ನೇಸರ ಜು05: ಕಡಬ ತಾಲೂಕಿನ ನೆಲ್ಯಾಡಿಯ ಎಲೈಟ್ ರಬ್ಬರ್ ಇಂಡಸ್ಟ್ರೀಸ್ ಮಾಲಕ, ಹೆಸರಾಂತ ಉದ್ಯಮಿ, ಕೊಡುಗೈ ದಾನಿ, ನೆಲ್ಯಾಡಿ ಉನ್ನುಕಲ್ಲಿಂಗಲ್ ನಿವಾಸಿ ಯು.ಪಿ.ವರ್ಗೀಸ್(79ವ.)ರವರು ಜು.4ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ನಾಲ್ಕೈದು ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಯು.ಪಿ.ವರ್ಗೀಸ್ರವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ತುಸು ಚೇತರಿಸಿಕೊಂಡಿದ್ದರು. ಕೆಲ ದಿನಗಳಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರ ಆರೋಗ್ಯದಲ್ಲಿ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಜು.3ರಂದು ರಾತ್ರಿ 11 ಗಂಟೆ ವೇಳೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಜು.4ರಂದು ಸಂಜೆ 3.30ರ ವೇಳೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಅನ್ನಮ್ಮ, ಪುತ್ರರಾದ ಶಾಜಿ, ಸೈಬು, ಸೈಜು, ಪುತ್ರಿಯರಾದ ಸೆಲಿನಾ, ಶೈಬಿಯವರನ್ನು ಅಗಲಿದ್ದಾರೆ.
ರಬ್ಬರ್ ವರ್ಗೀಸ್ ಎಂದೆ ಖ್ಯಾತಿ:
ಮೂಲತಃ ಕೇರಳದ ಕೊಟ್ಟಾಯಂನವರಾದ ವರ್ಗೀಸ್ ಅಲ್ಲಿ ಟಿಂಬರ್ ಉದ್ಯಮವನ್ನು ನಡೆಸುತ್ತಿದ್ದರು. 1980ರಲ್ಲಿ ನೆಲ್ಯಾಡಿಗೆ ಬಂದ ಇವರು ಆರಂಭದಲ್ಲಿ ಕಾಡುತ್ಪನ್ನಗಳನ್ನು ಜನರಿಂದ ಪಡೆದು ವ್ಯಾಪಾರ ನಡೆಸುತ್ತಿದ್ದರು. ಬಳಿಕ ರಬ್ಬರ್ ಕೃಷಿಯತ್ತ ಒಲವು ತೋರಿಸಿ, ಕಳೆದ ಐದು ದಶಕಗಳಿಂದ ನೆಲ್ಯಾಡಿಯಲ್ಲಿ ಎಲೈಟ್ ರಬ್ಬರ್ ಫ್ಯಾಕ್ಟರಿಯನ್ನು ನಡೆಸಿಕೊಂಡು ಬರುತ್ತಿದ್ದ ಇವರು ನೆಲ್ಯಾಡಿ ಪರಿಸರದಲ್ಲಿ ರಬ್ಬರ್ ವರ್ಗೀಸ್ ಎಂದೇ ಪ್ರಸಿದ್ದರಾಗಿದ್ದರು. ನೂರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿದರು. ಇತ್ತೀಚೆಗೆ ಗೇರು ಬೀಜದ(ಕ್ಯಾಶ್ಯೂ) ಫ್ಯಾಕ್ಟರಿಯನ್ನು ಆರಂಭಿಸಿ ಅದರಲ್ಲೂ 60ಕ್ಕಿಂತ ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ ನೀಡಿದ್ದರು. ಬಹುಕಾಲದ ಆಸೆಯಾದ ಆಫ್ರಿಕಾದಿಂದ ಗೇರುಬೀಜವನ್ನು ಆಮದು ಮಾಡಿಕೊಳ್ಳಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡಿದ್ದರು. ಈ ಸಲುವಾಗಿ ಆಫ್ರಿಕಾಗೆ ಹೋಗಬೇಕೆಂದುಕೊಂಡಿದ್ದರು. ಆದರಿದು ಕನಸಾಗಿಯೇ ಉಳಿಯಿತು. ಈ ಬಗ್ಗೆ ಮಗನೊಂದಿಗೆ ಆಗಾಗ್ಗೆ ಹೇಳಿಕೊಳ್ಳುತ್ತಿದ್ದರು.
