ಕರಾವಳಿಯಲ್ಲಿ ಭಾರೀ ಮಳೆ, ಎಲ್ಲೋ ಅಲರ್ಟ್ ಘೋಷಣೆ. ಜಲಾವೃತಗೊoಡ ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ

ಶೇರ್ ಮಾಡಿ

ನೇಸರ ಜು05: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದ್ದು, ಭಾರೀ ಮಳೆಯಿಂದಾಗಿ ಜಿಲ್ಲೆಯ ಜನ ತತ್ತರಿಸುವಂತಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಕಳೆದ 3 ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಹಾಗು ಇವುಗಳ ಉಪನದಿಗಳು ಜಿಲ್ಲೆಯ ಹಲವು ಕಡೆಗಳಲ್ಲಿ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.

ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ನದಿ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನಘಟ್ಟ ಮಾತ್ರವಲ್ಲದೆ, ಸ್ನಾನಘಟ್ಟದ ಬಳಿಯಿರುವ ದೇವರ‌ಕಟ್ಟೆಯೂ ಭಾಗಶಃ ಮುಳುಗಡೆಯಾಗಿದ್ದು, ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲು ತೊಂದರೆಯಾಗಿದೆ. ಭಕ್ತಾಧಿಗಳು ಪ್ರವಾಹದ ನೀರಿನಲ್ಲೇ ತೀರ್ಥಸ್ನಾನವನ್ನು ನೆರವೇರಿಸುತ್ತಿದ್ದು ,ದೇವಸ್ಥಾನದ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಸ್ನಾನಘಟ್ಟದಲ್ಲಿ ರಾತ್ರಿ- ಹಗಲು ರಕ್ಷಕ ದಳವನ್ನು ನಿಯೋಜಿಸಲಾಗಿದೆ. ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲು ನೆರವಾಗುವ ನಿಟ್ಟಿನಲ್ಲಿ ಕುಮಾರಧಾರಾ ನದಿ ತೀರದಲ್ಲಿ ಹಗ್ಗವನ್ನು ಅಳವಡಿಸಿ, ಹಗ್ಗದ ಸಹಾಯದ ಮೂಲಕ ತೀರ್ಥಸ್ನಾನ ನೆರವೇರಿಸಲು ಅನುವು ಮಾಡಿಕೊಡಲಾಗಿದೆ. ಸ್ನಾನಘಟ್ಟ ಮಾತ್ರವಲ್ಲದೆ ದೇವಸ್ಥಾನದ ಪಕ್ಕದಲ್ಲೇ ಹರಿಯುವ ದರ್ಪಣ ತೀರ್ಥ ಹೊಳೆಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಹೊಳೆ ನೀರು ಆಸುಪಾಸಿನ ಕೃಷಿ ತೋಟಗಳಿಗೆ ನುಗ್ಗಲಾರಂಭಿಸಿದೆ.

Leave a Reply

error: Content is protected !!