ಡಿ.17ರಂದು ಇತಿಹಾಸ ಪ್ರಸಿದ್ಧ ಕೊಕ್ಕಡ ಕೋರಿ ಜಾತ್ರೆ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೊಕ್ಕಡ ಕೋರಿ ಜಾತ್ರೆ, ಉತ್ಸವಾದಿಗಳೊಂದಿಗೆ ಡಿ.17ರಂದು ಕೊಕ್ಕಡ ಕೋರಿ ನಡೆಯಲಿದೆ.

ಕೊಕ್ಕಡ ಕೋರಿ ಜಾತ್ರೆಯು ಮಣ್ಣು ಹಾಗೂ ಮನುಷ್ಯನ ಕೃಷಿ ಕಾಯಕಕ್ಕಿರುವ ನಂಟನ್ನು ಬಿಂಬಿಸುತ್ತದೆ. ದೇವರ ಗದ್ದೆಯನ್ನು ಮೊದಲು ಉಳುಮೆ ಮಾಡಿ ಹದ ಮಾಡಿಕೊಳ್ಳಲಾಗುತ್ತದೆ. ಶ್ರೀ ವೈದ್ಯನಾಥೇಶ್ವರ ಹಾಗೂ ವಿಷ್ಣುಮೂರ್ತಿ ದೇವರ ಸನ್ನಿಧಾನಕ್ಕೆ ಆಗಮಿಸಿ, ಪರಿವಾರದವರ ಉಪಸ್ಥಿತಿಯಲ್ಲಿ ಜಾತ್ರೆ ನಡೆಯುತ್ತದೆ.

ಕೊಕ್ಕಡ ಕೋರಿ ಇತಿಹಾಸ:
ಹಿಂದಿನ ಕಾಲದಿಂದ ಜಾತ್ರೆಗೆ ಒಂದು ತಿಂಗಳ ಮೊದಲು ಕೊಕ್ಕಡ ಸೀಮೆಯ ಪ್ರತಿ ಮನೆಗೂ ನಲಿಕೆಯವರು ಕೊರಗ ಭೂತದ ವೇಷ ತೊಟ್ಟು ತೆರಳಿ, ಜಾತ್ರೆಗೆ ಆಹ್ವಾನಿಸುತ್ತಾರೆ. ಕೊರಗ ವೇಷದ ಜತೆಗೆ ಡೋಲು ಬಾರಿಸಿಕೊಂಡು ಬೇರೆಯೇ ಒಂದು ತಂಡ ಊರಿಡೀ ತಿರುಗುತ್ತದೆ. ಗದ್ದೆ ಕೋರುವ ಸಲುವಾಗಿ ಜಾನುವಾರುಗಳ ಸಮೇತ ಆಗಮಿಸುವಂತೆ ಬಿನ್ನವಿಸುತ್ತಾರೆ.
ಜಾತ್ರೆಯ ಮುನ್ನಾದಿನ ಸಾಯಂಕಾಲ ಕಂಬಳದ ಗದ್ದೆಗೆ ಗುತ್ತು, ದೇವಸ್ಥಾನದ ಒಕ್ಕಲಿನವರು, ನಲ್ಕೆಯವರು ಗದ್ದೆಗೆ ತೆರಳಿ, ಹಾಲೆರೆಯುತ್ತಾರೆ. ಮಲೆಕುಡಿಯ ಜನಾಂಗದವರು ಗದ್ದೆಯ ಸುತ್ತ ಕೋಲ್ತಿರಿ ಹಚ್ಚಿ ಅಲಂಕರಿಸುತ್ತಾರೆ. ಮರುದಿನ ಜಾತ್ರೆಯ ಬೆಳಗ್ಗೆ ಗುತ್ತಿನ ಮನೆಯಿಂದ ಅಲಂಕರಿಸಿದ ಹೋರಿ ಹಾಗೂ ಕೋಣಗಳ ಜತೆಗೆ ಪ್ರತಿ ಊರಿನಿಂದ ಹರಕೆ ಹೇಳಿ ಬಂದ ಜಾನುವಾರುಗಳನ್ನು ದೇವಸ್ಥಾನಕ್ಕೆ ಕರೆ ತಂದು ಅನಂತರ ದೇವರ ಗದ್ದೆಗೆ ವಾದ್ಯಘೋಷದೊಂದಿಗೆ ಬರಮಾಡಿಕೊಳ್ಳುತ್ತಾರೆ. ಗುತ್ತಿನ ಹೋರಿಗಳನ್ನು ಮೊದಲು ಇಳಿಸಿ ಬಳಿಕ ಇತರ ಜಾನುವಾರುಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಓಡಿಸುತ್ತಾರೆ. ಅನಾರೋಗ್ಯದ ಕಾರಣದಿಂದ ಆರೋಗ್ಯಕ್ಕಾಗಿ ಹರಕೆ ಹೇಳಿಕೊಂಡ ಮಂದಿ ಸೊಪ್ಪಿನ ಕಟ್ಟನ್ನು ತಲೆಯಲ್ಲಿ ಹೊತ್ತು ಗದ್ದೆಗೆ ಒಂದು ಸುತ್ತು ಬಂದು ಸೊಪ್ಪನ್ನು ಗದ್ದೆಗೆ ಹಾಕಿ ಗದ್ದೆಯ ನೀರನ್ನು ತೀರ್ಥವಾಗಿ ಸೇವಿಸಿ ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ.

