ನೇಸರ ಜು18: ಬೆಂಗಳೂರು,ಹಾಸನ, ಚಿಕ್ಕಮಗಳೂರು ಸೇರಿದಂತೆ ಪ್ರಸ್ತುತ ರಾಜ್ಯದ ನಾನಾ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಿದ ಪರಿಣಾಮ ಮೋರಿಯೊಂದು ರಸ್ತೆಯ ತಡೆಗೋಡೆ ಸಮೀಪ ಕುಸಿದಿದೆ. ಇದರಿಂದ ಆತಂಕ ನಿರ್ಮಾಣವಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಕಾಲಿಕ ಸ್ಪಂದನೆಯಿಂದ ಹೆಚ್ಚಿನ ಅನಾಹುತ ಹಾಗೂ ಸಂಪರ್ಕ ಕಡಿತ ಸಾಧ್ಯತೆ ಸದ್ಯಕ್ಕೆ ತಪ್ಪಿದೆ.
ಘಾಟಿಯ ದ.ಕ ವಿಭಾಗದ ಎರಡನೇ ಹಾಗೂ ಮೂರನೇ ತಿರುವಿನ ಮಧ್ಯೆ ಸೋಮವಾರ ಮಧ್ಯಾಹ್ನದ ಸುಮಾರಿಗೆ ಮೋರಿ ಸಮೀಪ ರಸ್ತೆ ಬಿರುಕು ಬಿಟ್ಟು ಕುಸಿತದ ಸಾಧ್ಯತೆ ಕಂಡು ಬಂದಿತ್ತು. ಸ್ಥಳದಲ್ಲಿ ಚರಲ್ ಹಾಕಲಾಗಿದ್ದು ಬ್ಯಾರಿಕೇಡ್ ಗಳನ್ನು ಅಳವಡಿಸಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಮಳೆಯ ಪ್ರಮಾಣವು ಕೊಂಚ ಇಳಿಮುಖವಾಗಿದ್ದು ತಡೆಗೋಡೆ ಮೂಲಕ ರಸ್ತೆಯ ನೀರು ಸೋರಿಕೆ ನಿಂತಿರುವುದರಿಂದ ಹೆಚ್ಚಿನ ಸಮಸ್ಯೆ ಉಂಟಾಗದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜೋರಾದ ಮಳೆ ಸುರಿದರೆ ಅಪಾಯದ ಸಾಧ್ಯತೆ ಇದೆ. ಕುಸಿತವಾದ ಪ್ರದೇಶದ ಇನ್ನೊಂದು ಬದಿ ಕಂದಕವಿದ್ದು ಬಸ್, ಲಾರಿಗಳು ತೀವ್ರ ಮುಂಜಾಗ್ರತೆಯಿಂದ ಸಂಚರಿಸುವುದು ಅಗತ್ಯವಾಗಿದೆ.
ಅಧಿಕ ಒತ್ತಡ:
ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಚಾರ್ಮಾಡಿ ಮೂಲಕ ವಾಹನಗಳ ಓಡಾಟ ಅತ್ಯಧಿಕವಾಗಿದೆ. ಸಾಕಷ್ಟು ಮಳೆಯು ಸುರಿಯುತ್ತಿದೆ. ಇದರಿಂದ ಘಾಟಿಯ ಭಾಗದ ಅಲ್ಲಲ್ಲಿ ಸಣ್ಣಪುಟ್ಟ ಕುಸಿತಗಳು ಉಂಟಾಗುತ್ತಿವೆ. ರಾಜ್ಯದ ನಾನಾ ಭಾಗಗಳಿಗೆ ತೆರಳುವ ಕೆ ಎಸ್ ಆರ್ ಟಿ ಸಿ ಕೆಂಪು ಬಸ್ಸು ಸಹಿತ ಸರಕು ಸಾಗಾಟದ ವಾಹನಗಳ ಓಡಾಟ ಈ ಘಾಟಿಯ ಮೂಲಕವೇ ಸಾಗಿದೆ. ಈ ಎಲ್ಲಾ ಕಾರಣಗಳಿಂದ ರಸ್ತೆಯಲ್ಲಿ ಒತ್ತಡ ಅಧಿಕವಾಗಿದ್ದು ಮೋರಿ ಕುಸಿದಿದೆ.
ಅಧಿಕ ಭಾರದ ವಾಹನ ಓಡಾಟ:
ಚಾರ್ಮಾಡಿ ಘಾಟಿಯಲ್ಲಿ ನಿಗದಿಪಡಿಸಿದ ವಾಹನಗಳ ಹೊರತಾಗಿ ಸ್ಲೀಪರ್ ಹಾಗೂ ಐಷಾರಾಮಿ ವಾಹನಗಳ ಓಡಾಟ ಕಂಡು ಬಂದಿರುವ ಕುರಿತು ಮಾಹಿತಿ ಲಭಿಸಿದೆ. ಇದು ಕೂಡ ಮೋರಿಕುಸಿತಕ್ಕೆ ಕಾರಣವಾಗಿದೆ ಎಂದು ವಾಹನ ಸವಾರರು ತಿಳಿಸಿದ್ದಾರೆ. ಇದಲ್ಲದೆ ಘಾಟಿ ಭಾಗದ ಅಲ್ಲಲ್ಲಿ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿವೆ.
ನಿರ್ವಹಣೆ ಕಾಮಗಾರಿ:
ಚಾರ್ಮಾಡಿ ಘಾಟಿಯ ದ.ಕ ವಿಭಾಗದ ರಸ್ತೆ ಭಾಗದಲ್ಲಿ ಮಳೆಗಾಲದ ಚರಂಡಿ ದುರಸ್ತಿಯು ನಡೆಯುತ್ತಿದೆ. ಮೂರು ಜೆಸಿಬಿಗಳು ಕಾಮಗಾರಿ ನಿರ್ವಹಿಸುತ್ತಿವೆ. ಇದರಿಂದ ಘಾಟಿ ಭಾಗದ ಗಿಡ ಗಂಟಿಗಳು ತೆರವುಗೊಂಡಿದ್ದು, ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿದೆ.