ನೆಲ್ಯಾಡಿ: ಅನಾರೋಗ್ಯದಿಂದ ಮಾನಸಿಕವಾಗಿ ಬೇಸತ್ತು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಜ.24ರ ಸಂಜೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ನೆಲ್ಯಾಡಿ ಸಮೀಪದ ಪಡುಬೆಟ್ಟು ಕುವೆತ್ತಳಿಕೆ ನಿವಾಸಿ ಶೀನಪ್ಪ ನಾಯ್ಕ್ (81) ಎಂದು ಗುರುತಿಸಲಾಗಿದೆ.
ಶೀನಪ್ಪ ನಾಯ್ಕರಿಗೆ ಕಳೆದ 20 ವರ್ಷಗಳಿಂದ ಚರ್ಮ ಸಂಬಂಧಿತ ಕಾಯಿಲೆಯಿದ್ದು ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಈ ಸಮಸ್ಯೆಯಿಂದ ಅವರು ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಕಳೆದೊಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಈ ಬಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಶೀನಪ್ಪ ನಾಯ್ಕರು 24ರ ಬದಲು 25 ರಂದು ಚಿಕಿತ್ಸೆಗೆ ಹೋಗುವ ಎಂದು ಮಗನಲ್ಲಿ ತಿಳಿಸಿದ್ದಾರೆ. ಆ ಬಳಿಕ ಮಗ ಹಾಗೂ ಸೊಸೆ ಕೆಲಸಕ್ಕೆ ಎಂದು ನೆಲ್ಯಾಡಿಗೆ ತೆರಳಿದ್ದಾರೆ. ಇತ್ತ ಮನೆಯಲ್ಲಿ ಶೀನಪ್ಪ ನಾಯ್ಕರು ಪತ್ನಿ ಹಾಗೂ ಮೊಮ್ಮಗಳ ಜೊತೆ ಇದ್ದು, ಪತ್ನಿ ದನದ ಕೆಲಸಕ್ಕೆಂದು ಹೋದಾಗ, ಶೀನಪ್ಪ ನಾಯ್ಕ್ ಮನೆಯಿಂದ ಹೊರ ಹೋಗಿ ಸಮೀಪದ ಗೇರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚರ್ಮದ ಕಾಯಿಲೆಯಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ ಹೊಂದಿ ತಂದೆ ಈ ಕೃತ್ಯವೆಸಗಿದ್ದಾರೆ ಎಂದು ಮೃತರ ಪುತ್ರ ಉಪ್ಪಿನಂಗಡಿ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ. ಮಗನ ಹೇಳಿಕೆಯಂತೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.