ಗದ್ದೆಗೆ ದೇವರ ಮೆರವಣಿ:
ನಾಗಬ್ರಹ್ಮ ದೈವಗಳು ಗದ್ದೆಗೆ ಒಂದು ಸುತ್ತು ಹಾಕಿ ಹಾಕಿದ ಬಳಿಕ ಸಂಜೆ ದೇವಸ್ಥಾನದಿಂದ ಶ್ರೀ ವೈದ್ಯನಾಥೇಶ್ವರ ಹಾಗೂ ವಿಷ್ಣುಮೂರ್ತಿ ಬಲಿ ಸೇವೆ ನಡೆಸಿ, ದೇವರ ಗದ್ದೆಗೆ ದೇವರ ಮೂರ್ತಿಗಳನ್ನು ಭಕ್ತರ ಮೆರವಣಿಗೆಯೊಂದಿಗೆ ದೇವರು ಕೋರಿ ಗದ್ದೆಯ ಮಜಲಿನಲ್ಲಿರುವ ಕಟ್ಟೆಯಲ್ಲಿ ದೇವರು ಪ್ರತಿಷ್ಠಾಪನೆಯಾದ ಮೇಲೆ ಗದ್ದೆಯ ಮಧ್ಯಭಾಗದಲ್ಲಿ ನಾಗ ಬ್ರಹ್ಮನ ಕುರುಹಾಗಿ ಹೂವಿನಿಂದ ಅಲಂಕರಿಸಿದ ಎತ್ತರದ ತೇರನ್ನು (ಪೂಕರೆ) ನಿಲ್ಲಿಸಿ ದೇವರಿಗೆ ಪೂಜೆ ನಡೆಯುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ಸೇವೆ, ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯುತ್ತದೆ.

ಕೋಳಿ ಅಂಕ:
ಕೋರಿ ಜಾತ್ರೆ ನಡೆದ ಮರುದಿನ ಮಜಲಿನಲ್ಲಿರುವ ಪರಿವಾರ ದೈವಗಳ ಪ್ರೀತ್ಯರ್ಥ ಕೋಳಿ ಅಂಕ ನಡೆಯುತ್ತದೆ. ಈ ವೇಳೆ ನೆಲಕ್ಕೆ ಬಿದ್ದ ರಕ್ತದ ತರ್ಪಣ ದೈವಗಳಿಗೆ ಸಲ್ಲುತ್ತದೆ ಎನ್ನುವುದು ನಂಬಿಕೆ. ದೇವಸ್ಥಾನ, ಬೆಳೆ ಹಾಗೂ ಆರೋಗ್ಯ, ಗ್ರಾಮದ ರಕ್ಷಣೆ, ಸಮೃದ್ಧ ಮಳೆ ಈ ದೈವಗಳ ಹೊಣೆ. ಹೀಗಾಗಿ, ಹಿಂದಿನ ಕಾಲದಿಂದ ಸಂಪ್ರದಾಯ ಪಾಲಿಸುತ್ತಾರೆ.

