ಮೈಸೂರು:ಅಯೋಧ್ಯೆಯ ‘ರಾಮಲಲ್ಲಾ’ನನ್ನು ಕೆತ್ತಿದ ಅರುಣ್ ಎಂಬ ಅನರ್ಘ್ಯ ರತ್ನ

ಶೇರ್ ಮಾಡಿ

Rating: 1 out of 5.

ಮೈಸೂರು:ಅಯೋಧ್ಯೆಯ ರಾಮಮಂದಿರದಲ್ಲಿ ಜ. 22ರಂದು ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಹೆಗ್ಗಳಿಕೆ ಪಡೆದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ವಾಲಿಬಾಲ್ ಆಟಗಾರನಾಗಿದ್ದರು. ಅವರು ಎಂಬಿಎ ಪದವೀಧರರೂ ಹೌದು. ಮನಸ್ಸು ಮಾಡಿದ್ದರೆ ಅವರು ಏನೇನೋ ಆಗಬಹುದಿತ್ತು. ಆದರೆ, ತಂದೆಯ ವೃತ್ತಿಯಾಗಿದ್ದ ಶಿಲ್ಪಕಲೆಯನ್ನು ತಮ್ಮ ವೃತ್ತಿಜೀವನವನ್ನಾಗಿಸಲು ಅವರು ಮನಸ್ಸು ಮಾಡಿ ಶಿಲ್ಪಿಯಾದರು. ಅವರು ನಂಬಿದ ಕಲೆ ಅವರನ್ನು ಕೈಬಿಟ್ಟಿಲ್ಲ. ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಮೂಲಕ ಈಗ ಅವರು ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಸಾಧನೆ ಹಾಗೂ ಸಾಧನೆಗೈದ ವ್ಯಕ್ತಿ ಯಾವತ್ತಿಗೂ ಜನಮಾನಸದಲ್ಲಿ ಉಳಿಯುತ್ತಾರೆ. ಕಲೆ ನಂಬಿ ಬದುಕಿದ ಕಲಾವಿದನಿಗೆ ಎಂದಿಗೂ ಕಲೆಯೇ ಉಸಿರು . ಸದ್ಯ ಜಗತ್ತಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮತ್ತೆ ಸದ್ದು ಮಾಡ್ತಿದೆ. ಶಿಲ್ಪಿಯೊಬ್ಬನ ಅಪ್ರತಿಮ ಕಲಾ ಸಾಧನೆ ಮತ್ತೊಂದು ಮಟ್ಟಕ್ಕೆ ಮೈಸೂರು ಹೆಸರನ್ನ ಜಗದ್ವಿಖ್ಯಾತಿಗೊಳಿಸಿದೆ.

ಅಯೋಧ್ಯೆಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮಲಲ್ಲಾ ವಿಗ್ರಹದ ಸೃಷ್ಟಿಕರ್ತ ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದ್ದು,ಎಲ್ಲರಿಂದಲೂ ಪ್ರಶಂಸೆಗಳ ಸುರಿಮಳೆಯೇ ಹರಿದುಬರ್ತಿದೆ.

ಅರುಣ್ ಯೋಗಿರಾಜ್ ಮನೆತನದಲ್ಲೇ ಕಲೆ ಬೆರೆತುಹೋಗಿದೆ. ಅವರ ಅಜ್ಜ ಬಸವಣ್ಣ, ಅವರ ದಿವಂಗತ ಅಪ್ಪ ಹಾಗೂ ಇಡೀ ಕುಟುಂಬ ಕಳೆದ 60 ವರ್ಷದಿಂದಲೂ ಕೆತ್ತನೆಯ ವೃತ್ತಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದೆ. ಅರುಣ್ ಯೋಗಿರಾಜ್ ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದರೂ, MBA ವ್ಯಾಸಂಗ ಮಾಡಿದ್ದರು.

