ಧರ್ಮಸ್ಥಳ: “ಸುಖ ಸಂಸಾರದ ಯಶಸ್ಸಿನ ಗುಟ್ಟು ಕುಟುಂಬ ಸದಸ್ಯರ ಬಗ್ಗೆ ವಿಶೇಷ ಗಮನಹರಿಸುವುದು ಇದನ್ನು ಡಾ.ಡಿ. ವೀರೇಂದ್ರ ಹೆಗ್ಗಡೆ ದಂಪತಿಯ ದಾಂಪತ್ಯ ತೋರಿಸುತ್ತಿದೆ. ಜೀವನದಲ್ಲಿ ತಪ್ಪಾದ ಪದಗಳಿಂದ ಅಪಾಯ, ಹಿತವಾದ ಪದಗಳ ಮೂಲಕ ಸಾಮರಸ್ಯ ಮೂಡುತ್ತದೆ” ಎಂದು ಖ್ಯಾತ ಚಲನಚಿತ್ರ ನಟ, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ರಾಯಭಾರಿ ರಮೇಶ್ ಅರವಿಂದ ಹೇಳಿದರು.
ಡಾ.ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರನ್ನು ಭಾರತದ ಘನ ಸರಕಾರ ರಾಜ್ಯ ಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿರುವ ಸಂಭ್ರಮ, ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ನೀಡಿರುವ ಗೌರವ ಡಾಕ್ಟರೇಟ್, ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ವೈವಾಹಿಕ ಜೀವನದ ಸುವರ್ಣ ವರ್ಷ ಡಾ. ಡಿ.ವೀರೇಂದ್ರ ಹೆಗ್ಗಡೆಯವರ 75 ನೇ ಸಂವತ್ಸರಕ್ಕೆ ಪಾದಾರ್ಪಣೆಗೊಂಡ ಸಂಭ್ರಮಗಳ ಕುರಿತು ಕ್ಷೇತ್ರದ ಸಿಬ್ಬಂದಿ ವರ್ಗ ಹಾಗೂ ಊರ ನಾಗರಿಕರು ಹೆಗ್ಗಡೆ ದಂಪತಿಗಳಿಗೆ ಗೌರವ ನೀಡಲು ಏರ್ಪಡಿಸಿದ್ದ ‘ಸಂಭ್ರಮಗಳ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳದ ಅಮೃತ ವರ್ಷಿಣಿ ಸಭಾ ಭವನದಲ್ಲಿ ನಡೆದ ಈ ಕಾರ್ಯಕ್ರಮ ಬುಧವಾರ ಜರಗಿತು.
“ನಮ್ಮ ಯೋಚನೆಗಳೆ ಸ್ವರ್ಗ-ನರಕ, ದಾಂಪತ್ಯ ಚೆನ್ನಾಗಿ ನಡೆಯಲು ಯೋಚನೆಗಳು ಉತ್ತಮವಾಗಿರಬೇಕು. ಕೊರತೆಗಳ ಬಗ್ಗೆ ಗಮನಹರಿಸದೆ ವಿಷಯಗಳತ್ತ ಒಲವು ತೋರಬೇಕು. ಕುಟುಂಬದ ಕನಸುಗಳಿಗೆ ಸ್ಪಂದಿಸುವುದೇ ಪ್ರೀತಿ. ಮನೆಯಲ್ಲಿ ನೆಮ್ಮದಿ ಇಲ್ಲದಿದ್ದರೆ ಯಾವುದೇ ಸಾಧನೆ ಕೈಗೂಡದು” ಎಂದು ಹೇಳಿದರು.
ಡಾ.ಹೇಮಾವತಿ ವೀ. ಹೆಗ್ಗಡೆ ಮಾತನಾಡಿ “ಧರ್ಮಸ್ಥಳದಲ್ಲಿ ದೇವಸ್ಥಾನ, ಬೀಡು, ಸಿಬ್ಬಂದಿಗಳು, ಊರವರು ಒಂದಾಗಿ ಕಾರ್ಯ ನಿರ್ವಹಿಸುತ್ತಾರೆ. ಉಜಿರೆಯ ಜನ ಇದಕ್ಕೆ ಉತ್ತಮ ಸ್ಪಂದನೆ ಹಾಗೂ ತಾಲೂಕಿನ ಜನತೆ ಸೇತುವೆಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕೆಲಸ ಕಾರ್ಯಗಳನ್ನು ಒಗ್ಗಟ್ಟಾಗಿ ನಿರ್ವಹಿಸುವುದರಿಂದ ಕಹಿ ಘಟನೆಗಳನ್ನು ಸಿಹಿಯಾಗಿ ಪರಿವರ್ತಿಸಬಹುದು. ಕ್ಷೇತ್ರದಿಂದ ನಡೆಯುವ ಯಾವುದೇ ಕೆಲಸಗಳು ಇತರರ ಅನುಕರಣೆಯಲ್ಲ. ಸ್ವಂತ ಯೋಚನೆಗಳಿಂದ ಮೂಡಿ ಬಂದು ಇತರರಿಗೆ ಮಾದರಿಯಾಗಿದೆ.
