ಹಣಕಾಸಿನ ವಿವೇಕತೆಗೆ ಒತ್ತು ನೀಡಿರುವ ದೂರದೃಷ್ಟಿಯ ಬಜೆಟ್

ಶೇರ್ ಮಾಡಿ
ಡಾ. ಎ. ಜಯಕುಮಾರ ಶೆಟ್ಟಿ
ಪ್ರಾಂಶುಪಾಲರು
ಶ್ರೀ.ಧ.ಮಂ.ಕಾಲೇಜು, ಉಜಿರೆ

ದೇಶವನ್ನು ಮುನ್ನಡೆಸಲಿರುವ ಸಪ್ತರ್ಷಿಗಳು
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ ಏಳು ಆದ್ಯತಾ ವಲಯವನ್ನು ‘ಸಪ್ತರ್ಷಿ’ ಮಾರ್ಗ ಎಂದು‌‌ ಪರಿಗಣಿಸಿ ಕೇಂದ್ರ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿದೆ. ಮೂಲಸೌಕರ್ಯ, ಸಾಮರ್ಥದ ಸದ್ಭಳಕೆ, ಯುವ ಸಬಲೀಕರಣ, ಆರ್ಥಿಕ ಸುಧಾರಣೆ, ಅಭಿವೃದ್ಧಿ, ಎಲ್ಲರಿಗೂ ಸಮಾನ ಸವಲತ್ತು, ಪರಿಸರ ಸ್ನೇಹಿ ಅಭಿವೃದ್ಧಿಗೆ ಕೇಂದ್ರ ಬಜೆಟಿನಲ್ಲಿ ಆದ್ಯತೆ ನೀಡಲಾಗಿದೆ.

ಸಪ್ತ ಸೂತ್ರಗಳಲ್ಲಿ ಮಂಡನೆಯಾದ ಬಜೆಟ್
ಈ ಬಾರಿಯ ಕೇಂದ್ರ ಬಜೆಟ್ ಸಪ್ತ ಸೂತ್ರಗಳ ಮೇಲೆ ಆಧಾರಿತವಾಗಿದೆ. ಇದಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ 35 ಸಾವಿರ ಕೋಟಿ ರೂ. ವ್ಯಯಿಸಲು ತೀರ್ಮಾನಿಸಲಾಗಿದೆ. ಈ ಪೈಕಿ ದೇಶದ ಆಂತರಿಕ ಅಭಿವೃದ್ದಿ, ಮೂಲ ಸೌಕರ್ಯ ಅಭಿವೃದ್ಧಿಗೆ ಬಂಡವಾಳ ಹೂಡಿಕೆ, ಹಸಿರು ಅಭಿವೃದ್ದಿ ಹಾಗೂ ಯುವ ಶಕ್ತಿಯ ಸಮರ್ಥ ಬಳಕೆಗೆ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸೂಕ್ತ ರೀತಿಯ ಮಾರ್ಗಸೂಚಿಗಳು ಬಜೆಟ್‌ನಲ್ಲಿ ವ್ಯಕ್ತವಾಗಿದೆ.
ಅಂದು ಆರು ಆಧಾರಸ್ಥಂಭಗಳ ಬಜೆಟ್, ಇಂದು ಸಪ್ತರ್ಷಿ ಮಾರ್ಗದ ಬಜೆಟ್ ಕಳೆದ ಸಾಲಿನಲ್ಲಿ ಕೋವಿಡ್ ಸಂಕಷ್ಟದ ನಡುವೆ ಜರ್ಜರಿತವಾಗಿದ್ದ ಆರ್ಥಿಕತೆಗೆ ಪುನಶ್ಚೇತನ ನೀಡಿ ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡಲು ಆರು ಆಧಾರ ಸ್ಥಂಭಗಳಾದ ಆರೋಗ್ಯ ಮತ್ತು ಕಲ್ಯಾಣ, ಭೌತಿಕ, ಆರ್ಥಿಕ ಮತ್ತು ಮೂಲ ಸೌಕರ್ಯ, ಆಕಾಂಕ್ಷಿ ಭಾರತಕ್ಕಾಗಿ ಸಮಗ್ರ ಅಭಿವೃದ್ಧಿ, ಮಾನವ ಸಂಪನ್ಮೂಲ ಪುನಶ್ಚೇತನ, ಸಂಶೋಧನೆ ಮತ್ತು ಅಭಿವೃದ್ಧಿ, ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಮೊದಲಾದ ಆರು ಆಧಾರ ಸ್ಥಂಭಗಳಿಗೆ ಆದ್ಯತೆ ನೀಡಲಾಗಿತ್ತು.

