ಬೆಳ್ತಂಗಡಿ ತಾಲೂಕಿನ ಜಲಪಾತಗಳ ಸೌಂದರ್ಯ ಅನಾವರಣ ಆರಂಭ

ಶೇರ್ ಮಾಡಿ

ನೇಸರ ಜೂ.28: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜಲಪಾತಗಳ ಸೌಂದರ್ಯ ಅನಾವರಣಗೊಳ್ಳತೊಡಗಿದೆ. ಇದರಲ್ಲಿ ಹೆಚ್ಚಿನ ಎಲ್ಲಾ ಜಲಪಾತಗಳು ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿವೆ. ಇಲ್ಲಿಗೆ ಹೋಗುವ ದಾರಿ ಕಡಿರುದ್ಯಾವರ, ಮಿತ್ತಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಖಾಸಗಿ ಜಾಗಗಳಲ್ಲಿವೆ.
ತಡವಾದರೂ ಮಳೆಗಾಲದ ಲಕ್ಷಣ ಕಂಡುಬಂದಿದ್ದು, ಇಷ್ಟರೊಳಗೆ ತುಂಬಿ ಧುಮ್ಮಿಕ್ಕಬೇಕಾಗಿದ್ದ ಜಲಪಾತಗಳು ಈಗ ತುಂಬತೊಡಗಿವೆ.

ಎಪ್ರಿಲ್, ಮೇ ತಿಂಗಳಲ್ಲಿ ಬರಿದಾಗುವ ಈ ಜಲಪಾತಗಳು ಈ ಬಾರಿ ಉತ್ತಮ ಬೇಸಿಗೆ ಮಳೆ ಸುರಿದ ಕಾರಣ ತಮ್ಮ ಹರಿವಿನ ವೇಗವನ್ನು ಕಾಪಾಡಿ ಕೊಂಡಿದ್ದವು. ಶಾಲಾ ರಜೆ, ಕೋವಿಡ್ ಭಯದಿಂದ ಹೊರಬಂದ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಇವುಗಳ ಅಂದವನ್ನು ಸವಿದಿದ್ದಾರೆ. ಈಗ ಮಳೆಯಿಂದ ಮೈ ತುಂಬಿಕೊಳ್ಳುತ್ತಿರುವ ಇವುಗಳ ವೀಕ್ಷಣೆಗೆ ಹೆಚ್ಚಿನ ಜನ ಬರುತ್ತಿದ್ದಾರೆ.
ಅರಣ್ಯ ಹಾಗೂ ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಇವುಗಳ ವೀಕ್ಷಣೆ ಸಮಯ ಮುಂಜಾಗ್ರತೆ ಹಾಗೂ ಪರಿಸರ ಸಂರಕ್ಷಣೆಯ ಯೋಚನೆ ಅಗತ್ಯವಾಗಿದೆ.

ಎರ್ಮಾಯಿ ಜಲಪಾತ:

