ನೇಸರ ಆ.20: ಹೆಚ್ಚಿನ ಒತ್ತಡ ಇರುವ ಕಕ್ಕಿಂಜೆ ವಿದ್ಯುತ್ ಫೀಡರನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಸದ್ಯವೇ ಆರಂಭವಾಗಲಿದೆ. ಉಜಿರೆ,ಪಿಲಿಕಳ,ಕುತ್ಲೂರು,ಬೆಳಾಲು ಮೊದಲಾದ ಕಡೆಗಳಲ್ಲಿ ನೂತನ ಸಬ್ ಸ್ಟೇಷನ್ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಈ ಕಾಮಗಾರಿಗಳು ಆರಂಭವಾಗಲಿವೆ. ಇವುಗಳ ನಿರ್ಮಾಣದಿಂದ ಬೆಳ್ತಂಗಡಿ ತಾಲೂಕಿನ ವಿದ್ಯುತ್ ಪೂರೈಕೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಮೆಸ್ಕಾಂ ಬಂಟ್ವಾಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ ಪೈ ಹೇಳಿದರು.
ಅವರು ಶನಿವಾರ ಕಲ್ಮಂಜ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜರಗಿದ ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಅದಾಲತ್ ನಲ್ಲಿ ಭಾಗವಹಿಸಿ ಮಾತನಾಡಿದರು. ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ತಂತಿ ಬದಲಾವಣೆ, ನೂತನ ಪರಿವರ್ತಕ ಅಳವಡಿಕೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರಕಾರದಿಂದ 86 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ. ಇದರ ಕಾಮಗಾರಿಗಳು ಕೂಡ ನಡೆಯಲಿದ್ದು, ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಹೇಳಿದರು.
ಕಲ್ಮಂಜ ಗ್ರಾಪಂ ಅಧ್ಯಕ್ಷ ಶ್ರೀಧರ ಎಂ.ನಿಡಿಗಲ್, ಪಿಡಿಒ ಇಮ್ತಿಯಾಜ್, ಉಜಿರೆ ಶಾಖಾ ಕೇಂದ್ರದ ಎ.ಇ.ವಸಂತ, ಧರ್ಮಸ್ಥಳ ಶಾಖಾ ಕೇಂದ್ರದ ಎ.ಇ. ಸುಹಾಸ್ ಕುಮಾರ್, ಮುಂಡಾಜೆ ಶಾಖಾ ಕೇಂದ್ರದ ಜೆ.ಇ. ಕೃಷ್ಣೇಗೌಡ ಉಪಸ್ಥಿತರಿದ್ದರು.
NESARA|| WhatsApp ||GROUPS |
---|
ಉಜಿರೆ ಉಪ ವಿಭಾಗದ ಎ.ಇ.ಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಕಾರ್ಯಕ್ರಮ ನಿರ್ವಹಿಸಿದರು.
ಗ್ರಾಮಸ್ಥರಾದ ರಾಘವೇಂದ್ರ ದೇವರಗುಡ್ಡೆ, ಗುರುಪ್ರಸಾದ್ ಕೋಟ್ಯಾನ್,ಸುಧೀಂದ್ರ ಹೆಬ್ಬಾರ್,ಗುರುಪ್ರಸಾದ್ ಗೋಖಲೆ, ಕುಮಾರನಾಥ ಶೆಟ್ಟಿ, ಶಿವರಾಮ ಮೊದಲಾದವರು ಸಮಸ್ಯೆಗಳ ಕುರಿತು ವಿವರಿಸಿದರು.
ಪ್ರಮುಖ ಸಮಸ್ಯೆಗಳು
ಕುಡೆಂಚಿ,ಕಂದೂರು, ದೇವರಗುಡ್ಡೆ ಮೊದಲಾದ ಸ್ಥಳಗಳಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ ನ ತಂತಿಗಳು ತೀರಾ ಹಳೆಯದಾಗಿದ್ದು ಮುರಿದು ಬೀಳುತ್ತಿವೆ ಇವುಗಳನ್ನು ತ್ವರಿತವಾಗಿ ಬದಲಾಯಿಸುವ ಕುರಿತು ಗ್ರಾಮಸ್ಥರು ಆಗ್ರಹಿಸಿದರು. ಕರಿಯನೆಲದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಇದ್ದು ನೂತನ ಪರಿವರ್ತಕ ಅಳವಡಿಕೆಗೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು.ಗ್ರಾಮೀಣ ರಸ್ತೆಗಳ ಬದಿ ವಿದ್ಯುತ್ ಕಂಬಗಳನ್ನು ಹಾಕಿರುವುದರಿಂದ ರಸ್ತೆ ಅಗಲೀಕರಣ ಚರಂಡಿ ದುರಸ್ತಿಗೆ ಸಮಸ್ಯೆ ಉಂಟಾಗಿದೆ. ವಿದ್ಯುತ್ ಲೈನ್ ಮೇಲ್ಭಾಗದಲ್ಲಿರುವ ಮರಗಳ ಗೆಲ್ಲುಗಳು ಮುರಿದು ಬೀಳುತ್ತಿದ್ದು, ಈ ಬಗ್ಗೆ ಮೆಸ್ಕಾಂ ಗಮನ ಹರಿಸಿ ಕಾಲಕಾಲಕ್ಕೆ ಇವುಗಳನ್ನು ತೆರೆವುಗೊಳಿಸಬೇಕು ಎಂದು ಗ್ರಾಮಸ್ಥರು ತಿಳಿಸಿದರು.
ಇಂಧನ ಸಚಿವ ಸುನಿಲ್ ಕುಮಾರ್ ಅವರ ಆಶಯದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಆಯ್ದ ಗ್ರಾಮಗಳಲ್ಲಿ ನಡೆಯುತ್ತಿರುವ ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಈಗಾಗಲೇ ಉಜಿರೆ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ ಕೊಕ್ಕಡ ಹಾಗೂ ಪಟ್ರಮೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳು ನಡೆದಿವೆ. ಮೆಸ್ಕಾಂನ ಉನ್ನತಾಧಿಕಾರಿಗಳು ಗ್ರಾಮ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗಳಿಗೆ ಸ್ಥಳದಲ್ಲೆ ಸೂಕ್ತ ಪರಿಹಾರ ಒದಗಿಸುವ ಈ ಕಾರ್ಯಕ್ರಮ ಇನ್ನಷ್ಟು ಪ್ರಚಾರ ಪಡೆದು ಪರಿಣಾಮಕಾರಿಯಾಗಿ ಮೂಡಿ ಬರಬೇಕಿದೆ.