ನೇಸರ ಜು.20: ಜಿಲ್ಲೆಯ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ನಡುವೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆಯಿಂದ ಪೆರಿಯಶಾಂತಿಯ ವರೆಗಿನ 30 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಉಜಿರೆಯಿಂದ ಪೆರಿಯಶಾಂತಿಯ ವರಗೆ ರಾಜ್ಯ ಹೆದ್ದಾರಿ ಅಗಲ ಕಿರಿದಾದ ರಸ್ತೆಯಾಗಿದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ಅತ್ಯಂತ ಪ್ರಮುಖ ರಸ್ತೆಯಾಗಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಯಾತ್ರಿಕರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರಲು ಇದೇ ಹೆದ್ದಾರಿಯನ್ನು ಅವಲಂಬಿಸಬೇಕಾಗಿದೆ. ಇದರಿಂದಾಗಿಯೇ ಈ ರಸ್ತೆಯಲ್ಲಿ ಸದಾ ವಾಹನಗಳ ದಟ್ಟಣೆ ಅತ್ಯಂತ ಹೆಚ್ಚಾಗಿರುತ್ತದೆ.
ಇದೀಗ ಉಜಿರೆಯಿಂದ ಧರ್ಮಸ್ಥಳ ಕಲ್ಲೇರಿಯ ವರೆಗೆ 9 ಕಿ.ಮೀ ಚತುಷ್ಪದ ರಸ್ತೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈಗಾಗಲೆ ಉಜಿರೆ ಪೇಟೆಯಲ್ಲಿ ಚತುಷ್ಪದ ರಸ್ತೆ ನಿರ್ಮಾಣಗೊಂಡಿದ್ದು ಇದು ಧರ್ಮಸ್ಥಳದ ವರೆಗೂ ಮುಂದುವರಿಯಲಿದೆ. ಧರ್ಮಸ್ಥಳದಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಲಿಸುವ ಪೆರಿಯಶಾಂತಿಯ ವರೆಗೆ 21 ಕಿ ಮೀ ಉದ್ದದ ರಸ್ತೆ ದ್ವಿ ಪದ ರಸ್ತೆಯಾಗಿ ನಿರ್ಮಾಣವಾಗಲಿದೆ.
ಈಗಾಗಲೆ ರಸ್ತೆಗೆ ಮೊದಲ ಹಂತದ ಸರ್ವೆ ಕಾರ್ಯ ಮಾಡಲಾಗಿದ್ದು ಸದ್ಯದಲ್ಲಿಯೇ ಅನುಮೋದನೆ ಸಿಗುವ ನಿರೀಕ್ಷೆಯಿದೆ.
“ಉಜಿರೆ-ಪೆರಿಯ ಶಾಂತಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕುರಿತು ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳೆದ ಕೆಲವು ದಿನಗಳ ಹಿಂದೆ ನೀಡಲಾಗಿದೆ”
-ಕೃಷ್ಣ ಕುಮಾರ್,ಎಇಇ,ರಾಷ್ಟ್ರೀಯ ಹೆದ್ದಾರಿ ಇಲಾಖೆ,ದಕ.