ಮುಂಡಾಜೆ: ಸಸ್ಯ ವೈವಿಧ್ಯ ದಾಖಲಾತಿ ಲೋಕಾರ್ಪಣೆ

ಶೇರ್ ಮಾಡಿ

ನೇಸರ ಜೂ.28: ಮುಂದಿನ ಪೀಳಿಗೆಗೆ ಪ್ರಯೋಜನ ನೀಡಲು ಸಸ್ಯಗಳನ್ನು ಗುರುತಿಸಿ, ಸಂರಕ್ಷಿಸಿ ಅವುಗಳ ಉಪಯೋಗದ ಮಾಹಿತಿ ಸಂಗ್ರಹದ ಜತೆ ಅರಣ್ಯವನ್ನು ಬೆಳೆಸಬೇಕಾದ ಅಗತ್ಯವಿದೆ. ಮುಂಡಾಜೆಯಲ್ಲಿ ಆರಂಭಗೊಂಡಿರುವ ಸಸ್ಯ ವೈವಿಧ್ಯ ದಾಖಲಾತಿ ಮಾದರಿ ಯೋಜನೆಯಾಗಿದ್ದು ಕಾರ್ಯಕ್ರಮ ತಾಲೂಕಿಗೆ ವಿಸ್ತರಿಸಲಿ. ಇದಕ್ಕೆ ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಮಂಗಳವಾರ ಮುಂಡಾಜೆ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಸಸ್ಯ ವೈವಿಧ್ಯ ದಾಖಲಾತಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಣ್ಯದಲ್ಲಿ ಆಹಾರ ವಸ್ತುಗಳ ಕೊರತೆಯಿರುವ ಕಾರಣ ವನ್ಯಜೀವಿಗಳು ನಾಡಿಗೆ ಇಳಿಯುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯೀಕರಣ ನಡೆಯಬೇಕು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಈ ಬಗ್ಗೆ ಉತ್ತಮ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಪ್ರತಿ ಮನೆಗಳಲ್ಲೂ ನಾನಾ ಸಸ್ಯಗಳನ್ನು ನೆಟ್ಟು ಸಾಕಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ರಂಜಿನಿ ರವಿ ಮಾತನಾಡಿ ಪ್ರಕೃತಿ ನಮಗೆ ಅನಿವಾರ್ಯ, ಪ್ರಕೃತಿಯಿಂದ ಸಿಗುವ ಗಿಡಮೂಲಿಕೆಗಳ ಮನೆಮದ್ದುಗಳು ಯಾವುದೇ ಅಡ್ಡ ಪರಿಣಾಮವಿಲ್ಲದೆ ಆರೋಗ್ಯವನ್ನು ಕಾಪಾಡುತ್ತವೆ ಎಂದರು.
ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮುರಳೀಕೃಷ್ಣ ಇರ್ವತ್ರಾಯ, ಉಜಿರೆ ಶ್ರೀ ಧ.ಮಂ.ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕ ಗಣೇಶ ಶೆಂಡ್ಯೆ ಸಸ್ಯಸಂಕುಲದ ಕುರಿತು ಮಾಹಿತಿ ನೀಡಿದರು

ನಿವೃತ್ತ ಎ.ಸಿ.ಎಫ್. ಗಜಾನನ ಭಟ್ ಉಪಸ್ಥಿತರಿದ್ದರು. ಸಸ್ಯ ವೈವಿಧ್ಯ ದಾಖಲಾತಿಯ ಸಂಚಾಲಕ ಗಜಾನನ ವಝೆ ಸ್ವಾಗತಿಸಿದರು. ಮುಂಡಾಜೆ ಸಿ.ಎ. ಬ್ಯಾಂಕ್ ಸಿಇಒ ನಾರಾಯಣ ಫಡ್ಕೆ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ.ಪಿಡಿಒ‌ ಸುಮಾ ಎ.ಎಸ್.ವಂದಿಸಿದರು.

ಸಂಚಾಲಕ ಗಜಾನನ ವಝೆ ಹಾಗೂ ಮುಖ್ಯಮಂತ್ರಿ ಪದಕ ವಿಜೇತ ತಾ.ಪಂ. ಸಂಯೋಜಕ ಜಯಾನಂದ ಲಾಯಿಲ ಅವರನ್ನು ಶಾಸಕರ ಸಮ್ಮುಖದಲ್ಲಿ ಗೌರವಿಸಲಾಯಿತು.ಸಸ್ಯ ವೈವಿಧ್ಯ ದಾಖಲಾತಿಗೆ ಸಹಕರಿಸಿದ ಸದಸ್ಯರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾ.ಪಂ.ಸದಸ್ಯರು ಸಹಕರಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!