ನೆಲ್ಯಾಡಿ: ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತೃತ ಕಟ್ಟಡದ ಸಭಾಂಗಣ ಉದ್ಘಾಟನೆ ಮತ್ತು ಬೆಳ್ಳಿಹಬ್ಬ ಡಿ.29ರಂದು ನಡೆಯಿತು.
ದ.ಕ.ಸಹಕಾರಿ ಹಾಲು ಒಕ್ಕೂಟ ಮಂಗಳೂರು ಇದರ ಉಪಾಧ್ಯಕ್ಷರಾದ ಎಸ್.ಬಿ.ಜಯರಾಮ ರೈ ಬಳಜ್ಜ ವಿಸ್ತೃತ ಕಟ್ಟಡದ ಸಭಾಂಗಣದ ಉದ್ಘಾಟನೆ ನೆರವೇರಿಸಿದರು. ದ.ಕ.ಸಹಕಾರಿ ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅವರು ದೀಪ ಪ್ರಜ್ವಲನೆ ಮಾಡಿ ಮಾತನಾಡಿದ ಅವರು ಸಾಂಪ್ರದಾಯಿಕ ಕಸುಬುಗಳಾದ ಕೃಷಿ ಹಾಗೂ ಹೈನುಗಾರಿಕೆಯಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ. ಆದ್ದರಿಂದ ನಾವು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮುಂದುವರಿದಿರುವುದರಿಂದ, ಆಧುನಿಕ ಕ್ರಮಗಳನ್ನು ಉಪಯೋಗಿಸಿಕೊಂಡು ಯುವ ಜನರು ಹೈನುಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕೆಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ಗುಣಮಟ್ಟದಲ್ಲಿ ಅತ್ಯುತ್ತಮ ಎಂಬ ಹೆಸರು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಜಾನುವಾರುಗಳಿಗೆ ಮಾರಕವಾದ ಚರ್ಮಗಂಟು ರೋಗ ಕಂಡುಬಂದಿರುವುದರಿಂದ ಹಾಲಿನ ಉತ್ಪಾದನೆಯಲ್ಲಿಯೂ ಕೊರತೆ ಉಂಟಾಗಿದೆ. ಹಾಲು ಉತ್ಪಾದಕರಿಗೆ ಹೆಚ್ಚು ದರ ನೀಡುವ ಸಂಬಂಧ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದರು.
ದ.ಕ.ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಮಾತನಾಡಿ, ಕೃಷಿ ಹಾಗೂ ಹೈನುಗಾರಿಕೆ ಕ್ಷೇತ್ರ ಈಗ ಸಂಕಷ್ಟ ಎದುರಿಸುತ್ತಿದೆ. ಜಾನುವಾರುಗಳಿಗೆ ಬಂದಿರುವ ಚರ್ಮಗಂಟು ರೋಗದಿಂದ. ಈ ಬಗ್ಗೆ ಹೈನುಗಾರರಿಗೆ ಒಕ್ಕೂಟದಿಂದ ನೆರವು ನೀಡುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದ್ದೇವೆ. ಹೆಚ್ಚಿನ ರೈತರು ಹಳ್ಳಿಗಳಲ್ಲಿ ಅಡಿಕೆ ಕೃಷಿಯತ್ತ ಮುಖ ಮಾಡಿರುವುದರಿಂದ ಹೈನುಗಾರಿಕೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ, ಹಾಲು ಉತ್ಪಾದನೆಯ ವೆಚ್ಚವೂ ಅಧಿಕವಾಗಿರುವುದರಿಂದ ಹೈನುಗಾರರಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡುವ ನಿಟ್ಟಿನಲ್ಲಿ ಸರಕಾರದ ಜೊತೆ ನಿಯೋಗದೊಂದಿಗೆ ತೆರಳಿ ಮಾತುಕತೆ ನಡೆಸುವುದಾಗಿ ಹೇಳಿದರು.
