ನೇಸರ ಆ.20: ಜೀವನ ಪಾಠದ ಬೋಧನೆಯೇ ರುಡ್ ಸೆಟ್ ಸಂಸ್ಥೆಯ ವಿಶೇಷತೆ. ಇಲ್ಲಿಂದ ಉತ್ತಮ ಸಾಧಕರಾಗಿ ಹೊರ ಬಂದು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಸಾಧಕರಾಗಿ ಇತರರಿಗೆ ಮಾದರಿಯಾಗಿ, ಚುಚ್ಚಿ ಮಾತನಾಡುವವರು ಮೆಚ್ಚಿ ಮಾತನಾಡುವಂತೆ ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು ಎಂದು ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಕಾರ್ಯದರ್ಶಿ ವೀರು ಶೆಟ್ಟಿ ಹೇಳಿದರು. ಅವರು ಉಜಿರೆಯ ರುಡ್ ಸೆಟ್ ನಲ್ಲಿ ನಡೆದ 30 ದಿನಗಳ ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ ಕಲ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಿತ ವಿದ್ಯೆಯಿಂದ ಸ್ವಾವಲಂಬಿಗಳಾಗಿ ಕುಟುಂಬಕ್ಕೆ ಹೆಮ್ಮೆ ತರುವ ರೀತಿಯಲ್ಲಿ ಮುಂದಡಿ ಇಡಬೇಕು ಎಂದು ಹೇಳಿದರು
ನಿರ್ದೇಶಕ ಎಂ.ಸುರೇಶ್ ಸ್ವಾಗತಿಸಿದರು. ಅತಿಥಿ ಉಪನ್ಯಾಸಕಿ ಮಾಧವಿ ರೈ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕಿ ಅನಸೂಯ ವಂದಿಸಿದರು. ಒಟ್ಟು 35 ಶಿಬಿರಾರ್ಥಿಗಳು ತರಬೇತಿ ಪಡೆದರು.