ಬಳಿಕ ಕೆಲಕಾಲ ಪ್ರತಿಷ್ಠಿತ MNC ಕಂಪನಿಯಲ್ಲಿ ಕೆಲಸ ಸಹ ಮಾಡಿದ್ದರು. ಕೊನೆಗೆ ತಂದೆಯ ವೃತ್ತಿ ಕಲೆ ಬಗೆಗಿನ ಅಪಾರ ಪ್ರೀತಿ ಅವರನ್ನ ಕೆತ್ತನೆಯ ವೃತ್ತಿಕಡೆಗೆ ಸೆಳೆದಿತ್ತು.ಇದೀಗ ರಾಮಲಲ್ಲಾ ವಿಗ್ರಹವನ್ನ ಕೆತ್ತನೆ ಮಾಡಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದಾರೆ. ಕಾರ್ಪೊರೇಟ್ ಉದ್ಯಮದ ಆಸಕ್ತಿ ಬಿಟ್ಟು ಕಲೆಯನ್ನೇ ನಂಬಿ ಅರುಣ್ ಯೋಗಿರಾಜ್ ಅಪಾರ ಹೆಸರುಗಳಿಸ್ತಿದ್ದಾರೆ.

ಅರುಣ್ ಯೋಗಿರಾಜ್ ಅವರ ಕುಟುಂಬ ಸದಸ್ಯರಲ್ಲಿ ಸಂಭ್ರಮ ಮನೆಮಾಡಿದೆ. ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿ, ಪತ್ನಿ ವಿಜೇತ, ಸಹೋದರಿ ಚೇತನಾ, ಭಾವ ಸುನಿಲ್ ಕುಮಾರ್, ಚಿಕ್ಕಪ್ಪ ಬಸವರಾಜು, ಸಹೋದರ ಯಶವಂತ್, ಪುತ್ರಿ ಸಾನ್ವಿಯಾ ಸೇರಿದಂತೆ ಇತರ ಕುಟುಂಬ ಸದಸ್ಯರು ತಮ್ಮ ಮನೆ ಮಗನ ಐತಿಹಾಸಿಕ ಸಾಧನೆಗೆ ಶಹಬ್ಬಾಸ್ ಅಂತಿದ್ದಾರೆ. ಚಿಕ್ಕವಯಸ್ಸಿನಿಂದಲೂ ತುಂಬಾ ಶಾಂತಸ್ವಭಾವದ ಹುಡುಗ ಅರುಣ್ ಮನೆಯಲ್ಲಿ ತುಂಬ ಶಿಸ್ತು ಬೆಳೆಸಿಕೊಂಡಿದ್ದ ಹುಡುಗನಂತೆ.ಓದಿನ ಜತೆ ಡ್ರಾಯಿಂಗ್ ನಲ್ಲೂ ಅತೀವ ಆಸಕ್ತಿ ಹೊಂದಿದ್ದ ಅರುಣ್, ಯಾವುದೇ ಕೆಲಸವನ್ನ ಶ್ರದ್ಧೆ ಹಾಗೂ ಏಕಚಿತ್ತ ಮನಸ್ಸಿನಿಂದ ಮಾಡುವ ರೂಢಿ ಬೆಳೆಸಿಕೊಂಡಿದ್ದಾರೆ. ಪುತ್ರನ ಸಾಧನೆ ಬಗ್ಗೆ ತಾಯಿ ಸರಸ್ವತಿ ಸಾಕಷ್ಟು ಹೆಮ್ಮೆ ಪಡುತ್ತಿದ್ದಾರೆ.

ವಾಲಿಬಾಲ್ ಅಂದ್ರೆ ಅರುಣ್ ಯೋಗಿರಾಜ್ಗೆ ಎಲ್ಲಿಲ್ಲದ ಪ್ರೀತಿ. ಓದಿನಲ್ಲೂ ಮುಂದು , ವಿದ್ಯಾಭ್ಯಾಸದ ನಂತರ ಶಿಲೆ ಕೆತ್ತನೆ ಕಾರ್ಯ. MBA ಓದು ಮುಗಿದ ನಂತರ ಕಂಪನಿಯಲ್ಲಿ ಕೆಲಸ ಮಾಡಿ ಲೈಫ್ನಲ್ಲಿ ಸೆಟಲ್ ಆಗುವ ಮನಸ್ಸು ಅರುಣ್ ಯೋಗಿರಾಜ್ ಅವರಿಗೆ ಇರಲಿಲ್ಲ.

