ಬೆಳ್ತಂಗಡಿ: ರಾಜ್ಯೋತ್ಸವ ಹಬ್ಬದ ಸ್ವರೂಪವಾಗಿದೆ. ಭಾಷೆ ನಡವಳಿಕೆ, ಆಲೋಚನೆ ಕ್ರಮವನ್ನು ನಿಯಂತ್ರಿಸುತ್ತದೆ. ಹಾಗಾಗಿ ಕನ್ನಡ ಭಾಷೆ ಉಳಿಯಲು ಬಲಿಷ್ಠ ಸಾವಿದಾನಿಕ ವ್ಯವಸ್ಥೆ ಬೇಕಾಗುತ್ತದೆ ಎಂದು ಪ್ರಧಾನ ಭಾಷಣಕಾರ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಶಿಕ್ಷಕ ಅರವಿಂದ ಚೊಕ್ಕಾಡಿ ಅಭಿಪ್ರಾಯ ಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬೆಳ್ತಂಗಡಿ ತಾಲೂಕು ಆಡಳಿತ ವತಿಯಿಂದ ನ.1 ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಬಳಿಕ ಪ್ರ‘ನ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು. ಕನ್ನಡವನ್ನು ಬಳಸುವುದಕ್ಕಿಂತ ಹೆಚ್ಚು ಬೆಳೆಸಲು ಕನ್ನಡ ಮಾಧ್ಯಮಗಳ ಸಬಲೀಕರಣವಾಗಬೇಕು. ಪೂರ್ಣ ಪ್ರಮಾಣದಲ್ಲಿ ಶಿಕ್ಷಕರಿರಬೇಕು. ಅವರನ್ನು ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಲು ಬಿಡಬೇಕು. ರಾಜ್ಯೋತ್ಸವದ ಈ ಸಮಯದಲ್ಲಿ ಕನ್ನಡವನ್ನು ಸಹಭಾಷೆಗಳ ಮೂಲಕ ಅಸ್ತಿತ್ವಕ್ಕೆ ತರಲು ಆರ್ಥಿಕ ಚೈತನ್ಯ ನೀಡಿದರೆ ಕನ್ನಡ ತನ್ನಿಂದ ತಾನಾಗಿ ಬೆಳೆಯಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು. ತಾಲೂಕು ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಯದುಪತಿ ಗೌಡ ಮಾತನಾಡಿ, ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಸಮಯದಲ್ಲಿ ಕನ್ನಡವನ್ನು ಆಂಗ್ಲ ಮಾಧ್ಯಮ ಶಾಲೆಯಾಗಿ ಪರಿವರ್ತಿಸಲಾಗುತ್ತಿದೆ. ಹಾಗಾದಾಗ ಕನ್ನಡ ಸಂಸ್ಕೃತಿ ಹೇಗೆ ಉಳಿಯಲು ಸಾಧ್ಯ ಕನ್ನಡ ಭಾಷೆಯು ಅದರ ಸಂಸ್ಕೃತಿಯ ಉತ್ಪನ್ನವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಧ್ವಜಾರೋಹಣಗೈದು ರಾಜ್ಯೋತ್ಸವದ ಶುಭಾಶಯ ಕೋರಿದರು.
ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳುಪುಳೆ, ಅಬಕಾರಿ ಉಪನಿರೀಕ್ಷಕ ಸಯ್ಯದ್ ಶಬೀರ್, ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್ ಪಿ.ಎಸ್.,ತೋಟಗಾರಿಕೆ ಇಲಾಖೆ ಹಿ.ಸ.ನಿ ಚಂದ್ರಶೇಖರ್ ಕೆ.ಎಸ್., ವಲಯ ಅರಣ್ಯಾಧಿಕಾರಿ ತ್ಯಾಗರಾಜ ಟಿ.ಎನ್., ಸಹಕಾರ ಅಭಿವೃದ್ಧಿ ಅಽಕಾರಿ ಬಿ.ವಿ.ಪ್ರತಿಮಾ, ಸಹಿತ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ಎಂ., ಡಾ| ಅರ್ಷಿಯಾ ಕಾರ್ಯಕ್ರಮ ನಿರೂಪಿಸಿದರು. ಪಥಸಂಚಲನ, ಗೌರವ ವಂದನೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬೆಳ್ತಂಗಡಿ ಪ.ಪಂ. ವ್ಯಾಪ್ತಿಯ ವಿವಿಧ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನಗೊಂಡಿತು. ಇದಕ್ಕೂ ಮುನ್ನ ಮಾರಿಗುಡಿ ಮೈದಾನದಿಂದ ತಾಲೂಕು ಆಡಳಿತ ಸೌಧದ ವರೆಗೆ ಮೆರವಣಿಗೆ ನಡೆಸಿದರು.