ಆರಂಭದಲ್ಲಿ ದೇವಸ್ಥಾನದ ಎದುರಿನ ಬದಿಯಲ್ಲಿ ಇರುವ ಮಡ್ಯೋಳ ಗುಂಡಿಯ ಸಣ್ಣ ಗದ್ದೆಯಲ್ಲೇ ಕೋರಿ ಜಾತ್ರೆ ನಡೆಯುತ್ತಿತ್ತು. ಪಕ್ಕದಲ್ಲೇ ತಾಳೆ ಮರದಲ್ಲಿ ಮೂರ್ತೆ ಮಾಡುತ್ತಿದ್ದ ವ್ಯಕ್ತಿ, ದೇವರು ತನ್ನ ವಿಶಾಲ ಗದ್ದೆಗೆ ಬಂದಿದ್ದರೆ ಒಳ್ಳೆಯದಿತ್ತು ಎಂದುಕೊಂಡನಂತೆ. ಆತ ಮೂರ್ತೆ ಕೆಲಸ ಮುಗಿಸಿ ಶೇಂದಿ ಬಿಂದಿಗೆಯನ್ನು ತಲೆಗಿಟ್ಟು ಭಂಡಾರಿ ಮಜಲು(ಕೋರಿ ಗದ್ದೆ) ಸಮೀಪ ಬರುವ ಹೊತ್ತಿಗೆ ವಾದ್ಯಘೋಷ ಕೇಳಿ ಬಂತು. ತಿರುಗಿ ನೋಡಿದರೆ, ದೇವರೇ ಪರಿಹಾರ ಸಮೇತ ಬರುತ್ತಿದ್ದರಂತೆ. ಗಾಬರಿಯಿಂದ ಓಡುವಾಗ ತಲೆಯ ಮೇಲಿದ್ದ ಶೇಂದಿ ಚೆಲ್ಲಿದ್ದರಿಂದ ದೇವರಿಗೆ ಮೈಲಿ ಆಗಬಾರದೆಂದು ಮಡಿವಾಳರು ಹಾಸಿದ ಶುಭ್ರ ಬಿಳಿ ಬಟ್ಟೆಯ ಮೇಲೆ ದೇವರು ನಡೆದು ಬಂದು ಕಟ್ಟೆಯ ಮೇಲೆ ಕುಳಿತರಂತೆ. ಈಗಲೂ ದೇವರ ಮೆರವಣಿಗೆ ದಾರಿಯಲ್ಲಿ ಮಡಿವಾಳ ಜನಾಂಗದವರು ಬಿಳಿ ಬಟ್ಟೆ ಹಾಸುವ ಪದ್ಧತಿ ಇದೆ.

ಪ್ರತಿ ವರ್ಷ ಡಿಸೆಂಬರ್ 16ರಂದೇ ನಡೆಯುವ ಕೊಕ್ಕಡ ಕೋರಿ ಜಾತ್ರೆ ಆ ದಿನಾಂಕ ದಂದು ಸೋಮವಾರ ಬಂದಲ್ಲಿ ಮರುದಿನ ಮಂಗಳವಾರ ನಡೆಯುವುದು ರೂಢಿ. ಈ ಕಾರಣಕ್ಕಾಗಿ ಈ ಬಾರಿಯೂ ಮಂಗಳವಾರ ಡಿ.17ರಂದು ಪ್ರಸಿದ್ದ ಕೋರಿ ಜಾತ್ರೆ ನಡೆಯಲಿದೆ.

ಸುಮಾರು 8 ಜನಾಂಗದವರು ಒಟ್ಟಾಗಿ ಸೇರಿ ಕೋರಿ ಜಾತ್ರೆಗೆ ಬೇಕಾದಂತಹ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಭಂಡಾರಿ ಜನಾಂಗದವರದ ನಾವು ಪೂಕರೆಗೆ ಬೇಕಾದಂತಹ ಶೃಂಗಾರವನ್ನು ಮಾಡುತ್ತೇವೆ. ಗದ್ದೆಗೆ ಎತ್ತು ಹಾಗೂ ಕೋಣಗಳನ್ನು ಇಳಿಸುವ ಮೊದಲು ನಮ್ಮ ಗುತ್ತಿನ ಮನೆಗೆ ತರಲಾಗುತ್ತದೆ. ಆಗಮಿಸಿದಂತಹ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುತ್ತೇವೆ.

-ವಿಠಲ ಭಂಡಾರಿ, ಗುತ್ತಿನ ಮನೆಯ ಹಿರಿಯರು, ಕೋರಿಗದ್ದೆ

45 ರಷ್ಟು ಭಂಡಾರಿ ಮನೆತನದವರು ಒಟ್ಟಾಗಿ ಗುತ್ತಿನ ಮನೆ ಕೋರಿ ಗದ್ದೆ ಎಂಬಲ್ಲಿ ಸೇರಿಕೊಂಡು ಕೊಕ್ಕಡ ಕೋರಿ ಜಾತ್ರೆಗೆ ಬೇಕಾದಂತಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇವೆ. ಇದು ಹಿಂದಿನ ಕಾಲದಿಂದ ಬಂದಂತಹ ಪದ್ಧತಿಯಾಗಿದೆ.

-ವಸಂತಿ ಸುಂದರ ಭಂಡಾರಿ, ಶಬರಾಡಿ, ಸಮಿತಿಯ ಕಾರ್ಯದರ್ಶಿ

  •  

Leave a Reply

error: Content is protected !!