190 ಕಾಲೇಜುಗಳ ಸಂಯೋಜನೆ ಮುಂದುವರಿಕೆ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಭೆ

ಶೇರ್ ಮಾಡಿ

ನೇಸರ ಡಿ.18: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ನಡೆದ 2020-21ನೇ ಸಾಲಿನ ತೃತೀಯ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ವಿ.ವಿ. ವ್ಯಾಪ್ತಿಯ 190 ಕಾಲೇಜುಗಳಿಗೆ 2021-22ನೇ ಸಾಲಿಗೆ ಮುಂದುವರಿಕೆ, ವಿಸ್ತರಣೆ ಮತ್ತು ಶಾಶ್ವತ ಸಂಯೋಜನೆಗೆ ಅನುಮೋದನೆ ನೀಡಲಾಯಿತು.
ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ ಜಿಲ್ಲೆಯ 31, ದಕ್ಷಿಣ ಕನ್ನಡದ 89 ಮತ್ತು ಕೊಡಗು ಜಿಲ್ಲೆಯ 15 ಖಾಸಗಿ ಕಾಲೇಜುಗಳಿಗೆ ಮುಂದುವರಿಕೆ, ವಿಸ್ತರಣೆ ಮತ್ತು ಶಾಶ್ವತ ಸಂಯೋಜನೆಗೆ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿದರೆ, ದ.ಕ. ಜಿಲ್ಲೆಯ ಒಂದು ಸರಕಾರಿ ಕಾಲೇಜು ಸಹಿತ 13 ಬಿಎಡ್‌ ಕಾಲೇಜುಗಳು, ಉಡುಪಿ ಮತ್ತು ಕೊಡಗು ಜಿಲ್ಲೆಗಳ ತಲಾ 2 ಬಿ.ಎಡ್‌ ಕಾಲೇಜುಗಳಿಗೆ ಸಂಯೋಜನೆಯನ್ನು ಮುಂದುವರಿಸಲು ಸಮ್ಮತಿ ನೀಡಲಾಯಿತು.
ದ.ಕ. ಜಿಲ್ಲೆಯ 22 ಸರಕಾರಿ ಕಾಲೇಜು ಗಳು, ಉಡುಪಿ ಜಿಲ್ಲೆಯ 10 ಸರಕಾರಿ ಕಾಲೇಜುಗಳು ಹಾಗೂ ಕೊಡಗು ಜಿಲ್ಲೆಯ 6 ಸರಕಾರಿ ಕಾಲೇಜುಗಳಿಗೆ ಸಂಯೋಜನೆ ಮುಂದುವರಿಕೆಗೆ ಶೈಕ್ಷಣಿಕ ಮಂಡಳಿ ಅನುಮೋದಿಸಿತು.
ರಾಷ್ಟ್ರೀಯ ಶಿಕ್ಷಣ ನೀತಿ
2021-22ನೇ ಸಾಲಿನಿಂದ ವಿ.ವಿ.ಯು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿದೆ. ಪೂರಕ ಪಠ್ಯಕ್ರಮ ಮತ್ತು ಹೊಸ ಹೊಸ ಕೋರ್ಸುಗಳನ್ನು ಪರಿಚಯಿಸಲು ಕ್ರಮ ಕೈಗೊಂಡಿದೆ. ವಿ.ವಿ. ನಡೆಸುವ ಸರ್ಟಿಫಿಕೆಟ್‌-ಡಿಪ್ಲೊಮಾ ಕೋರ್ಸುಗಳಿಗೆ ಏಕರೂಪದ ವಿನಿಮಯ ಜಾರಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಕುಲಪತಿ ತಿಳಿಸಿದರು.