ಅಭಾವ, ಪ್ರಭಾವ, ಭಾವಗಳಿಂದ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣಲಾಗುತ್ತದೆ.”ಎಂದರು.
ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್ ಸುಪ್ರಿಯಾ ಹರ್ಷೆಂದ್ರ ಕುಮಾರ್, ಪದ್ಮಲತಾ, ಡಾ. ನಿರಂಜನ್ ಕುಮಾರ್, ಶ್ರದ್ಧಾ, ಅಮಿತ್, ಶ್ರೇಯಸ್ ಕುಮಾರ್, ಸಂಹಿತಾ, ನಿಶ್ಚಲ್ ಕುಮಾರ್, ಶಾಸಕ ಹರೀಶ್ ಪೂಂಜ, ಅರ್ಚನಾ ರಮೇಶ್ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.
ಎಸ್ ಕೆ ಡಿ ಆರ್ ಡಿ ಪಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಶ್ರೀನಿವಾಸ ರಾವ್ ಅಭಿನಂದನಾ ಪತ್ರ ವಾಚಿಸಿದರು. ಶಂಕರ ಪೈ ಮತ್ತು ಬಳಗದವರಿಂದ ಪ್ರಾರ್ಥನೆ, ದಿವ್ಯಶ್ರೀ ಮತ್ತು ಬಳಗದವರಿಂದ ಕಾವ್ಯಾಭಿನಂದನ, ಸೋಮ ಸುಂದರ ಭಟ್ ಮತ್ತು ಬಳಗದಿಂದ ವೇದಘೋಷ, ದಿವ್ಯಶ್ರೀ ಮತ್ತು ಬಳಗ, ಅನಸೂಯಾ ಫಾಟಕ್, ಮನೋರಮಾ ತೋಳ್ಪಾಡಿತಾಯ ಮತ್ತು ಬಳಗದವರಿಂದ ಗೀತೆಗಳು, ರಂಗಶಿವ ಕಲಾ ಬಳಗದವರಿಂದ ಗಾನ ವೈಭವ, ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಕಲವೈಭವ ಮೊದಲಾದ ಕಾರ್ಯಕ್ರಮಗಳು ಜರುಗಿದವು.
ಸಂಭ್ರಮವನ್ನು ಜತೆಯಾಗಿ ಆಚರಿಸೋಣ ಡಾ.ಡಿ.ವೀರೇಂದ್ರ ಹೆಗ್ಗಡೆ
“ಕುಟುಂಬದ ಸದಸ್ಯರು ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಂಡು ಕೆಲಸ ಮಾಡುತ್ತಿರುವುದರಿಂದ ಎಲ್ಲಾ ವ್ಯವಸ್ಥೆಗಳು ಸುಸೂತ್ರವಾಗಿ ನಡೆಯುತ್ತಿವೆ. ಸಿಬ್ಬಂದಿಗಳ ಕಾರ್ಯವೈಖರಿ, ಊರವರ ಹೊಣೆಗಾರಿಕೆ, ಭಕ್ತರು ಕ್ಷೇತ್ರದ ಮೇಲೆ ಇಟ್ಟಿರುವ ಗೌರವ ಪ್ರತಿ ಕೆಲಸಗಳು ಸುಲಲಿತವಾಗಿ ನಡೆಯಲು ಅನುಕೂಲವಾಗಿದೆ. ಪ್ರೀತಿಗೆ ಸರಿಸಮಾನವಾದದ್ದು ಇನ್ನೊಂದಿಲ್ಲ ಹಂಚಿದಷ್ಟು ಜಾಸ್ತಿಯಾಗುವುದು ಪ್ರೀತಿ, ವಿಶ್ವಾಸ. ಎಲ್ಲಾ ಸಂಭ್ರಮವನ್ನು ಜತೆಯಾಗಿ ಆಚರಿಸಬೇಕು.
ಸಂಸದರ ನಿಧಿಯಿಂದ ಸಿಗುವ 6 ಕೋಟಿ ರೂ.ಗಳನ್ನು ಬೀದರ್ ಹಾಗೂ ಯಾದಗಿರಿ ಜಿಲ್ಲೆಯ ಹಾಲು ಉತ್ಪಾದನಾ ಸಂಘಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು.”