ಉದ್ಯೋಗ ಸೃಷ್ಟಿಗೆ ಬೂಸ್ಟರ್ ಡೋಸ್
ಜಾಗತಿಕ ಹಿಂಜರಿತದ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಗೆ ‘ಬೂಸ್ಟ್ರ್ ಡೋಸ್’ ನೀಡಲು ಬಜೆಟಿನಲ್ಲಿ ಪ್ರಯತ್ನಿಸಲಾಗಿದೆ. ದೇಶದಲ್ಲಿ ಆರ್ಥಿಕತೆ ವೃದ್ದಿಯಾಗಬೇಕು ಎಂದರೆ ಬಂಡವಾಳ ಹೂಡಿಕೆ ಆಗಬೇಕು, ಹಣ ಹರಿದು ಬರಬೇಕು. ಹೀಗಾಗಿ, ಕೇಂದ್ರ ಸರ್ಕಾರ ದೇಶದ ಒಟ್ಟು ಆರ್ಥಿಕ ಉತ್ಪಾದನೆಯ ಶೇ. 3.3ರಷ್ಟು ಹಣವನ್ನು ಬಂಡವಾಳ ವೆಚ್ಚವಾಗಿ ಬಳಸಲು ತೀರ್ಮಾನಿಸಿದೆ. ಬಂಡವಾಳ ಹೂಡಿಕೆ ಮಿತಿಯನ್ನು 10 ಲಕ್ಷ ಕೋಟಿಗೆ ಹೆಚ್ಚಳ‌ ಮಾಡಲಾಗಿದ್ದು, ಇದು ಜಿಡಿಪಿಯ ಶೇ.3.3 ರಷ್ಟಾಗುತ್ತದೆ. ಕಳೆದ ಸಾಲಿಗೆ ಹೋಲಿಸಿದರೆ ಇದನ್ನು ಶೇ 33 ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದು ಭಾರತದ ಬದಲಾದ ಆರ್ಥಿಕ ಶಕ್ತಿಗೆ ನಿದರ್ಶನ.

ರಚನಾತ್ಮಕ ದೃಷ್ಟಿಕೋನದ ಬಜೆಟ್
ಈ ಬಜೆಟ್‌ ರಚನಾತ್ಮಕ ನೀತಿಗಳ ಪ್ರತಿಫಲನವಾಗಿದೆ. ಇದು ಸಮಾಜದ ಆಧಾರಸ್ತಂಭವಾದ ರೈತರು, ದೀನದಲಿತರು, ಮಹಿಳೆಯರು ಕುಶಲಕರ್ಮಿಗಳು, ಯುವಜನರು, ಉದ್ಯಮಿಗಳು ಮತ್ತು ತೆರಿಗೆದಾರರ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡಿದೆ. ಇದರ ಜತೆಯಲ್ಲೇ ಶಿಕ್ಷಣ, ಕೌಶಲ್ಯ, ಮೂಲಸೌಕರ್ಯ ಮತ್ತು ವೈಜ್ಞಾನಿಕ ನಗರೀಕರಣಕ್ಕೆ ಒತ್ತು ಕೊಡುವ ಹೊಸ ದೃಷ್ಟಿಕೋನವೂ ಇದರಲ್ಲಿದೆ

ಬೆಳವಣಿಗೆಗೆ ಪೂರಕವಾದ ಬಜೆಟ್
ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಗಾತ್ರದಲ್ಲಿ 10ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಹೆಚ್ಚಳವಾಗಿದೆ. ರಸ್ತೆ ಮತ್ತು ರೈಲು ಮೂಲಸೌಕರ್ಯಗಳ ಮೇಲಿನ ವೆಚ್ಚದಲ್ಲಿ ಹೆಚ್ಚಳವು ರಾಷ್ಟ್ರದ ಮೂಲಸೌಕರ್ಯ ಉನ್ನತೀಕರಣಕ್ಕೆ ನೀಡಿರುವ ಭಾರಿ ಉತ್ತೇಜನವನ್ನು ಪ್ರತಿನಿದಿಸುತ್ತದೆ. ಇದು ವಿಶ್ವ ಸನ್ನಿವೇಶಕ್ಕೆ ವಿರುದ್ಧವಾಗಿ ನಮ್ಮ ಆರ್ಥಿಕ ಬೆಳವಣಿಗೆಯ ವೇಗವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಶ್ವ ಆರ್ಥಿಕತೆಯಲ್ಲಿ ನಮ್ಮ ದೇಶದ ಸಾಧನೆಯನ್ನು ಮೇಲಕ್ಕೇರಿಸುವ ಪ್ರಯತ್ನವನ್ನು ಈ ಬಜೆಟ್ ಖಚಿತಪಡಿಸುತ್ತದೆ.
ಹೆಚ್ಚು ಹಣ, ಹೆಚ್ಚು ಖರ್ಚು
ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಶೇಕಡಾ 40 ರಷ್ಟು ಹೆಚ್ಚಿಸಿರುವುದು ಈ ಬಜೆಟ್ ನಮ್ಮ ಮಧ್ಯಮ-ಆದಾಯದ ಗುಂಪಿಗೆ ನೀಡಿದ ದೊಡ್ಡ ಸಮಾಧಾನವಾಗಿದೆ ಮತ್ತು ಅವರ ಆರ್ಥಿಕತೆಯನ್ನು ಬಲಪಡಿಸುವ ಉತ್ತಮ ಹೆಜ್ಜೆಯಾಗಿದೆ.

