ಕಡಬ ತಾಲೂಕು ಅಕ್ಷರದಾಸೋಹ ನೌಕರರ ಸಂಘ(ಸಿಐಟಿಯು) ವತಿಯಿಂದ ಅಕ್ಷರದಾಸೋಹ ನೌಕರರಿಗೆ ಕನಿಷ್ಠವೇತನ ಜಾರಿಗೊಳಿಸಬೇಕು ಎಂದು ಅಗ್ರಹಿಸಿ ಸೋಮವಾರ ಕಡಬ ತಹಸೀಲ್ದಾರ್ ಕಛೇರಿ ಎದರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಕಡಬ ಪೇಟೆಯಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಛೇರಿ ಎದುರು ಜಮಾಯಿಸಿದ ನೌಕರರು ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಮ್.ಭಟ್ ಅಕ್ಷರದಾಸೋಹ ನೌಕರರನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಬೆಳಿಗ್ಗೆಯಿಂದ ಸಂಜೆ ತನಕ ದುಡಿದು ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸಿದರೂ ಅವರಿಗೆ ಕನಿಷ್ಠವೇತನ ಜಾರಿಯಾಗದೆ ಬದುಕು ನಡೆಸುವುದು ಕಷ್ಠವಾಗಿದೆ, ಕಳೆದ ಬಜೆಟ್ನಲ್ಲಿ ಕೇವಲ ರೂ 1000 ಏರಿಕೆ ಮಾಡಿ ಕೈತೊಳೆದುಕೊಂಡ ಸರಕಾರದ ಕ್ರಮ ಸರಿಯಲ್ಲ. ಕನಿಷ್ಟವೇತನ ಜಾರಿಯಾಗುವ ತನಕ ಮಾಸಿಕ ರೂ 10,000 ವೇತನ ನೀಡಬೇಕು ಎಂದು ಅಗ್ರಹಿಸಿದರು.
ಅಕ್ಷರದಾಸೋಹ ನೌಕರರಿಗೆ ಕಾನೂನುಬದ್ಧ ಕೆಲಸದ ಭದ್ರತೆ ಒದಗಿಸಬೇಕು, ನೌಕರರಿಗೆ ಮೂರು ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುವ ಬದಲಿಗೆ ಪ್ರತೀ ತಿಂಗಳ ಮೊದಲವಾರ ಸಿಗುವಂತಾಗಬೇಕು. ನೌಕರರು ನಿವೃತ್ತಿಹೊಂದಿದಾಗ ಗ್ರಾಚುಟಿ ಮಾದರಿಯಲ್ಲಿ ಪರಿಹಾರ ನೀಡಬೇಕು. ನಿವೃತ್ತಿ ವೇತನ ಜಾರಿ ಮಾಡಬೇಕು, ಬೆಲೆ ಏರಿಕೆ ತಡೆದು ಜನ ಸಾಮಾನ್ಯರ ಬದುಕಿನ ರಕ್ಷಣೆ ಮಾಡಬೇಕು, ಸರಕಾರ ಕಾರ್ಮಿಕ ವಿರೋಧಿ ಧೋರಣೆ ನಿಲ್ಲಿಸಬೇಕು ಎಂಬಿತ್ಯಾದಿ ಹಕ್ಕೊತ್ತಾಯವನ್ನು ಮಂಡಿಸಿ ತಹಸೀಲ್ದಾರ್ ರಮೇಶ್ ಬಾಬು ಅವರ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಪ್ರತಿಯನ್ನು ಅಕ್ಷರದಾಸೋಹ ನಿರ್ದೆಶಕ ವಿಷ್ಣುಪ್ರಸಾದ್ ಅವರಿಗೆ ಸಲ್ಲಿಸಲಾಯಿತು.
ಕಡಬ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ರೇವತಿ ಮನವಿ ಓದಿದರು. ಕಾರ್ಮಿಕ ನಾಯಕಿಯರಾದ ಈಶ್ವರಿ, ನೆಬಿಸಾ, ಅಕ್ಷರದಾಸೋಹ ನೌಕರರ ಸಂಘದ ಕಾರ್ಯದರ್ಶಿ ಮೀನಾಕ್ಷಿ, ಕಾರ್ಮಿಕ ಮುಖಂಡ ಚಂದ್ರಶೇಖರ ಭಟ್ ಮತ್ತಿತರರು ಉಪಸ್ಥಿತರಿದ್ದರು.