ಅತ್ಯಂತ ಸುಂದರ, ಜನಾಕರ್ಷಕ ಎರ್ಮಾಯಿ ಜಲಪಾತ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ.
ಇದರ ಸೌಂದರ್ಯವನ್ನು ವೀಕ್ಷಿಸಬೇಕಾದರೆ ಬೆಳ್ತಂಗಡಿ, ಉಜಿರೆ, ಸೋಮಂತಡ್ಕ, ಕಡಿರುದ್ಯಾವರ, ಕುಕ್ಕಾವು ಮೂಲಕ ಪ್ರಯಾಣಿಸಬೇಕು. ಕುಕ್ಕಾವಿನಿಂದ ಸುಮಾರು ಒಂದೂವರೆ ಕಿ.ಮೀ.ನಷ್ಟು ಹಾದಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕು .ಈ ಜಲಪಾತಕ್ಕೆ ಹೋಗುವ ಕಾಲ್ನಡಿಗೆಯ ದಾರಿ ಮತ್ತು ಸುತ್ತಲ ಪ್ರದೇಶ ಮಿತ್ತಬಾಗಿಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ.
ಈ ಜಲಪಾತದ ನೀರು ಇಲ್ಲಿನ 45ಕ್ಕಿಂತ ಅಧಿಕ ಕುಟುಂಬಗಳಿಗೆ ಕೃಷಿಗೆ ಆಧಾರವಾಗಿದೆ. ನೇತ್ರಾವತಿ ನದಿಯನ್ನು ಸೇರುವ ಎರ್ಮಾಯಿ ಜಲಪಾತಕ್ಕೆ ಕಾಲ್ನಡಿಗೆ ಮೂಲಕ ಕುಕ್ಕಾವಿನಿಂದ ಹೋಗುವಾಗ ರಸ್ತೆಯ ಇಕ್ಕೆಲಗಳಲ್ಲೂ ಮನೆ, ಕೃಷಿ ತೋಟಗಳು ಸಿಗುತ್ತವೆ. ಈ ಜಲಪಾತದಲ್ಲಿ ಸುಮಾರು 60 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ.
ಈ ಜಲಪಾತದ ಮೇಲ್ಭಾಗಕ್ಕೆ 400 ಮೀ. ಹತ್ತಿ ಹೋದರೆ ಒಂದೊಂದು ಹಂತ ಮೇಲೇರಿದಂತೆ 8ಚಿಕ್ಕ ಜಲಪಾತಗಳು ಸಿಗುತ್ತದೆ. ಮೇಲಿನ ಹಂತಗಳಲ್ಲಿರುವ ಜಲಪಾತಗಳಿಗೆ ಪ್ರತಿಯೊಂದಕ್ಕೂ 50 ಮೀಟರ್ ನಷ್ಟು ಅಂತರ ಇದೆ. ಇವೆಲ್ಲ ಒಂದರ ಕೆಳಗೊಂದು ಹರಿದು ಧುಮ್ಮಿಕ್ಕಿ ಎರ್ಮಾಯಿ ಜಲಪಾತ ಉಂಟಾಗಿದೆ.

ಭಂಡಾಜೆ (ಅರ್ಬಿ) ಜಲಪಾತ:

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಭಂಡಾಜೆ ಅರ್ಬಿ ಜಲಪಾತ ಅತ್ಯಂತ ರಮಣೀಯವಾಗಿದೆ. ಚಾರಣಪ್ರಿಯರಿಗೆ ಅತ್ಯಂತ ಪ್ರಿಯವಾದ ಭಂಡಾಜೆ ಜಲಪಾತಕ್ಕೆ ಹೋಗಬೇಕಾದ ದಾರಿ ಕಡಿರುದ್ಯಾವರ ಗ್ರಾಮದ ಮೂಲಕ ಇದೆ.
ಬೆಳ್ತಂಗಡಿಯಿಂದ ಉಜಿರೆ, ಸೋಮಂತಡ್ಕ, ಕಡಿರುದ್ಯಾವರ, ಹೇಡ್ಯ, ಕಿನ್ಯಡ್ಕ, ಕಂಚಲಗದ್ದೆ ತನಕ ವಾಹನದಲ್ಲಿ ತೆರಳಬಹುದು. ಇಲ್ಲಿಂದ ಮುಂದೆ ಕಾಡಿನ ಪ್ರದೇಶ ಆರಂಭವಾಗುತ್ತದೆ. ಚಾರ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಯಾವುದೇ ಮನೆಗಳಿಲ್ಲದ ಕಾಡಿನ ಪ್ರದೇಶದ ಸುಮಾರು ಒಂಬತ್ತು ಕಿಲೋಮೀಟರ್ ನಷ್ಟು ದುರ್ಗಮವಾದ ಹಾದಿಯನ್ನು ಕ್ರಮಿಸಿದರೆ ಭಂಡಾಜೆ ಜಲಪಾತ ಸಿಗುತ್ತದೆ.
ಜೂನ್ ನಿಂದ ಅಕ್ಟೋಬರ್ ತನಕ ಭಂಡಾಜೆ ಜಲಪಾತಕ್ಕೆ ಹೋಗುವುದು ಅಸಾಧ್ಯವಾಗಿದೆ. ನವಂಬರ್ ನಿಂದ ಮೇ ತನಕ ಇಲ್ಲಿಗೆ ಹೋಗಲು ಉತ್ತಮ ಸಮಯ. ನವಂಬರ್ ತಿಂಗಳಲ್ಲಿ ಹೋಗಬೇಕಾದರೆ ಪ್ರವಾಸಿಗರೆ ದಾರಿಯನ್ನು ಹುಡುಕಿಕೊಂಡು ಹೋಗಬೇಕು.
ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟ, ನೇತ್ರಾವತಿ ನದಿಯನ್ನು ಸೇರುವ ಭಂಡಾಜೆ ಜಲಪಾತ ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 33 ಕಿ.ಮೀ.ದೂರದಲ್ಲಿದೆ.ಜಲಪಾತದ ನೀರು ಸುಮಾರು 150 ಅಡಿ ಎತ್ತರದಿಂದ ಬೀಳುತ್ತದೆ.ನೀರು ಹೆಚ್ಚಿರುವ ಸಮಯದಲ್ಲಿ ನೀರು ಬೀಳುವ ಎತ್ತರ ಪ್ರದೇಶ ಕಾಣಿಸುವುದಿಲ್ಲ.
ಕಡಿರುದ್ಯಾವರ ಗ್ರಾಮದ ಮೂಲಕ ಹೋಗಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಿ ಕಳಸ ಸುಂಕಸಾಲೆ ಮೂಲಕ ಮರಳುವುದಾದರೆ ಸುಮಾರು ನಾಲ್ಕು ಕಿ.ಮೀ. ಕಾಡುದಾರಿಯನ್ನು ಮತ್ತೆ ಕ್ರಮಿಸಿ ಇಲ್ಲಿಂದ ಕಳಸ ಪ್ರದೇಶವನ್ನು ಸೇರಬಹುದು.

