ಅರಸಿನಮಕ್ಕಿ : ನವೀಕರಣಗೊಳ್ಳುತ್ತಿರುವ ಅರಿಕೆಗುಡ್ಡೆಯ ಶ್ರೀ ವನದುರ್ಗಾ ದೇವಸ್ಥಾನದ ಸುತ್ತುಪೌಳಿ ನಿರ್ಮಾಣಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಗಳು ಹಕ್ಕಿ ಹಾರಬೇಕಾದರೆ ಎರಡು ರೆಕ್ಕೆಗಳು ಮುಖ್ಯ. ಅದೇ ರೀತಿ ನಮ್ಮ ಜೀವನ ಸುಲಲಿತವಾಗಿ ಸಾಗಲು ಪ್ರಯತ್ನ ಮತ್ತು ದೇವರ ಅನುಗ್ರಹ ಬೇಕು ಎಂದ ಶ್ರೀಗಳು, ತಾಯಿಗೆ ನಮಸ್ಕಾರ ಮಾಡಿದರೆ ಬದುಕಿನಲ್ಲಿ ಒಳ್ಳೆಯದಾಗುತ್ತದೆ ಎಂದು ಮಕ್ಕಳಿಗೆ ಗೊತ್ತಿರುವುದಿಲ್ಲ. ಆಗ ತಾಯಿಯೇ ಮಕ್ಕಳ ಕೈಯಿಂದ ತನಗೆ ನಮಸ್ಕಾರ ಮಾಡಿಸಿಕೊಂಡು ನನಗೆ ನಮಸ್ಕರಿಸಿದ ನಿನಗೆ ಒಳ್ಳೆಯದಾಗಲಿ ಎಂದು ಹರಸುತ್ತಾಳೆ. ದೇಗುಲ ನಿರ್ಮಾಣವೂ ಇದೇ ರೀತಿ. ಶ್ರೀ ಮಾತೆಯೇ ಭಕ್ತರಿಂದ ಎಲ್ಲವನ್ನೂ ಮಾಡಿಸಿಕೊಂಡು ಹರಸುತ್ತಾಳೆ. ನಾವೆಲ್ಲ ನಿಮಿತ್ತ ಮಾತ್ರ ಎಂದರು. ಆದಷ್ಟು ಬೇಗ ದೇಗುಲದ ಎಲ್ಲ ಕೆಲಸಗಳು ನಡೆದು ದುರ್ಗೆಯು ವಿರಾಜಮಾನಳಾಗಿ ಎಲ್ಲರಿಗೂ ಸುಖ, ಸಂತೋಷ, ಸಮೃದ್ಧಿ ಸಿಗುವಂತಾಲಿ ಎಂದು ಆಶೀರ್ವದಿಸಿದರು. ದೇಗುಲದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶ್ರೀಗಳು ನವೀಕರಣದ ಕೆಲಸ ಕಾರ್ಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ‘ಸುತ್ತುಪೌಳಿಗೆ ಕೆಂಪು ಕಲ್ಲು ಸಂಗ್ರಹ ಅಭಿಯಾನ’ದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆ ವಹಿಸಿ ನವೀಕರಣ ಕೆಲಸಗಳಿಗೆ ಸಹಕರಿಸುತ್ತಿರುವ ಭಕ್ತರಿಗೆ ಅಭಿನಂದನೆ ತಿಳಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ರೂ.10 ಲಕ್ಷ ನೀಡಿರುವುದು ಮತ್ತು ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರವರು ಸರಕಾರದಿಂದ ರೂ.50 ಲಕ್ಷ ನೀಡಿರುವುದಕ್ಕೆ ಕೃತಜ್ಞತೆ ತಿಳಿಸಿದರು. ಆಡಳಿತ ಸಮಿತಿ ಅಧ್ಯಕ್ಷರಾದ ಪದ್ಮಯ್ಯ ಬಾರಿಗ, ನೆಲ್ಯಾಡಿಯ ಬಾಲಾಜಿ ಮೆಡಿಕಲ್ಸ್ ಮಾಲಕರಾದ ಉದಯಕುಮಾರ್, ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಎಂ.ಪಿ.ರಾಜಗೋಪಾಲ್ ಉಪಸ್ಥಿತರಿದ್ದರು.
ಆಡಳಿತ ಸಮಿತಿ ಕೋಶಾಧಿಕಾರಿ ಮುರಳೀಧರ ಪಾಲೆಂಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್ ವಂದಿಸಿದರು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ವೃಷಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರದ ಅರ್ಚಕ ನಾರಾಯಣ ಅಭ್ಯಂಕರ್, ಪ್ರಭಾಕರ ಶೆಟ್ಟಿಗಾರ್, ರಾಘವ ಗೌಡ, ಜಯಪ್ರಸಾದ್ ಶೆಟ್ಟಿಗಾರ್, ಹರಿಶ್ಚಂದ್ರ ಶೆಟ್ಟಿಗಾರ್, ನಾಗೇಶ್ ಮೊದಲಾದವರು ಸಹಕರಿಸಿದರು.