ಅಸಾಧಾರಣ ವ್ಯಕ್ತಿತ್ವದ ಕೊಡುಗೈ ದಾನಿ:
ಅಸಾಧಾರಣ ವ್ಯಕ್ತಿಯಾಗಿದ್ದ ಇವರು ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ಯಥೇಚ್ಛವಾಗಿ ಕಾಣಿಕೆಗಳನ್ನು ನೀಡುತ್ತಿದ್ದರು. ನೆಲ್ಯಾಡಿಗೆ ರಾಷ್ಟ್ರೀಕೃತ ಬ್ಯಾಂಕ್, ಮೆಸ್ಕಾಂ ಕಛೇರಿ, ಗಾಂಧಿ ಮೈದಾನ ಸೇರಿದಂತೆ ನೆಲ್ಯಾಡಿಯ ಎಲ್ಲಾ ಅಭಿವೃದ್ಧಿ ಪರ್ವಗಳಲ್ಲಿ ಇವರ ಪ್ರಯತ್ನ ಅವಿಸ್ಮರಣೀಯ. ಸಮಾಜದಲ್ಲಿ ನಾಲ್ಕು ಜನ ಗುರುತಿಸುವಂತಹ ಉತ್ತಮ ಕಾರ್ಯಗಳನ್ನು ಮಾಡಿ ಅದರಿಂದ ಉಳಿದವರು ಪ್ರೇರಣೆಗೊಳ್ಳಬೇಕು ಎಂದು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ಸಹಾಯ ಕೇಳಿಕೊಂಡು ಬಂದಾಗ ಇಲ್ಲ ಎನ್ನುತ್ತಿರಲಿಲ್ಲ ಶಕ್ತಿ ಮೀರಿ ದಾನ ಮಾಡುತ್ತಿದ್ದರು. ಶಾಲೆಗಳಿಗೂ ಧನ ಸಹಾಯ ಮಾಡುತ್ತಿದ್ದರು. ಇವರು ಕೇವಲ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳದೆ ಎಲ್ಲಾ ಪಕ್ಷದ ವ್ಯಕ್ತಿಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಜೇಸಿ, ಲಯನ್ಸ್, ಗೆಳೆಯರ ಬಳಗ ಇತ್ಯಾದಿ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದರು. ಜನರ ಜೊತೆ ಸದಾ ಲವಲವಿಕೆಯಿಂದ ಬೆರೆತುಕೊಂಡಿದ್ದರು.
ಇಂದು (ಜು.5) ಅಂತ್ಯಕ್ರಿಯೆ:
ಯು.ಪಿ.ವರ್ಗೀಸ್ರವರ ಮೃತದೇಹ ಜು.4ರಂದು ರಾತ್ರಿ ನೆಲ್ಯಾಡಿಯ ಮನೆಗೆ ಬಂದಿದ್ದು, ಜು.5ರಂದು ಬೆಳಿಗ್ಗೆ 10 ಗಂಟೆಗೆ ಮನೆಯಲ್ಲಿ ಅಂತಿಮ ವಿಧಿ ವಿಧಾನದ ಬಳಿಕ ನೆಲ್ಯಾಡಿ ಸೈಂಟ್ ಜೋಸೆಫ್ ಮಲಂಕರ ಕ್ಯಾಥೋಲಿಕ್ ಚರ್ಚ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಪುತ್ರ ಶಾಜಿ ಯು.ವಿ. ತಿಳಿಸಿದ್ದಾರೆ.
ಆಂತಿಮ ನಮನ:
ವೃತರ ಮನೆಗೆ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು, ಸೈಂಟ್ ಜಾರ್ಜ್ ಕಾಲೇಜಿನ ಸಂಚಾಲಕರಾದ ಅಬ್ರಾಹಂ ವರ್ಗೀಸ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ಪಿ.ಪಿ ವರ್ಗೀಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ಉದ್ಯಮಿ ಕೆ ಪಿ.ತೋಮಸ್, ವರ್ತಕ ಸಂಘದ ಅಧ್ಯಕ್ಷರಾದ ರಫೀಕ್ ಸಿಗಲ್, ವಿವಿಧ ಕ್ಷೇತ್ರದ ಗಣ್ಯರು ಭೇಟಿ ನೀಡಿ ಆಂತಿಮ ನಮನ ಸಲ್ಲಿಸಿದರು. ಸಂತಾಪ ಸೂಚಿಸಿದ್ದಾರೆ.
ಸಂತಾಪ ಸೂಚನೆ:
ಮೃತರ ಗೌರವಾರ್ಥ ನೆಲ್ಯಾಡಿಯ ಎಲ್ಲಾ ವ್ಯಾಪಾರ ಮಳಿಗೆಗಳನ್ನು ಜುಲೈ 5ರ ಮಧ್ಯಾಹ್ನ 12.00 ರಿಂದ 1.30 ವರೆಗೆ ಸ್ಥಗಿತಗೊಳಿಸುವಂತೆ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸಿಗಲ್ ತಿಳಿಸಿದ್ದಾರೆ.