ಕಡಮಗುಂಡಿ- ಆನಡ್ಕ- ದಿಡುಪೆ ಜಲಪಾತ:

ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದಲ್ಲಿರುವ ಇನ್ನೊಂದು ಜಲಪಾತ ಕಡಮಗುಂಡಿ. ಇದನ್ನು ಆನಡ್ಕ ಜಲಪಾತ,ದಿಡುಪೆ ಜಲಪಾತ ಎಂದು ಹೇಳಲಾಗುತ್ತದೆ.
ತಾಲೂಕು ಕೇಂದ್ರದಿಂದ 31ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಹೋಗಬೇಕಾದರೆ, ಬೆಳ್ತಂಗಡಿ ಉಜಿರೆ, ಸೋಮಂತಡ್ಕ, ಕಡಿರುದ್ಯಾವರ, ಕುಕ್ಕಾವು, ಮಲವಂತಿಗೆ, ದಿಡುಪೆ, ಅಡ್ಕ, ಆನಡ್ಕ ಮೂಲಕ ಪ್ರಯಾಣಿಸಬೇಕು.
ಆನಡ್ಕ ತನಕ ವಾಹನ ಹೋಗಲು ರಸ್ತೆ ಇದೆ. ಇಲ್ಲಿಂದ ಸುಮಾರು ಎರಡು ಕಿ.ಮೀ. ದೂರವನ್ನು ಖಾಸಗಿಯವರ ಜಾಗಗಳ ಮೂಲಕ ಕ್ರಮಿಸಬೇಕು. ಇಲ್ಲಿ ಸುಮಾರು 75 ಅಡಿಯಷ್ಟು ಎತ್ತರದಿಂದ ಬೀಳುವ ನೀರು, ನೇತ್ರಾವತಿ ನದಿಯನ್ನು ಸೇರುತ್ತದೆ. ಈ ಪ್ರದೇಶಗಳ 50ಕ್ಕೂ ಅಧಿಕ ಕುಟುಂಬಗಳಿಗೆ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಈ ಜಲಪಾತದ ನೀರು ಆಧಾರವಾಗಿದೆ. ಈ ಜಲಪಾತದ ನೀರು ಬೀಳುವಲ್ಲಿ ಸೂರ್ಯನ ಬಿಸಿಲು ಬಿದ್ದು ಸುಂದರ ಬಣ್ಣಬಣ್ಣದ ಆಕೃತಿಗಳು ಇಲ್ಲಿ ಕಾಣುವುದೇ ಕಣ್ಣಿಗೆ ಹಬ್ಬ.

ಬಂಗಾರ ಪಲ್ಕೆ:

