ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸೇರಿದಂತೆ ನಾಲ್ವರನ್ನು ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮನಿರ್ದೇಶನ

ಶೇರ್ ಮಾಡಿ

ನೇಸರ ಜು.07:ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸೇರಿದಂತೆ ನಾಲ್ವರನ್ನು ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಖ್ಯಾತ ಅಥ್ಲೀಟ್ ಪಿ.ಟಿ. ಉಷಾ ಮತ್ತು ಸಂಗೀತ ಸಂಯೋಜಕ, ಗೀತರಚನೆಕಾರ ಮತ್ತು ಗಾಯಕ ಇಳಯರಾಜ ಹಾಗೂ ವಿಜಯೇಂದ್ರ ಪ್ರಸಾದ್‌ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಮೈಲುಗಲ್ಲು ಸೃಷ್ಟಿಸಿರುವ ನಾಲ್ವರು ಮಹೋನ್ನತರನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಕರ್ನಾಟಕದಿಂದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಆಯ್ಕೆ ಮಾಡಿದರೆ, ತಮಿಳುನಾಡಿನವರಾದ ಸಂಗೀತ ಮಾಂತ್ರಿಕ ಇಳಯರಾಜ, ಆಂಧ್ರಪ್ರದೇಶದ ಚಿತ್ರಸಾಹಿತಿ ವಿ.ವಿಜಯೇಂದ್ರ ಪ್ರಸಾದ್‌, ಕೇರಳ ಮೂಲದ ಆ್ಯತ್ಲೀಟ್‌ ಪಿ.ಟಿ. ಉಷಾ ಅವರೂ ರಾಜ್ಯಸಭೆ ಪ್ರವೇಶಿಸಲಿದ್ದಾರೆ.

ಚತುರ್ದಾನ ಪರಂಪರೆ ಸಾಧಿಸಿದ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ನ.25, 1948ರಂದು ಜನಿಸಿದರು. ಅವರು 20 ವರ್ಷದವರಿರುವಾಗಲೇ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು. ಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎಂಬ ಹೆಸರು ಬರುವಂತೆ ಮಾಡಿದ್ದಾರೆ.
ಧರ್ಮಸ್ಥಳದ ಬೃಹತ್‌ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಇವರೇ. ಧರ್ಮಸ್ಥಳದ ಮೂಲಕ ಅನ್ನ, ಅಭಯ, ವಿದ್ಯೆ, ಶಿಕ್ಷಣ ನೀಡುವ ಮೂಲಕ ಚತುರ್ದಾನ ಶ್ರೇಷ್ಠ ಪರಂಪರೆಗೆ ಸಾಕ್ಷಿಯಾಗಿದ್ದಾರೆ.
ಧರ್ಮಸ್ಥಳ ಮತ್ತು ವಿವಿಧೆಡೆಗಳಲ್ಲಿ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಆರೋಗ್ಯ ವಿಕಾಸಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಬಹಳಷ್ಟು ದುಡಿದಿದ್ದಾರೆ. ಸಂಚಾರಿ ಆಸ್ಪತ್ರೆಗಳು, ಉಡುಪಿ ಮತ್ತು ಹಾಸನಗಳಲ್ಲಿ ಆಯುರ್ವೇದ ಆಸ್ಪತ್ರೆ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌, ಜತೆಗೆ ದೇಶದ ಮೊದಲ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಸ್ಥಾಪಿಸುವ ಮೂಲಕ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ವಿಶ್ವಾದ್ಯಂತ ಪ್ರಚುರ ಪಡಿಸಿದವರು. ಈ ಮೂಲಕ 25ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

ಹೆಗ್ಗಡೆಯವರು ಸ್ಥಾಪಿಸಿದ ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನ ಕೇಂದ್ರವು ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತಾ ಬಂದಿದೆ. ಅನೇಕ ಸಮಕಾಲೀನ ಮತ್ತು ಪ್ರಾಯೋಗಿಕ ಶೈಕ್ಷಣಿಕ ಸಂಸ್ಥೆ ಕಾರ್ಯಕ್ರಮಗಳನ್ನೂ ಹೆಗ್ಗಡೆಯವರು ನಡೆಸುತ್ತಿದ್ದಾರೆ. ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಗ್ರಾಮಾಭಿವೃದ್ಧಿ, ಸ್ವ ಉದ್ಯೋಗಕ್ಕಾಗಿ ರುಡ್ಸೆಟ್‌ ಸ್ವ ಉದ್ಯೋಗ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ ಉಚಿತ ತರಬೇತಿ ನೀಡುತ್ತಿದ್ದಾರೆ. ಯಕ್ಷಗಾನದ ಬೆಳವಣಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಾಗೆಯೇ ಇತರ ಕುಶಲ ಕಲೆಗಾರಿಕೆಗಳಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಧರ್ಮೋತ್ಥಾನ ಟ್ರಸ್ಟ್‌ ಸ್ಥಾಪಿಸಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಗಿದ್ದಾರೆ. ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವನ್ನು 1991ರಿಂದ ಧರ್ಮೋತ್ಥಾನ ಟ್ರಸ್ಟ್‌ನಿಂದ ಕೈಗೊಳ್ಳಲಾಗುತ್ತಿದೆ. ಈ ಟ್ರಸ್ಟ್‌ ನಾಡಿನಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಪ್ರಶಸ್ತಿ- ಗೌರವ:
ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ಗುರುತಿಸಿ ಸರಕಾರ ಮತ್ತು ಅನೇಕ ಸಂಸ್ಥೆಗಳು ಅವರಿಗೆ ಪ್ರಶಸ್ತಿ-ಗೌರವಗಳನ್ನು ನೀಡಿ ಗೌರವಿಸಿವೆ. 2015ರಲ್ಲಿ ಭಾರತ ಸರಕಾರ ಪದ್ಮವಿಭೂಷಣ ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್‌ದಯಾಳ್‌ ಶರ್ಮಾರಿಂದ ರಾಜರ್ಷಿ ಗೌರವ, ಅನೇಕ ಧಾರ್ಮಿಕ ಮಠಗಳು ನೀಡುವ ಧರ್ಮರತ್ನ, ಧರ್ಮಭೂಷಣ, ಅಭಿನವ ಚಾವುಂಡರಾಯ, ಪರೋಪಕಾರ ಧುರಂಧರ ಮೊದಲಾದ ಬಿರುದುಗಳು ಇವರಿಗೆ ಸಂದಿವೆ.
ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌, ವರ್ಷದ ಕನ್ನಡಿಗ ಪ್ರಶಸ್ತಿ, ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ರತ್ನ, ಸರ್‌ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಖಾಸಗಿ ವಾಹಿನಿಯ ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಏಷ್ಯಾ ವನ್‌ ಸಂಸ್ಥೆಯ ಏಷ್ಯಾದ ಶ್ರೇಷ್ಠ ನಾಯಕರು ಪ್ರಶಸ್ತಿಯೂ ಹೆಗ್ಗಡೆಯವರ ಮುಡಿಗೇರಿದೆ.

Leave a Reply

error: Content is protected !!