ನೇಸರ ಆ.04: ಬೆಳಾಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ತಂತ್ರಜ್ಞಾನಾಧಾರಿತ ಬೋಧನೆಗಾಗಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಗೊಂಡಿತು.
ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ಧ ಮಂ ಎಜ್ಯುಕೇಶನಲ್ ಸೊಸೈಟಿ (ರಿ.) ಉಜಿರೆ ಇದರ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ
ಬಿ.ಸೋಮಶೇಖರ ಶೆಟ್ಟಿ ಯವರು ಮಾತನಾಡುತ್ತಾ, ಕಲಿಕೆಗೆ ಮನಸ್ಸು ಮುಖ್ಯವೇ ಹೊರತು ಮಾಧ್ಯಮ ಮುಖ್ಯವಲ್ಲ. ಶಿಕ್ಷಣದ ಮೂಲಕ ಆತ್ಮವಿಶ್ವಾಸ ಮತ್ತು ಸವಾಲು ಎದುರಿಸುವ ಧೈರ್ಯ ರೂಢಿಸಿಕೊಳ್ಳುವಂತಾಗಬೇಕು. ಮಾತೃಭಾಷಾ ಶಿಕ್ಷಣ ಅಂತಹ ಗುಣಗಳನ್ನು ಪೋಷಿಸಬಲ್ಲದು. ಬದುಕಿನಲ್ಲಿ ಗುರಿ ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ಗುರಿ ಸೇರುವ ಮಾರ್ಗ. ಕಲಿಕೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸುವಂತೆ, ಬದುಕಿನಲ್ಲಿ ಉತ್ತಮ ಫಲಿತಾಂಶ ಗಳಿಸಿಕೊಳ್ಳುವುದಕ್ಕೆ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯ ಪಟ್ಟರು. ಜೊತೆಗೆ ಸ್ಮಾರ್ಟ್ ಕ್ಲಾಸ್ ಮೂಲಕ ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣ ಪಡೆಯುವಂತಾಗುತ್ತದೆ ಎಂದು ನುಡಿದರು.
ಸ್ಮಾರ್ಟ್ ತರಗತಿಗಾಗಿ ಐವತ್ತೈದು ಇಂಚಿನ ದೊಡ್ಡ ಪರದೆಯ ಸ್ಮಾರ್ಟ್ ಟಿವಿಯನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ರವಿಶಂಕರ್ ಎಸ್ ಮಂಗಳೂರು, ಉಜಿರೆಯ ಇಂಜಿನಿಯರ್ ರೊಟೇರಿಯನ್ ವಿದ್ಯಾಕುಮಾರ್ ಕಾಂಚೋಡು, ವಿನೂತನ್ ಬಿ ಪ್ರವೀಣ್ ಓಣ್ಯಾಲು ಮತ್ತು ಅವಿನಾಶ್ ಮಾಯ ಇವರು ಕೊಡುಗೆಯಾಗಿ ನೀಡಿದ್ದರು. ದಾನಿಗಳ ಪೈಕಿ ವಿದ್ಯಾಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅವರನ್ನು ಸೋಮಶೇಖರ ಶೆಟ್ಟಿಯವರು ಶಾಲು, ಸ್ಮರಣಿಕೆ ಮತ್ತು ಹಣ್ಣುಹಂಪಲುಗಳನ್ನಿತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೊಟೇರಿಯನ್ ಮನೋರಮಾ ಭಟ್, ರೋಟರಿ ಕ್ಲಬ್ಬಿನ ಯುವ ಸೇವಾ ವಿಭಾಗದ ರೊ.ಶ್ರವಣ್ ಕಾಂತಾಜೆ, ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಲೈಮಾನ್ ಭೀಮಂಡೆ, ಶಾಲಾ ಶಿಕ್ಷಕರು ಮತ್ತು ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.