ಮಲವಂತಿಗೆ ಗ್ರಾಮದ ಕೊನೆಯ ಭಾಗ ಎಳನೀರಿನ,ಅತ್ತ ಸಂಸೆಗೆ ಸಮೀಪ ಇರುವ ಜಲಪಾತ ಬಂಗಾರ ಪಲ್ಕೆ.ಇಲ್ಲಿ ಸುಮಾರು 50ಮೀ ಎತ್ತರದಿಂದ ನೀರು ಧುಮುಕುತ್ತದೆ. ಮೇಲ್ಬಾಗದ ಸುಮಾರು 10ಮೀ.ಯಷ್ಟು ಕಲ್ಲಿನ ಒಳಗಿನಿಂದಲೆ ಹರಿದು ಬರುವ ನೀರು ಬಳಿಕ ತನ್ನ ಸೊಬಗನ್ನು ತೆರೆದಿಡುತ್ತದೆ.
ಜಲಪಾತದ ಕೆಲ ಭಾಗದಲ್ಲಿ ಸುಮಾರು 3ಮೀ. ಗಿಂತ ಅಧಿಕ ಆಳದ ಹೊಂಡ,ಇದರ ಸಮೀಪ 25ಜನ ಕುಳಿತು ಕೊಳ್ಳುವ ಬಂಡೆ ಇತ್ತು.ಫೆಬ್ರವರಿಯಲ್ಲಿ ಇಲ್ಲಿನ ಗುಡ್ಡ ಜರಿದ ಬಳಿಕ ಈಗ ಈ ಜಲಪಾತದ ಚಿತ್ರಣ ಸಂಪೂರ್ಣ ಬದಲಾಗಿದೆ.
ಗುಡ್ಡ ಜರಿದು ಓರ್ವ ಅದರ ಅಡಿ ಸಿಲುಕಿ ಸುಮಾರು 15ದಿನಗಳ ಕಾರ್ಯಾಚರಣೆ ನಡೆದು ಬಳಿಕ ಶವ ಪತ್ತೆಯಾಗಿತ್ತು. ನಾಪತ್ತೆಯಾದ ಯುವಕನ ಹುಡುಕಾಟಕ್ಕೆ ಇಲ್ಲಿ ಬಂಡೆಗಳನ್ನು ಒಡೆದು ಲೋಡುಗಟ್ಟಲೆ ಮಣ್ಣನ್ನು ತೆರವು ಗೊಳಿಸಿ ಕೆಲಸ ಮಾಡಲಾಗಿತ್ತು. ಇದರಿಂದ ಈಗ ಜಲಪಾತದ ಕೆಲ ಭಾಗದ ಚಿತ್ರಣ ಬದಲಾಗಿದೆ.ಜಲಪಾತದ ಮೇಲ್ಭಾಗ ಮಳೆಗೆ ಕುಸಿಯುವ ಸಾಧ್ಯತೆ ಇರುವುದರಿಂದ ಇಲ್ಲಿ ಹೋಗುವಾಗ ಹೆಚ್ಚಿನ ಎಚ್ಚರಿಕೆ ಹಾಗೂ ಸ್ಥಳೀಯರ ಮಾರ್ಗದರ್ಶನದ ಅಗತ್ಯ ಇದೆ.

ಎಳನೀರು ಜಲಪಾತ:

ಮಲವಂತಿಗೆ ಗ್ರಾಮದ ಎಳನೀರು ಜಲಪಾತ ಸುಮಾರು 40 ಅಡಿ ಮೇಲಿನಿಂದ ಧುಮುಕುತ್ತದೆ. ಎಳನೀರು ರಸ್ತೆ ಬದಿಯಿಂದ ಸುಮಾರು 300ಮೀ. ದೂರವನ್ನು ಒಂದಿಷ್ಟು ದುರ್ಗಮ ಹಾದಿಯಲ್ಲಿ ಏರಬೇಕು. ಈ ಜಲಪಾತ ಕೆಳಗೆ ಹರಿದು ಬರುವಾಗ ಸುಮಾರು 10ಮೀ. ಎತ್ತರದಿಂದ ರಸ್ತೆ ಬದಿಯಲ್ಲೇ ಧುಮುಕುತ್ತದೆ.ಪ್ರಸ್ತುತ ಇಲ್ಲಿಗೆ ಕಳಸ ಮೂಲಕ ಹೋಗುವುದು ಸೂಕ್ತ.
ಜಲಪಾತ ಧುಮ್ಮಿಕ್ಕುವ ಸ್ಥಳದಲ್ಲಿ ಅಗಲ ಕಿರಿದಾಗಿದ್ದು, ಕಲ್ಲು ಬಂಡೆಗಳು ಇವೆ. ಎಚ್ಚರದಿಂದ ವೀಕ್ಷಣೆ ಮಾಡಬೇಕಾದುದು ಅಗತ್ಯ. ಈ ಜಲಪಾತ ಹಾಗೂ ಬಂಗಾರಪಲ್ಕೆ ಜಲಪಾತಕ್ಕೆ ಇರುವ ದೂರ ಕೇವಲ 2 ಕಿಮೀ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!