ವರ್ಗಾವಣೆ ಶುಲ್ಕ ಹೊರೆ
ವಿದ್ಯಾರ್ಥಿಗಳು ಇನ್ನೊಂದು ಕಾಲೇಜಿಗೆ ತೆರಳುವ ಸಂದರ್ಭ ಪಡೆಯುವ ವರ್ಗಾವಣೆ ಶುಲ್ಕ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ಯಾವುದೇ ಷರತ್ತು ಶುಲ್ಕವಿಲ್ಲದೆ ನಿರಾಕ್ಷೇಪಣ ಪತ್ರ ನೀಡುವಂತೆ ಶೈಕ್ಷಣಿಕ ಮಂಡಳಿಯ ಸದಸ್ಯ ಡಾ| ಶಂಕರ ಭಟ್‌ ಮಂಡಿಸಿದ ನಿಲುವಳಿ ಕುರಿತಂತೆ ನಡೆದ ಚರ್ಚೆಯಲ್ಲಿ ಪ್ರೊ| ಯಡಪಡಿತ್ತಾಯ ವಿದ್ಯಾರ್ಥಿಗಳ ವರ್ಗಾವಣೆ ಶುಲ್ಕ ಕಡಿತ ಪ್ರಸ್ತಾವ ಪರಿಶೀಲಿಸಲಾಗುವುದು ಎಂದರು.
2022-23ನೇ ಶೈಕ್ಷಣಿಕ ಸಾಲಿನಿಂದ ಮಂಗಳೂರಿನ ಆ್ಯಗ್ನೆಸ್‌ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ವಿದ್ಯಾರ್ಥಿಗಳ ಸೇರ್ಪಡೆಯೊಂದಿಗೆ ಸಹಶಿಕ್ಷಣಕ್ಕೆ ಅಪೇಕ್ಷೆ ವ್ಯಕ್ತಪಡಿಸಿದ್ದು, ಕಾಲೇಜು ಆಡಳಿತ ಮಂಡಳಿ ಸಲ್ಲಿಸಿರುವ ಕೋರಿಕೆಗೆ ಶೈಕ್ಷಣಿಕ ಮಂಡಳಿ ಅನುಮತಿ ನೀಡಿತು.
ಕುಲಸಚಿವ ಪ್ರೊ| ಸಿ.ಕೆ. ಕಿಶೋರ್‌ ಕುಮಾರ್‌, ಪರೀûಾಂಗ ಕುಲಸಚಿವ ಪ್ರೊ| ಪಿ.ಎಲ್‌. ಧರ್ಮ, ಹಣಕಾಸು ಅಧಿಕಾರಿ ಪ್ರೊ| ನಾರಾಯಣ ಬದಿಯಡ್ಕ ಸಭೆಯಲ್ಲಿದ್ದರು.
ಕೊಡವ ಭಾಷೆಯಲ್ಲಿ ಎಂ.ಎ
ಮಂಗಳಗಂಗೋತ್ರಿ, ಚಿಕ್ಕಳುವಾರು ಸ್ನಾತಕೋತ್ತರ ಕೇಂದ್ರ ಮತ್ತು ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ 2021-22ನೇ ಸಾಲಿನಿಂದ ಕೊಡವ ಭಾಷೆಯ ಸ್ನಾತಕೋತ್ತರ ಪದವಿ ಅಧ್ಯಯನ ಪ್ರಾರಂಭಗೊಳ್ಳಲಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮತ್ತು ಪಠ್ಯ ರಚನೆ ಸಮಿತಿ ಅಧ್ಯಕ್ಷೆ ಡಾ| ಅಮ್ಮಾಪಂಡ ಪಾರ್ವತಿ ಅಪ್ಪಯ್ಯ ತಿಳಿಸಿದರು. ಡಾ| ಪಾರ್ವತಿ ಅಪ್ಪಯ್ಯ ನೇತೃತ್ವದಲ್ಲಿ ಸಿದ್ಧ‌ಪಡಿಸಲಾದ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು. ಪದವಿಯಲ್ಲೂ ಕೊಡವ ಭಾಷೆಯ ಕಲಿಕೆ ಅಳವಡಿಸಲಾಗಿದೆ.

Leave a Reply

error: Content is protected !!