ಅತಿಥಿಯಾಗಿದ್ದ ದ.ಕ.ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಮಾತನಾಡಿ, ಮೇವಿನ ಕೊರತೆ, ಜಾನುವಾರುಗಳಿಗೆ ಚರ್ಮಗಂಟು ರೋಗದಿಂದಾಗಿ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದನ್ನು ಸರಿದೂಗಿಸಲು ಒಕ್ಕೂಟದಿಂದ ಪ್ರಯತ್ನ ನಡೆಯುತ್ತಿದೆ ಎಂದರು. ಇನ್ನೋರ್ವ ಅತಿಥಿ ದ.ಕ.ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಮತ್ತು ನಿರ್ದೇಶಕಿ ಸವಿತಾ ಎನ್.ಶೆಟ್ಟಿ, ದ.ಕ.ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಅಶೋಕ್‌ರವರು,
ದ.ಕ.ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ|ನಿತ್ಯಾನಂದ ಭಕ್ತ, ಉಪವ್ಯವಸ್ಥಾಪಕ ಡಾ|ಸತೀಶ್ ರಾವ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘವನ್ನು ಆರಂಭಿಸಿದ ಸಂಘದ ಸ್ಥಾಪಕಾಧ್ಯಕ್ಷ ಎನ್ ವಿ ವ್ಯಾಸ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಘದ ಸ್ಥಾಪಕಾಧ್ಯಕ್ಷ ಎನ್.ವಿ.ವ್ಯಾಸ ನೆಕ್ಕರ್ಲ ಅವರು, ನೆಲ್ಯಾಡಿ ಸಂತೆಮಾರುಕಟ್ಟೆ ಬಳಿ ಪಂಚಾಯತ್ ಕಟ್ಟಡದಲ್ಲಿ ಸಂಘ 7ಲೀ.ಹಾಲು ಹಾಲು ಸಂಗ್ರಹದೊಂದಿಗೆ ಆರಂಭಗೊಂಡಿತು. ಬೆಂಗಳೂರಿನಿಂದ ಲಾರಿಯಲ್ಲಿ ಹಸುಗಳನ್ನು ತಂದು, ರೈತರಿಗೆ ಬ್ಯಾಂಕ್‌ನಿಂದ ಸಾಲ ಕೊಡಿಸಿ ಸಾಕಾಣಿಕೆ ಮಾಡಲಾಗಿತ್ತು. ಬ್ಯಾಂಕ್ ಸಾಲ ಮರುಪಾವತಿಯ ಜವಾಬ್ದಾರಿಯನ್ನೂ ಸಂಘವೇ ಪಡೆದುಕೊಂಡಿತ್ತು. ಬಳಿಕ ಸಂಘಕ್ಕೆ 10 ಸೆಂಟ್ಸ್ ನಿವೇಶನ ದೊರೆತು 1.75 ಲಕ್ಷ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಯಿತು. ಹೈನುಗಾರಿಕೆಯಿಂದಾಗಿ ಹಲವು ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಿರುತ್ತಾರೆ ಎಂದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಮಹಾಬಲ ಶೆಟ್ಟಿಯವರು, 30 ವರ್ಷದ ಹಿಂದೆ ನೆಲ್ಯಾಡಿ ಭಾಗದಲ್ಲಿ ಹಾಲು ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಹಾಲುಗಳನ್ನು ಹೋಟೆಲ್ ಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಎನ್.ವಿ.ವ್ಯಾಸರವರು ನೆಲ್ಯಾಡಿ, ಕೌಕ್ರಾಡಿ ಹಾಗೂ ಕೊಣಾಲು ಗ್ರಾಮದ ವ್ಯಾಪ್ತಿಗೆ ಒಳಪಟ್ಟಂತೆ ನೆಲ್ಯಾಡಿ ಸಂತೆಕಟ್ಟೆ ಬಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆರಂಭಿಸಿದ್ದರು. ಆ ಸಂದರ್ಭದಲ್ಲಿ 7 ಲೀ. ಹಾಲು ಸಂಗ್ರಹವೂ ಆಗುತಿತ್ತು. 1996ರಲ್ಲಿ ಸ್ವಂತ ನಿವೇಶನದಲ್ಲಿ 1.75ಲಕ್ಷ ರೂ., ಅನುದಾನದಲ್ಲಿ ಸಣ್ಣ ಕಟ್ಟಡ ನಿರ್ಮಾಣ ಮಾಡಲಾಯಿತು. ಸುಮಾರು 14 ವರ್ಷ ಎನ್.ವಿ.ವ್ಯಾಸ ಅವರು ಸಂಘವನ್ನು ಮುನ್ನಡೆಸಿದ್ದಾರೆ. ಅವರು ನೆಟ್ಟ ಸಸಿಯನ್ನು ನಾವು ಪೋಷಣೆ ಮಾಡುತ್ತಿದ್ದೇವೆ. ಈಗ ಸಂಘದಲ್ಲಿ ಸುಮಾರು 5 ಸಾವಿರ ಲೀ.ಸಾಮರ್ಥ್ಯದ ಸಾಂದ್ರ ಶೀತಲೀಕರಣ ಇದ್ದು ಪ್ರತಿದಿನ 1500 ಲೀ.ಹಾಲು ಸಂಗ್ರಹ ಆಗುತ್ತಿದೆ. ಸಂಘದ ಬೆಳವಣಿಗೆಗೆ ಹೈನುಗಾರರೇ ಕಾರಣ. ಈಗ ಸಭಾಂಗಣವೂ ಉದ್ಘಾಟನೆಗೊಂಡಿದ್ದು ಮುಂದಕ್ಕೆ ಸಂಘದ ಸದಸ್ಯರಿಗೆ ಕಾರ್ಯಕ್ರಮಗಳಿಗೆ ನಿರ್ವಹಣಾ ವೆಚ್ಚ ಪಡೆದುಕೊಂಡು ನೀಡಲಿದ್ದೇವೆ ಎಂದರು.
ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ, ನಿರ್ದೇಶಕರಾದ ಎನ್.ವಿಠಲ್ ಶೆಟ್ಟಿ, ಕಾಂತಪ್ಪ ಗೌಡ, ಜಯರಾಮ ಬಿ., ಹೊನ್ನಪ್ಪ ಗೌಡ, ಹೆಚ್.ಬಿ.ಜೋಗಿತ್ತಾಯ, ಚಂದ್ರಶೇಖರ ಹೆಚ್., ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿಯವರು ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಅನುರಾಧಾ ಹೆಚ್. ವರದಿ ವಾಚಿಸಿ, ಕೊನೆಯಲ್ಲಿ ವಂದಿಸಿದರು. ರಕ್ಷಿತಾ ಪ್ರಾರ್ಥಿಸಿದರು. ಸುಧೀರ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಹಾಲು ಪರೀಕ್ಷಕಿ ನಳಿನಾಕ್ಷಿ, ಸಹಾಯಕಿ ಗಿರಿಜ, ಬ್ರಾಂಚ್ ಸಹಾಯಕಿಯರಾದ ವಿಜಯ, ಜಯಂತಿ, ಸಾಂದ್ರ ಶೀತಲೀಕರಣ ನಿರ್ವಾಹಕ ಪರಮೇಶ್ವರ, ಕೃ.ಗ.ಕಾರ್ಯಕರ್ತ ಜಯರಾಮ ಬಿ., ಸಹಕರಿಸಿದರು.
ಕಡಬ ಶಿಬಿರ ಕಚೇರಿಯ ಪಶುವೈದ್ಯಾಧಿಕಾರಿ ಡಾ.ಸಚಿನ್, ವಿಸ್ತರಣಾಧಿಕಾರಿಗಳಾದ ಯಮುನಾ, ಆದಿತ್ಯ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ಸೀನಿಯರ್ ಛೇಂಬರ್‌ನ ಅಧ್ಯಕ್ಷ ವೆಂಕಟ್ರಮಣ ಆರ್., ತಾ.ಪಂ.ಮಾಜಿ ಸದಸ್ಯೆ ಬೇಬಿ ಸದಾನಂದ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ
ವಿಸ್ತೃತ ಕಟ್ಟಡದ ಸಭಾಂಗಣ ಕಾಮಗಾರಿ ನಿರ್ವಹಿಸಿದ ಇಂಜಿನಿಯರ್ ಚಾಕೋ, ಸಂಘದ ಮಾಜಿ ನಿರ್ದೇಶಕರಾದ ಪಿ.ಸಿ.ಅಬ್ರಹಾಂ, ಕೆ.ಜೆ.ಜೋಸ್, ಕೊರಗಪ್ಪ ಗೌಡ, ನಾರಾಯಣ ನಾಯ್ಕ, ಸದಾನಂದ ಪಿ., ವೆಂಕಪ್ಪ ನಾಯ್ಕ, ವಲ್ಸಮ್ಮ ಮ್ಯಾಥ್ಯು, ರವಿಚಂದ್ರ, ಶೇಖರ ಗೌಡ, ಎನ್.ಜೋಯಿ, ಮಾರ್ಸೆಲ್ ಡಿ.ಸೋಜ, ಹರಿಪ್ರಸಾದ್, ಗುರುಪ್ರಸಾದ್, ಸೇಸಮ್ಮ, ಗಿರಿಜ, ವಾರಿಜ, ಜಯರಾಮ ಬಿ., ಹೊನ್ನಪ್ಪ ಗೌಡ, ಕಾಂತಪ್ಪ ಗೌಡ, ಎನ್.ವಿಠಲ ಶೆಟ್ಟಿ, ಪ್ರೇಮಾವತಿ, ಚಂದ್ರಶೇಖರ ಹೆಚ್. ಹೇಮಾವತಿ, ಹೆಚ್.ಬಿ ಜೋಗಿತ್ತಾಯರವರಿಗೆ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು.