ಜುಲೈ ತಿಂಗಳು ಅರಣ್ಯ ಇಲಾಖೆಗೆ ಹಬ್ಬದ ವಾತಾವರಣ – ವಿ.ಪಿ. ಕಾರ್ಯಪ್ಪ

ಶೇರ್ ಮಾಡಿ

ಹೈಲೈಟ್:

  • ಪರಿಸರದ ಅರಿವು ಮೂಡಿಸಲು ವನಮಹೋತ್ಸವ ಕಾರ್ಯಕ್ರಮ – ವಿ.ಪಿ. ಕಾರ್ಯಪ್ಪ
  •  ರಸ್ತೆ, ವಾಸಿಸುವ ಮನೆ ಎಲ್ಲವೂ ಕಾಂಕ್ರೀಟ್ ಮಯವಾಗಿರುವ ಕಾರಣ ಉಷ್ಣಾಂಶ ಹೆಚ್ಚಾಗಿ ಮುಂದಿನ ಪೀಳಿಗೆಗೆ ಬದುಕಲು ಕಷ್ಟ – ಯೋಗೀಶ್ ಆಲಂಬಿಲ
  • 500 ಗಿಡಗಳನ್ನು ವಿತರಿಸಲಾಯಿತು
  • ವಿದ್ಯಾರ್ಥಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ

ನೇಸರ ಜು.08: ಪ್ರತಿಯೊಬ್ಬರಿಗೂ ಪರಿಸರದ ಅರಿವು ಮೂಡಿಸಲು ವನಮಹೋತ್ಸವ ಕಾರ್ಯಕ್ರಮವನ್ನು ನಡೆಸುತ್ತೇವೆ. ಗಿಡಗಳ ಬೀಜಗಳು ಬಿತ್ತನೆಗೊಂಡು ಪ್ರಾಕೃತಿಕವಾಗಿ ಅವುಗಳಿಗೆ ಆಹಾರ ನೀರು ಪೂರೈಸಲು ಈ ಸಮಯ ಸಕಾಲವಾಗಿರುವುದರಿಂದ ಜುಲೈ ತಿಂಗಳು ಅರಣ್ಯ ಇಲಾಖೆಗೆ ಹಬ್ಬದ ವಾತಾವರಣ.

ಹುಟ್ಟಿದ ಮಗು ತಕ್ಷಣ ಇಂಜಿನಿಯರ್ ಡಾಕ್ಟರ್ ಆಗಲು ಸಾಧ್ಯವಿಲ್ಲ. ಮಗು ವಯಸ್ಸಿಗೆ ತಕ್ಕಂತೆ ಬೆಳೆದು ಭವಿಷ್ಯದಲ್ಲಿ ಒಂದೊಳ್ಳೆ ಹುದ್ದೆಗೆ ಏರಲು ಸಾಧ್ಯ. ಅಂತೆಯೇ ಸಸ್ಯಗಳು ಕೂಡ. ಬೀಜದಿಂದ ಮೊಳಕೆಯಾಗಿ ನರ್ಸರಿಯಲ್ಲಿ ಸೂಕ್ತ ಆರೈಕೆ ಪಡೆದು ನಂತರ ನಮ್ಮ ಪರಿಸರದಲ್ಲಿ ಬೃಹದಾಕಾರವಾಗಿ ಬೆಳೆದು ಲಕ್ಷಾಂತರ ಜನರಿಗೆ ಆಹಾರವನ್ನು ಹಾಗೂ ಆಮ್ಲಜನಕವನ್ನು ನೀಡುತ್ತದೆ. ಮನುಷ್ಯರಿಗಿಂತ ಹೆಚ್ಚಿನ ಜೀವ ಪ್ರಭೇದಗಳನ್ನು ಸಲಹುವ ಶಕ್ತಿ ಗಿಡ ಮರಗಳಿಗೆ ಆದರೆ ಅವು ಮನುಷ್ಯನಂತೆ ಎಲ್ಲಿಯೂ ಅದನ್ನು ಹೇಳಿಕೊಂಡು ಬರುತ್ತಿಲ್ಲ ಎಂದು ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ. ಕಾರ್ಯಪ್ಪ ನುಡಿದರು.

ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಪುತ್ತೂರು ಉಪ ವಿಭಾಗ ಹಾಗೂ ಉಪ್ಪಿನಂಗಡಿ ವಲಯದ ವತಿಯಿಂದ ಕೊಕ್ಕಡ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ಯೋಗೀಶ್ ಆಲಂಬಿಲ ಮಾತನಾಡಿ ಓಡಾಡುವ ರಸ್ತೆ, ವಾಸಿಸುವ ಮನೆ ಎಲ್ಲವೂ ಕಾಂಕ್ರೀಟ್ ಮಯವಾಗಿರುವ ಕಾರಣ ಉಷ್ಣಾಂಶ ಹೆಚ್ಚಾಗಿ ಮುಂದಿನ ಪೀಳಿಗೆಗೆ ಬದುಕಲು ಕಷ್ಟವಾದೀತು. ಈ ಪೀಳಿಗೆಯಿಂದಲೇ ಗಿಡಗಳನ್ನು ಬೆಳೆಸುತ್ತಾ ಹೋದರೆ ಮುಂದೆ ನಾವು ಜೀವಿಸಲು ಸಾಧ್ಯ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಯೋಚಿಸಿ ಮುಂದುವರಿಯಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಮಧುಸೂದನ್, ಶಾಲಾ ಉಪಾಧ್ಯಕ್ಷ ಗಿರಿಯಪ್ಪ ಗೌಡ ಆಲಂಬಿಲ, ಕೊಕ್ಕಡ ಕಾಲೇಜು ಪ್ರಾಂಶುಪಾಲ ವೆಂಕಟೇಶಮೂರ್ತಿ ಉಪಸ್ಥಿತರಿದ್ದರು.
ಕೊಕ್ಕಡ ಶಾಖಾ ಉಪವಲಯ ಅರಣ್ಯಾಧಿಕಾರಿ
ಕೆ.ಆರ್.ಅಶೋಕ್ ಹಾಗೂ ಉಪ್ಪಿನಂಗಡಿ ವಲಯದ ಎಲ್ಲಾ ಅರಣ್ಯ ರಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅರಣ್ಯ ರಕ್ಷಕ ರಾಜೇಶ್ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ್ ವಂದಿಸಿದರು. ಶಿಕ್ಷಕಿ ಬೀನಾ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.
ಹಲಸು, ನೇರಳೆ, ಪುನರ್ಪುಳಿ, ದಾಲ್ಚಿನ್ನಿ, ರೆಂಜ, ಮಾವು ಸೇರಿದಂತೆ 500 ಗಿಡಗಳನ್ನು ವಿತರಿಸಲಾಯಿತು.
ಅಧಿಕಾರಿಗಳಾದ ವಿ.ಪಿ ಕಾರ್ಯಪ್ಪ ಹಾಗೂ ಮಧುಸೂದನ್ ವಿದ್ಯಾರ್ಥಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ಅರಣ್ಯ ಇಲಾಖೆಯ ಬಗೆಗಿನ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಂಡರು.

Leave a Reply

error: Content is protected !!