

ಬೆಳ್ತಂಗಡಿ: ತಾಲೂಕಿನಲ್ಲಿ ನಕ್ಸಲ್ ಚಟುವಟಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕೇರಳದ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಇಬ್ಬರು ನಕ್ಸಲ್ ನಾಯಕರುಗಳ ಪೊಲೀಸ್ ಕಸ್ಟಡಿಯ ಅವಧಿ ಮುಗಿದ ಹಿನ್ನಲೆಯಲ್ಲಿ ಅವರನ್ನು ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಲಯದ ಆದೇಶದಂತೆ ಕೇರಳದ ಜೈಲಿಗೆ ಮರಳಿ ಕಳುಹಿಸಲಾಗಿದೆ.

8-11-2021 ರಂದು ಕೇರಳ ರಾಜ್ಯದ ಪೊಲೀಸರು ನಕ್ಸಲ್ ನಾಯಕರಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ ನಕ್ಸಲ್ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ(50) ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಿವಾಸಿ ಸಾವಿತ್ರಿ(36)ಯನ್ನು ಬಂಧಿಸಿದ್ದರು. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಬಿ.ಜಿ.ಕೃಷ್ಣಮೂರ್ತಿ ವಿರುದ್ಧ 53 ಪ್ರಕರಣ, ಸಾವಿತ್ರಿ ವಿರುದ್ಧ 22 ಪ್ರಕರಣ ತನಿಖೆಯಲ್ಲಿದೆ.
2012-2013 ರಲ್ಲಿ ನಡೆದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಮಚಂದ್ರ ಭಟ್ ಮನೆಯ ಅಂಗಳದಲ್ಲಿದ್ದ ಕಾರು, ಬೈಕ್ ಗೆ ಬೆಂಕಿ ಹಚ್ಚಿದ ಪ್ರಕರಣ,ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಯತಡ್ಕ ಗ್ರಾಮದಲ್ಲಿ ನಕ್ಸಲ್ ಬೆಂಬಲಿತ ಬ್ಯಾನರ್ ಹಾಕಿದ ಪ್ರಕರಣ,ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲವಂತಿಗೆ ಗ್ರಾಮದಲ್ಲಿ ಭಾರಿ ಸ್ಪೋಟಕ ಪತ್ತೆ ಪ್ರಕರಣದಲ್ಲಿ ಇವರಿಬ್ಬರು ಆರೋಪಿಗಳಾಗಿದ್ದು ಬೆಳ್ತಂಗಡಿ ಪೊಲೀಸರು ಇಬ್ಬರನ್ನು ಬಾಡಿ ವಾರೆಂಟ್ ಮೂಲಕ ಕೇರಳ ರಾಜ್ಯದ ತ್ರಿಶೂರ್ ಜೈಲಿನಿಂದ ಏ.7 ರಂದು ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ನಡೆಸಿದ್ದರು. ಏ.11ರಂದು ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ.ಟಿ.ಎಸ್ ಮುಂದೆ ಹಾಜರುಪಡಿಸಿದ್ದು. ನ್ಯಾಯಾಲಯ ವಾಪಸ್ ಕೇರಳದ ತ್ರಿಶೂರ್ ಜೈಲಿಗೆ ಕಳುಹಿಸಲು ಆದೇಶ ಮಾಡಿದ್ದು ಅದರಂತೆ ಇಬ್ಬರು ನಕ್ಸಲರನ್ನು ಬೆಳ್ತಂಗಡಿ ಪೊಲೀಸರು ಬಿಗಿ ಭದ್ರತೆಯಲ್ಲಿ ಕೇರಳದ ಜೈಲಿಗೆ ಕಳುಹಿಸಲಾಗಿದೆ









