ಉಜಿರೆ: ನಮ್ಮಲ್ಲಿರುವ ಲೋಪದೋಷಗಳನ್ನು ತಿದ್ದುವ ಮೂಲಕ ವ್ಯಕ್ತಿತ್ವ ವಿಕಸನದೊಂದಿಗೆ ಮತ್ತಷ್ಟು ಸಾಧನೆಗೆ ಛಲ ನೀಡುವ ಜೇಸಿ ಸಮಾಜ ಸೇವೆಯ ಹುಮ್ಮಸ್ಸನ್ನು ಹೆಚ್ಚಿಸುತ್ತದೆ ಎಂದು ಜೇಸಿ 15ರ ವಲಯ ನಿಯೋಜಿತ ಅಧ್ಯಕ್ಷ ಪುರುಷೋತ್ತಮಶೆಟ್ಟಿ ಹೇಳಿದರು.
ಅವರು ಎಸ್ ಡಿಎಂ ಪಿಯು ಕಾಲೇಜಿನಲ್ಲಿ ಜರಗಿದ ಉಜಿರೆ ಜೇಸಿ ಸಪ್ತಾಹದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷಣಿಕ ಸುಖ, ವೇಗದ ಜಗತ್ತಿನೊಂದಿಗೆ ಪೈಪೋಟಿ ಮೂಲಕ ಮಾನವೀಯತೆ ಕಳೆದು ಹೋಗುವ ಸ್ಥಿತಿ ಇರುವ ಈಗಿನ ಕಾಲಘಟ್ಟದಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.ಉಜಿರೆಯ
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಮಾತನಾಡಿ ಪ್ರಾಮಾಣಿಕ ದುಡಿಮೆಯಿಂದ ಗೌರವದ ಬದುಕು ಸಾಧ್ಯ. ಸಂಘ ಸಂಸ್ಥೆಗಳು ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅದು ಅವರ ಜೀವನದ ಗತಿಯನ್ನೇ ಬದಲಾಯಿಸಬಹುದು ಎಂದರು.
ಉಜಿರೆ ಜೇಸಿಯ ಅಧ್ಯಕ್ಷ ದೀಕ್ಷಿತ್ ರೈ ಅಧ್ಯಕ್ಷತೆ ವಹಿಸಿದ್ದರು.
ಉಜಿರೆ ಜೇಸಿ ಸಂಸ್ಥೆಯ ಮಾರ್ಗದರ್ಶಕರಾದ ಬಿ.ಸೋಮಶೇಖರ ಶೆಟ್ಟಿ, ರಘುರಾಮಶೆಟ್ಟಿ ಡಾ.ಕುಮಾರ್ ಹೆಗ್ಡೆ, ಡಾ.ಎಂ.ಎಂ.ದಯಾಕರ, ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ, ಉಜಿರೆ ಜೇಸಿ ಕಾರ್ಯದರ್ಶಿ ವಿಕಾಸ್ ರಾವ್, ಜೆಜೆಸಿ ಅಧ್ಯಕ್ಷ ಕೃಷ್ಣರಾಜ ಪಡುವೆಟ್ನಾಯ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಮಹೇಶ್ ಶೆಟ್ಟಿ ಸ್ವಾಗತಿಸಿದರು. ಜೇಸಿಯ ಯೋಜನಾ ನಿರ್ದೇಶಕ ಅನಿಕೇತನ ಕೆ. ಹೆಗ್ಡೆ ವಂದಿಸಿದರು.
ಪ್ರಶಸ್ತಿ ಪ್ರದಾನ
ಉಜಿರೆ ಎಸ್.ಡಿ.ಎಂ. ಪಿಯು ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ದಿನೇಶ್ ಚೌಟ ಅವರಿಗೆ ‘ಶಿಕ್ಷಣ ರತ್ನ’ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಅವರಿಗೆ ‘ಸಮಾಜ ರತ್ನ’, ಜೇಸಿಯ ನಿಕಟ ಪೂರ್ವ ಅಧ್ಯಕ್ಷ ಡಾ.ನವೀನ್ ಕುಮಾರ್ ಜೈನ ಅವರಿಗೆ ‘ಕಮಲ ರತ್ನ’ ಪ್ರಶಸ್ತಿ ಪ್ರದಿನ ಮಾಡಲಾಯಿತು.
ಒಂದು ವಾರ ನಡೆದ ಕಾರ್ಯಕ್ರಮದಲ್ಲಿ ದಾನಾರಾಧನಂ, ಕ್ರೀಡಾರಾಧನಂ, ಸ್ವಚ್ಛತಾರಾಧನಂ, ಸಮೀಕ್ಷಾರಾಧನಂ, ಕಲಾರಾಧನಂ, ಆರೋಗ್ಯರಾಧನಂ, ಆಯುಷ್ಮಾನ್ ನಾರಾಧನಂ, ಧ್ಯೇಯದೊಂದಿಗೆ ಹಲವು ಸಮಾಜಮುಖಿ ಸೇವೆಗಳನ್ನು ನೀಡಲಾಯಿತು.