ನೇಸರ ಜು.12: ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿಯ ಕಿರು ಸೇತುವೆಯಿಂದ ಶನಿವಾರ ರಾತ್ರಿ ಹೊಳೆಗೆ ಬಿದ್ದ ಕಾರಿನೊಂದಿಗೆ ನೀರು ಪಾಲಾಗಿದ್ದ ಯುವಕರ ಮೃತ ದೇಹ ಹೊಳೆಯಲ್ಲಿ ಮಂಗಳವಾರ ಮಧ್ಯಾಹ್ನದ ಒಳಗೆ ಪತ್ತೆಯಾಗಿದೆ.
ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ – ಸಾತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್ (26) ಹಾಗೂ ವಿಟ್ಲ ಕನ್ಯಾನ ಕೊನಾರೆ ನಿವಾಸಿ ತನಿಯಪ್ಪ ನಾಯ್ಕ ಅವರ ಪುತ್ರ ಧನುಷ್ ಯಾನೇ ಧನಂಜಯ (21) ಅವರು ಶನಿವಾರ ತಡ ರಾತ್ರಿ ಕಾರಿನಲ್ಲಿ ಬಂದು ತಮ್ಮ ನಿಯಂತ್ರಣ ತಪ್ಪಿ ಸೇತುವೆಯ ತಡೆ ಬೇಲಿಗೆ ಡಿಕ್ಕಿ ಹೊಡೆದು ತುಂಬಿ ಹರಿಯುತ್ತಿರುವ ಗೌರಿ ಹೊಳೆಗೆ ಬಿದ್ದಿದ್ದರು.
ಭಾನುವಾರ ಬೆಳಗ್ಗೆ ಬೈತಡ್ಕ ಮಸೀದಿಯ ಸಿ.ಸಿ. ಕ್ಯಾಮರಾದಲ್ಲಿ ದೃಶ್ಯ ನೋಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಈಜು ತಜ್ಞರನ್ನು ಕರೆಸಿ ಕಾರು ಹಾಗೂ ಯುವಕರಿಗೆ ಶೋಧ ಕಾರ್ಯ ನಡೆಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಕಾರು ಪತ್ತೆಯಾಗಿತ್ತು. ಸಂಜೆ ತನಕ ಹುಡುಕಾಟ ನಡೆಸಿದ ಈಜು ತಜ್ಞರು ಹಾಗೂ ಅಗ್ನಿಶಾಮಕ ದಳದವರು ಬರಿಗೈನಲ್ಲಿ ವಾಪಾಸಾಗಿದ್ದು, ಸೋಮವಾರ ಕೂಡಾ ಯುವಕರಿಗಾಗಿ ಶೋಧ ಕಾರ್ಯ ನಡೆಸಿ ಅಗ್ನಿ ಶಾಮಕ ದಳದವರು ಹಾಗೂ ಸ್ಥಳೀಯ ಈಜು ತಜ್ಞರು ಸುಸ್ತಾಗಿದ್ದರು.
ಮಂಗಳವಾರ ಬೆಳಗ್ಗಿನಿಂದಲೇ ಶೋಧ ಕಾರ್ಯ ಮುಂದುವರಿಸಲಾಗಿತ್ತು. ಈ ಮಧ್ಯೆ ಸ್ಥಳೀಯ ದಿನೇಶ್ ಎಂಬುವರು ಸೇತುವೆಯಿಂದ 200 ಮೀಟರ್ ಕೆಳಗೆ ಮರಕ್ಕಡ ಜೇಡರ ಕೇರಿ ಎಂಬಲ್ಲಿ ಒಬ್ಬನ ಮೃತ ದೇಹ ಪತ್ತೆ ಹಚ್ಚಿ ಸ್ಥಳೀಯ ಈಜುಗಾರ ಜಯಂತ್ ಅನವುಮೂಲೆ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಜಯಂತ್, ಕೇಶವ ಗೌಡ ಬೈತಡ್ಕ, ಗುತ್ತಿಗಾರಿನ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮೃತ ದೇಹವನ್ನು ಹಗ್ಗ ಕಟ್ಟಿ ಮೇಲೆತ್ತುವಲ್ಲಿ ಸಫಲರಾದರು.
ಬಳಿಕ ಈ ಸ್ಥಳದಿಂದ ಹತ್ತು ಮೀಟರ್ ಕೆಳಗೆ ಮತ್ತೊಬ್ಬ ಯುವಕನ ಮೃತ ದೇಹವೂ ಪತ್ತೆಯಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರಿಗೆ ಸಾಗಿಸಲಾಯಿತು. ಮೃತರ ಸಂಬಂಧಿ ಗುತ್ತಿಗಾರಿನ ಮನೋಜ್ ಎಂಬುವರು ನೀಡಿದ ದೂರಿನಂತೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ಕಡಬ ತಹಸೀಲ್ದಾರ್ ಅನಂತಶಂಕರ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತ್ಮಲೆ , ಬೆಳ್ಳಾರೆ ಠಾಣಾಧಿಕಾರಿ ರುಕ್ಮ ನಾಯ್ಕ್, ಬಿಜೆಪಿ ಬೆಳಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಬೆಳಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸದಸ್ಯ ಮೋಹನ್ ಅಗಳಿ ಮತ್ತಿತರರು ಉಪಸ್ಥಿತರಿದ್ದರು.