ಭಜನೆ ಮೂಲಕ ಜಾತಿ ಎನ್ನುವ ಗೋಡೆ ಒಡೆದು ನಾವೆಲ್ಲಾ ಹಿಂದೂ ಎನ್ನುವ ಭಾವ ಮೂಡಿಸಬೇಕು – ಶ್ರೀ ರಾಜಶೇಖರಾನಂದ ಸ್ವಾಮೀಜಿ
ಕಡಬ: ಭಗವಂತನನ್ನು ಒಳಿಸಿಕೊಳ್ಳಲು ಭಜನೆ ಸುಲಭ ಮಾರ್ಗವಾಗಿದ್ದು, ಭಜನೆ ಮೂಲಕ ಜಾತಿ ಎನ್ನುವ ಗೋಡೆ ಒಡೆದು ನಾವೆಲ್ಲಾ ಹಿಂದೂ ಎನ್ನುವ ಭಾವ ಮೂಡಿಸಬೇಕು ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಅವರು ಶುಕ್ರವಾರ ಸಂಜೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಡಬ ಪ್ರಖಂಡದ ನೇತೃತ್ವದಲ್ಲಿ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಸಹಯೋಗದಲ್ಲಿ ನಡೆದ ಕುಣಿತ ಭಜನೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಇಹ ಪರಕ್ಕೆ ಸೇತುವಾಗಿರುವ ಭಜನೆ ಎಲ್ಲಾ ಕಡೆಯೂ ಅನುರಣಿಸುವಂತಾಗಬೇಕು. ಎಂದ ಹೇಳಿದ ಶ್ರೀಗಳು ಕಡಬ ಪರಿಸರದಲ್ಲಿ ವಿವಿಧ ಸಂಘಟನೆಗಳು ಸೇರಿಕೊಂಡು ಭಜನ ತರಬೇತಿ ಶಿಬಿರವನ್ನು ನಡೆಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧಾರ್ಮಿಕ ಉಪನ್ಯಾಸ ನೀಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಅವರು ನಮ್ಮ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಸಿಗಬೇಕು. ಭಜನೆಯ ಮೊದಲ ಮೆಟ್ಟಿಲನ್ನು ತೋರಬೇಕಾದವಳು ತಾಯಿ. ಬಾಲ ಸಂಸ್ಕಾರ ನೀಡುವಲ್ಲಿ ನಮ್ಮ ತಾಯಂದಿರು ಇನ್ನಷ್ಟು ಮುತುವರ್ಜಿ ವಹಿಸಬೇಕು. ನಮ್ಮ ಸಂಸ್ಕಾರ, ಸಂಸ್ಕೃತಿಗಳನ್ನು ಪಾಲಿಸಲು ಯಾವುದೇ ಕೀಳರಿಮೆ ಸಲ್ಲದು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನಾರಾಯಣಿ ಎನ್. ಭಟ್ ತೆಕ್ಕಡ್ಕ ಅವರು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಅನಗತ್ಯ ಆಕರ್ಷಣೆಗಳಿಗೆ ಒಳಗಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಅಲ್ಲಲ್ಲಿ ಭಜನಾ ತರಬೇತಿ ಮತ್ತು ಕುಣಿತ ಭಜನೆಯ ತರಬೇತಿಗಳು ನಡೆಯುತ್ತಿರುವುದು ಶುಭಸಂಕೇತ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯ ಮೇಲ್ವಿಚಾರಕ ರವಿ ಪ್ರಸಾದ್ ಆಲಾಜೆ, ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ, ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಕಡಬ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾನಾ ಸಮಿತಿಯ ಅಧ್ಯಕ್ಷ ಮುತ್ತುಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಭಜಕ ಸಾಧಕ ಪ್ರಶಸ್ತಿ ಪುರಸ್ಕೃತ ಜನಾರ್ದನ ಗೌಡ ಸೂಡ್ಲು, ಭಜನ ತರಬೇತುದಾರರಾದ ಸುಂದರ ಗೌಡ ಒಗ್ಗು, ದಿನೇಶ್ಕುಮಾರ್ ಎಂ., ವಿನೋದ್ಕುಮಾರ್, ಕುಸುಮಾಧರ, ಸತೀಶ್ ದೊಡ್ಡಕೊಪ್ಪ ಹಾಗೂ ಹಿರಣ್ಯ ದೊಡ್ಡಕೊಪ್ಪ ಅವರನ್ನು ಗೌರವಿಸಲಾಯಿತು. ಶಿಬಿರಾರ್ಥಿಗಳು ಸಮಾರಂಭದಲ್ಲಿ ಕುಣಿತ ಭಜನೆ ಪ್ರದರ್ಶಿಸಿದರು. ವಿಹಿಂಪನ ಮುಖವಾಣಿ ವಿಜಯಧ್ವನಿ ವೆಬ್ಸೈಟ್ನ ಲಾಂಛನವನ್ನು ಶ್ರೀಗಳು ಅನಾವರಣಗೊಳಿಸಿದರು.
ಮಾತೃಶಕ್ತಿ ಕಡಬ ಪ್ರಖಂಡದ ಪ್ರಮುಕ್ ಪ್ರಮೀಳಾ ಲೋಕೇಶ್ ಸ್ವಾಗತಿಸಿದರು. ಮಾತೃಶಕ್ತಿ ಜಿಲ್ಲಾ ಸಹಪ್ರಮುಖ್ ಗೀತಾ ಅಮೈ ಕೇವಳ ಪ್ರಸ್ತಾವನೆಗೈದರು. ಪುಷ್ಪಾ ಪ್ರಸಾದ್ ಸಮ್ಮಾನಿತರನ್ನು ಪರಿಚಯಿಸಿದರು. ಉಮೇಶ್ ಶೆಟ್ಟಿ ಸಾಯಿರಾಂ ಹಾಗೂ ಸವಿತಾ ಭಟ್ ಪಾಜೋವು ಕಾರ್ಯಕ್ರಮ ನಿರೂಪಿಸಿದರು. ವಿಶ್ವಹಿಂದೂ ಪರಿಷತ್ನ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ವಂದಿಸಿದರು. ಸುಂದರಿ ವೈಯಕ್ತಿಕ ಗೀತೆ ಹಾಡಿದರು.