ನೇಸರ ಸೆ.20: ಶ್ರೀ ಧ.ಮಂ.ವಸತಿ ಪದವಿ ಪೂರ್ವ ಕಾಲೇಜು – ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬನ ನಡವಳಿಕೆಯಿಂದಲೇ ಆತ ಪಡೆದುಕೊಂಡಿರುವ ಶಿಕ್ಷಣ ಯಾವ ರೀತಿಯದು ಎಂದು ಅರ್ಥವಾಗುತ್ತದೆ. ಸಂಸ್ಕಾರಯುತ ಶಿಕ್ಷಣ ಪಡೆದವರು ತನ್ನ ಮತ್ತು ತಾನು ವಾಸಿಸುತ್ತಿರುವ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಪ್ರಯತ್ನಿಸುತ್ತಾನೆ ಎಂದು ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಬಿ. ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಓದುವ ಸಮಯದಲ್ಲಿ ವ್ಯಸನಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆದುಕೊಳ್ಳುವುದರ ಕಡೆಗೆ ಮನಸನ್ನು ಕೇಂದ್ರೀಕರಿಸಿ ಭವಿಷ್ಯದ ಬದುಕನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು. ಉಪ ಪ್ರಾಂಶುಪಾಲ ಮನೀಷ್ ಕುಮಾರ್ ಮಾತನಾಡಿ ಸದಾವಕಾಶಗಳು ದೊರೆಯುವ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಅನೇಕ ಕೆಟ್ಟ ಆಕರ್ಷಣೆಗಳಿಗೆ ಸಿಲುಕಿ ವಿದ್ಯಾರ್ಥಿ ಜೀವನವನ್ನು ವಿರೂಪಗೊಳಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು. ಪ್ರಾಚಾರ್ಯ ಡಾ. ಟಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ಭಾಷಾ ಉಪನ್ಯಾಸಕ ಸುನಿಲ್ ಪಂಡಿತ್ ಸ್ವಾಗತಿಸಿದರು. ಸಾಹಿತ್ಯ ಸಂಘದ ಸಂಯೋಜಕ ಪಾಶ್ವನಾಥ ಹೆಗ್ಡೆ ವಂದಿಸಿದರು.