ಬೆಳ್ತಂಗಡಿ: ರಾತ್ರಿ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದ ವ್ಯಕ್ತಿ ಮನೆಗೆ ಹಿಂತಿರುಗದೆ ಇದ್ದು ಆತನ ಮೃತದೇಹ ಗುರುವಾಯನಕೆರೆಯ ಕೆರೆಯಲ್ಲಿ ಪತ್ತೆಯಾದ ಘಟನೆ ಬುಧವಾರ ಸಂಭವಿಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವ್ಯಕ್ತಿ ಕುವೆಟ್ಟು ಗ್ರಾಮದ ನಿವಾಸಿ ಪ್ರವೀಣ್ ಪಿಂಟೋ (37)ಎಂಬವರಾಗಿದ್ದಾರೆ. ಗುರುವಾಯನಕೆರೆಯಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವ ಪ್ರವೀಣ್ ಪಿಂಟೋ ಮನೆಯಿಂದ ಓಡಿಲ್ನಾಳ ಗ್ರಾಮದ ಅಮರ್ ಜಾಲ್ ಎಂಬಲ್ಲಿಗೆ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಅವರು ಮನೆಗೆ ಬಾರದಿದ್ದಾಗ ಪತ್ನಿ ಕರೆಮಾಡಿದಾಗ ರಾತ್ರಿ 1.39ಕ್ಕೆ ತಾನು ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು. ಆದರೆ ಮನೆಗೆ ಹಿಂತಿರುಗಿರಲಿಲ್ಲ ಬಳಿಕ ಬೆಳಿಗ್ಗೆ ಪ್ರವೀಣ್ ಅವರ ಡ್ರೈವಿಂಗ್ ಲೈಸನ್ಸ್ ಹಾಗೂ ದಾಖಲೆಗಳು ಕೆರೆಯ ಸಮೀಪ ಪತ್ತೆಯಾಗಿರುವುದಾಗಿ ಅವರ ಪತ್ನಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೆಹಂದಿ ಮನೆಯಲ್ಲಿ ಪ್ರವೀಣ್ ಹಾಗೂ ವ್ಯಕ್ತಿಯೊಬ್ಬರ ಮಧ್ಯೆ ಮಾತನ ಚಕಮಕಿ ಹಾಗೂ ಹೊಡೆದಾಟ ನಡೆದಿರುವ ವಿಚಾರ ಬಳಿಕ ತಿಳಿದು ಬಂದಿರುವುದಾಗಿಯೂ ರಾತ್ರಿ 3 ಗಂಟೆಯ ಸುಮಾರಿಗೆ ತಮ್ಮ ಮನೆಯ ಸಮೀಪ ಕಾರೊಂದು ಬಂದು ಹೋಗಿರುವುದಾಗಿಯೂ ಮೃತದೇಹದಲ್ಲಿ ಪ್ರವೀಣ್ ಧರಿಸಿದ್ದ ಕೆಂಪು ಟೀ ಶರ್ಟ್ ಇರಲಿಲ್ಲ ಎಂದು ಇದರಿಂದಾಗಿ ಪ್ರವೀಣ್ ಅವರ ಅಸಹಜ ಸಾವಿನ ಬಗ್ಗೆ ಅನುಮಾನವಿದ್ದು ಕ್ರಮ ಕೈಗೊಳ್ಳುವಂತೆ ಮೃತರ ಪತ್ನಿ ರೇಷ್ಮಾ ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಮೃತದೇಹ ಮೇಲೆತ್ತಿದ ಮುಳುಗು ತಜ್ಞರು
ಗುರುವಾಯನಕೆರೆಯ ದಡದಲ್ಲಿ ರಿಕ್ಷಾ ಚಾಲಕನ ಚಪ್ಪಲಿ ಹಾಗೂ ದಾಖಲೆಗಳು ಸಿಕ್ಕಿದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿಯ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ಅಗ್ನಿ ಶಾಮಕ ದಳದವರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು, ಸ್ಥಳೀಯರು ಸೇರಿ ಬೆಳಗ್ಗಿನಿಂದಲೇ ಹುಡುಕಾಟ ಆರಂಭಿಸಿದ್ದರು. ಬಳಿಕ ಮುಳುಗು ತಜ್ಞರು ಆಗಮಿಸಿ ಮಧ್ಯಾಹ್ನ ವೇಳೆ ಕೆರೆಯಿಂದ ಮೃತದೇಹವನ್ನು ಮೇಲಕ್ಕೆ ಎತ್ತಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.