ಬದಲಾಗಿ ಶತಮಾನ ಕಳೆದರೂ ಅವರ ಕೆಲಸ ಜನಮಾನಸದಲ್ಲಿ ಉಳಿಯಬೇಕು. ತಲೆಮಾರಿಗೂ ತಮ್ಮ ಕಲೆ ಮಾತಾಡಬೇಕು ಎಂದಷ್ಟೇ ಕನಸು ಕಂಡಿದ್ದರು. ವಾಲಿಬಾಲ್ ಆಟ ಅರುಣ್ಗೆ ಸಾಕಷ್ಟು ಅಚ್ಚುಮೆಚ್ಚಾಗಿತ್ತು. ಇದರ ಹೊರತಾಗಿ ಡ್ರಾಯಿಂಗ್ ಬಗ್ಗೆ ವಿಶೇಷ ಒಲವು ಹೊಂದಿದ್ದ ಅರುಣ್ ಕಡೆಗೆ ತಮ್ಮ ಕುಲಕಸುಬು ಮುಂದುವರೆಸಿಕೊಂಡು ಇದೀಗ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ .

ಸಣ್ಣ ವಯಸ್ಸಲ್ಲೇ ಅರುಣ್ ಯೋಗಿರಾಜ್ ಅದ್ಭುತ ಶಿಲ್ಪಿ ಅಂತ ಹೆಸರು ಗಳಿಸಿದ್ದಾರೆ . ಅರುಣ್ ಯೋಗಿರಾಜ್ ಕೇದಾರನಾಥ ಧಾಮದಲ್ಲಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಿಸಿದ್ದು ದೇಶದ ಗಮನ ಸೆಳೆದಿದ್ರು. ಇಷ್ಟೇ ಅಲ್ಲದೇ ಅವರ ಕೆತ್ತನೆಯಲ್ಲೇ ಮೂಡಿಬಂದಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಹಿಂಭಾಗದ ಭವ್ಯವಾದ ಮೇಲಾವರಣದಲ್ಲಿ ಸ್ಥಾಪಿಸಲಾಗಿದೆ. ಮೈಸೂರು ಜಿಲ್ಲೆಯ ಚುಂಚನಕಟ್ಟೆಗೆ ಅರುಣ್ ಯೋಗಿರಾಜ್ 21 ಅಡಿ ಎತ್ತರದ ಹನುಮಾನ್ ಪ್ರತಿಮೆ ಸಹ ಕೆತ್ತನೆ ಮಾಡಿದ್ದಾರೆ ಎಲ್ಲವೂ ಒಂದಕ್ಕಿಂತ ಒಂದು ಚಿತ್ತಾಕರ್ಷಕವಾಗಿವೆ. ಇದೀಗ ಇದೇ ಸಾಲಿಗೆ ರಾಮಲಲ್ಲಾ ವಿಗ್ರಹ ಕೂಡ ಸೇರ್ಪಡೆಗೊಳ್ಳಲಿದ್ದು, ಅರುಣ್ ಯೋಗಿರಾಜ್ ಶ್ರಮಕ್ಕೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗ್ತಿದೆ.

ಅರುಣ್ ಯೋಗಿ ಕೆತ್ತನೆ ಮಾಡಿರುವ ಬಾಲರಾಮ ಮೂರ್ತಿ ಆಯ್ಕೆಯಾಗಿರುವ ಹಿನ್ನೆಲೆ, ಅರುಣ್ ಯೋಗಿರಾಜ್ ಅವರ ಸ್ವಗ್ರಾಮ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಮನೆ ಮಗನ ಅಪರೂಪದ ಸಾಧನೆಗೆ ಜನರು ಸಲಾಂ ಅಂತಿದ್ದಾರೆ.

Leave a Reply

error: Content is protected !!