ನೇಸರ ಜು.26: ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ನಡೆಯದ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆ ಈ ಬಾರಿ ನಡೆಯಲಿದೆ. ಈಗಾಗಲೇ ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆಗೊಂಡಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ.
ಸ್ಪರ್ಧೆಗಳ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುವ ಪ್ರತಿಭಾ ಕಾರಂಜಿ ಕ್ಲಸ್ಟರ್, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ನಡೆಯುತ್ತದೆ. ಇಂತಹ ಒಂದು ಪ್ರಮುಖ ಸ್ಪರ್ಧೆಯಿಂದ ಈ ಬಾರಿ ಕರಾವಳಿಯ ವಿಶಿಷ್ಟ ಹಾಗೂ ಜನಜನಿತ ಕಲೆಯಾದ ಯಕ್ಷಗಾನವನ್ನು ಕೈ ಬಿಡಲಾಗಿದೆ. ಇದು ಯಕ್ಷಗಾನ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು, ಪೋಷಕರನ್ನು ಹಾಗೂ ಶಿಕ್ಷಕರನ್ನು ಭ್ರಮನಿರಸನಕ್ಕೆ ತಳ್ಳಿದೆ.
ಜಿಲ್ಲೆಯಲ್ಲಿ ಹಲವಾರು ಶಾಲೆಗಳು ಯಕ್ಷಗಾನ ಕಲೆಯನ್ನು ಉಳಿಸುವ ಹಾಗೂ ಕಲಿಸುವ ದೃಷ್ಟಿಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ನುರಿತ ಕಲಾವಿದರಿಂದ ಯಕ್ಷಗಾನದ ವಿಶೇಷ ತರಗತಿಗಳನ್ನು ನಡೆಸುತ್ತಿವೆ. ವಿದ್ಯಾರ್ಥಿಗಳು ಈ ಕಲೆಯ ನಾನಾ ಆಯಾಮಗಳನ್ನು ಇದರಿಂದ ಕಲಿಯುತ್ತಿದ್ದಾರೆ. ಪಠ್ಯದ ಜತೆ ಕಲೆಯನ್ನು ಪೋಷಿಸುವ ಈ ತರಗತಿಗಳಿಗೆ ಪೋಷಕರು ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ.
ತಮ್ಮ ಮಕ್ಕಳ ಪ್ರತಿಭಾ ಸಾಮರ್ಥ್ಯವನ್ನು ನೋಡಲು ಪ್ರತಿಭಾ ಕಾರಂಜಿ ಒಂದು ಉತ್ತಮ ವೇದಿಕೆಯಾಗಿತ್ತು ಆದರೆ ಇಂತಹ ಕಲೆಯನ್ನು ಪ್ರೋತ್ಸಾಹಿಸಲು ಶಿಕ್ಷಣ ಇಲಾಖೆ ಈ ಬಾರಿ ಮುಂದಾಗದಿರುವುದು ವಿಪರ್ಯಾಸ.
ಜಿಲ್ಲಾ ಮಟ್ಟಕ್ಕೆ ಮಾತ್ರ
ಯಕ್ಷಗಾನ ಸ್ಪರ್ಧೆಯು ಕ್ಲಸ್ಟರ್,ತಾಲೂಕು ಹಾಗು ಜಿಲ್ಲಾ ಮಟ್ಟದ ತನಕ ಮಾತ್ರ ಪರಿಗಣಿಸಲ್ಪಡುತ್ತದೆ. ರಾಜ್ಯಮಟ್ಟದವರೆಗೆ ಮುಂದುವರಿಯುತ್ತಿಲ್ಲ ಎಂಬ ಕಾರಣಕ್ಕೆ ಇದನ್ನು ಈ ಬಾರಿ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.ಆದರೆ ಜಿಲ್ಲೆಯ ಮಟ್ಟದವರೆಗಾದರು ಸ್ಪರ್ಧೆ ನಡೆಸಬೇಕೆಂಬುದು ಪೋಷಕರ ಆಗ್ರಹವಾಗಿದೆ.
ಯಕ್ಷಗಾನ ಸ್ಪರ್ಧೆಯು ವೇಷ ಭೂಷಣ,ನೃತ್ಯ ಭಾಗವತಿಕೆ,ಚಂಡೆ ಮದ್ದಳೆವಾದನ, ಮಾತುಗಾರಿಕೆ ಹೀಗೆ ಹಲವಾರು ವಿಚಾರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಛಾಪನ್ನು ಮೂಡಿಸುವ ಅವಕಾಶ ನೀಡುತ್ತದೆ. ಈ ಕಲೆಗೆ ಉತ್ತಮ ಪ್ರೋತ್ಸಾಹ ನೀಡುವುದು ಭವಿಷ್ಯದಲ್ಲಿ ಕಲಾವಿದರ ಸೃಷ್ಟಿಗೆ ಕಾರಣವಾಗುತ್ತದೆ.
ಸ್ಪರ್ಧಿಗಳಿದ್ದಾರೆ
ಯಕ್ಷಗಾನ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಪರ್ಧೆಗೆ ಸಾಕಷ್ಟು ವಿದ್ಯಾರ್ಥಿಗಳು ಆಸಕ್ತರಾಗಿದ್ದಾರೆ. ಕೆಲವೊಂದು ಶಾಲೆಗಳಲ್ಲಿ ವಿಶೇಷ ವೇಷಭೂಷಣ ಕೊಠಡಿ ಇತ್ಯಾದಿಗಳನ್ನು ಯಕ್ಷಗಾನಕ್ಕಾಗಿ ಸಿದ್ಧಪಡಿಸಲಾಗಿದೆ. ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಗಾಗಿ ಈ ಬಗ್ಗೆ ಪೂರ್ವಭಾವಿ ತಯಾರಿಗಳು ನಡೆದಿದೆ. ಆದರೆ ಈ ಬಾರಿ ಇದನ್ನು ಕೈ ಬಿಟ್ಟಿರುವುದರಿಂದ ಭಾಗವಹಿಸಲು ಉತ್ಸುಕರಾಗಿದ್ದ ಮಕ್ಕಳ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ.
ಪದವಿಗೆ ಸೇರ್ಪಡೆ
ಕಟೀಲು ಪದವಿ ಕಾಲೇಜಿನಲ್ಲಿ ಮೊದಲ ವರ್ಷದ ಕಲಾವಿಭಾಗದ ವಿದ್ಯಾರ್ಥಿಗಳಿಗೆ ಯಕ್ಷಗಾನ ವಿಷಯ ಈ ಬಾರಿಯಿಂದ ಪಠ್ಯವು ಆಗಿದೆ.ಮಂಗಳೂರು ವಿ.ವಿ.ಯಿಂದ ಅನುಮತಿ ನೀಡಲಾಗಿದ್ದು ಈಗಾಗಲೇ ವಿದ್ಯಾರ್ಥಿಗಳ ಸೇರ್ಪಡೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.