ನಾಡಿಗೆ ಲಗ್ಗೆ ಇಟ್ಟಿದ್ದ ಕಾಡಾನೆ ಗುಂಪಿನಿಂದ ಆಂದಾಜು ಎರಡು ವರ್ಷ ಪ್ರಾಯದ ಮರಿಯಾನೆ ಬೇರ್ಪಟ್ಟ ಘಟನೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಸಂಭವಿಸಿದೆ.
ಮಂಡೆಕೋಲು ಭಾಗದಲ್ಲಿ ಹಲವು ಸಮಯಗಳಿಂದ ಕಾಡಾನೆ ಹಿಂಡು ಕೃಷಿ ತೊಟಗಳಿಗೆ ಲಗ್ಗೆ ಇಟ್ಟು ಹಾನಿ ಮಾಡುತ್ತಿತ್ತು. ಗುರುವಾರ ರಾತ್ರಿ ಕೂಡ ಇಲ್ಲಿನ ಕನ್ಯಾನ ಭಾಗಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆ ಹಿಂಡು ಬಳಿಕ ಆಲ್ಲಿಂದ ತೆರಳಿದೆ. ಅದರೆ ಗುಂಪಿನಲ್ಲಿದ್ದ ಮರಿಯಾನೆ ಮಾತ್ರ ಅಲ್ಲಿಯೇ ಬಾಕಿಯಾಗಿರುವುದು ಬೆಳಕಿಗೆ ಬಂದಿತು.
ಬೆಳಗ್ಗೆ ಮರಿಯಾನೆ ಕನ್ಯಾನ ರಾಜಶೇಖರ ಭಟ್ ಅವರ ಜಾಗದಲ್ಲಿ ಕಂಡುಬಂದಿದೆ. ಮರಿಯಾನೆ ಬೇರ್ಪಟ್ಟ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಆರಣ್ಯ ಇಲಾಖೆಯ ಅಧಿಕಾರಿಗಳು ಮರಿಯಾನೆಯನ್ನು ಹಗ್ಗದಲ್ಲಿ ಕಟ್ಟಿ ಇಲಾಖೆಯ ನಿಯಂತ್ರಣ ಶಿಬಿರದಲ್ಲಿ ಇರಿಸಿದ್ದಾರೆ.
ಗುಂಪಿಗೆ ಸೇರಿಸಲು ಪ್ರಯತ್ನ
ಗುಂಪಿನಿಂದ ಹಾಗೂ ತಾಯಿ ಆನೆಯಿಂದ ಬೇರ್ಪಟ್ಟಿರುವ ಮರಿಯಾನೆ ಕಟ್ಟಿ ಹಾಕಿರುವ ಸ್ಥಳದಲ್ಲಿ ಆಚೀಚೆ ಓಡಾಡುತ್ತಿದೆ. ಅಧಿಕಾರಿಗಳು ಆನೆ ಹಿಂಡನ್ನು ಪತ್ತೆ ಹಚ್ಚಿ ಅದರ ಜತೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ವನ್ಯಜೀವಿ ವಿಭಾಗದ ಚಿಕಿತ್ಸಾ ತಜ್ಞ ಡಾ| ಯಶಸ್ವಿ, ಸುಳ್ಯ ಪಶು ವ್ಯದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ| ನಿತಿನ್ ಪ್ರಭು ಮತ್ತಿತರರು ಆನೆ ಮರಿಯನ್ನು ಆರೈಕೆ ಮಾಡುತ್ತಿದ್ದಾರೆ. ಸುಳ್ಯ ಎಸಿಎಫ್ ಪ್ರವೀಣ್ ಶೆಟ್ಟಿ, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೆರವಾಗಿದ್ದರು.