಂಕಿನ ಬಗ್ಗೆ ಯಾವುದೇ ಆತಂಕ ಬೇಡ.
ರೋಗ ಲಕ್ಷಣಗಳೇನು?
ತೀವ್ರ ಜ್ವರ
ಒಣ ಕೆಮ್ಮು
ಗಂಟಲು ಕೆರೆತ
ಉಸಿರಾಟಕ್ಕೆ ತೊಂದರೆ
ಹೇಗೆ ಹರಡುತ್ತದೆ?
ಸೀನಿದಾಗ
ವ್ಯಕ್ತಿ-ವ್ಯಕ್ತಿ ಸಂಪರ್ಕ
ಸೋಂಕಿತ ವ್ಯಕ್ತಿಗೆ ತಗುಲಿದ ವಸ್ತು
ಗುಂಪಾಗಿ ಸೇರುವುದು
ತಡೆಯುವುದು ಹೇಗೆ?
ಪದೇ ಪದೇ ಕೈ ತೊಳೆಯುವುದು
ಮಾಸ್ಕ್ ಧರಿಸುವುದು
ಸೋಂಕಿತರಿಂದ ಅಂತರ ಕಾಯ್ದುಕೊಳ್ಳುವುದು
ಸೀನುವಾಗ ಕೈಯನ್ನು ಅಡ್ಡಲಾಗಿ ಹಿಡಿಯುವುದು