ಜೇಬಿನಲ್ಲಿ ಹೆಚ್ಚು ಹಣ, ಹೆಚ್ಚು ಖರ್ಚು!
ಅಷ್ಟೇ ಅಲ್ಲದೆ ಸದ್ಯದ ಪದ್ಧತಿಯಲ್ಲಿ ಸರ್‌ಚಾರ್ಜ್‌ ಸೇರಿ ಗರಿಷ್ಠ ತೆರಿಗೆಯು ಶೇ. 42.7 ಆಗಿತ್ತು. ಇದೀಗ ಗರಿಷ್ಠ ಸರ್‌ಚಾರ್ಜ್‌ನ್ನು ಶೇ. 37ರಿಂದ ಶೇ. 25ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಹೊಸ ಪದ್ಧತಿ ಪ್ರಕಾರ ಗರಿಷ್ಠ ತೆರಿಗೆಯು ಶೇ. 39 ಆಗಿರಲಿದೆ. ಜನಸಾಮಾನ್ಯರಿಗೆ ಹೊರೆಯಾಗದಂತೆ ಹೊಸ ತೆರಿಗೆಯನ್ನು ವಿಧಿಸದೆ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಹೆಚ್ಚಳ ಮಾಡುವ ಮೂಲಕ ಜನ ಸಾಮಾನ್ಯರು, ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಉಡುಗೊರೆ ನೀಡಿದೆ.

ಕೃಷಿ ಉದ್ಯಮಶೀಲತೆಗೆ ಒತ್ತು
ಕೃಷಿ ಚಟುವಟಿಕೆಗಳಲ್ಲಿ ಆಧುನಿಕತೆ ಹಾಗೂ ಕೃಷಿ ಉದ್ಯಮಶೀಲತೆಯ ಅಭಿವೃದ್ಧಿಯ ಆಶಯ ಹೊಂದಿರುವ ಕೃಷಿ ವೇಗವರ್ಧಕ ನಿಧಿಯ ಸ್ಥಾಪನೆ ಯುವ ಉದ್ಯಮಿಗಳನ್ನು ಕೃಷಿ ಸ್ಟಾರ್ಟಪ್ ಗಳನ್ನು ಸ್ಥಾಪಿಸಲು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಮತ್ಸ್ಯ ಸಂಪದ ಯೋಜನೆಯಲ್ಲಿ 6000 ಕೋಟಿ ರೂ. ಹೂಡಿಕೆ ಪ್ರಸ್ತಾಪಿಸಿರುವುದು ರಾಷ್ಟ್ರದ ಕರಾವಳಿ ಭಾಗದ ಅಭಿವೃದ್ಧಿಯಲ್ಲಿ‌ ಮಹತ್ವದ ಪಾತ್ರ ವಹಿಸುತ್ತದೆ. ಹಸಿರು ಇಂಧನ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಗುರುತಿಸಲಾಗಿದ್ದು 35000 ಕೋಟಿ ರೂ. ಹೂಡಿಕೆಗೆ ನಿರ್ಧರಿಸಿರುವುದು ಸ್ವಾಗತಾರ್ಹ.
ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಸೂಕ್ತ ಸಮಯದಲ್ಲಿ ಮಾರಾಟದ ಮೂಲಕ ಲಾಭದಾಯಕ ಬೆಲೆಗಳನ್ನು ಪಡೆಯಲು ಸಹಾಯ ಮಾಡಲು ಬೃಹತ್ ವಿಕೇಂದ್ರೀಕೃತ ಶೇಖರಣಾ ವ್ಯವಸ್ಥೆಯ ಸ್ಥಾಪನೆ ರೈತರ ಆದಾಯದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನ’ ವಸ್ತುಗಳು ಮತ್ತು ಜಿಐ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ಉತ್ತೇಜನ ನೀಡಲಾಗುವ ಆಶಯ ಕೃಷಿಕರ ಗ್ರಾಮೀಣ ಜನರ ಬದುಕಿಗೆ ಶಕ್ತಿ ತುಂಬಲಿದೆ.

ಶಿಕ್ಷಣಕ್ಕೆ ಆದ್ಯತೆ
ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಪೂರಕವಾಗಿ ದೇಶದಲ್ಲಿ 15 ಸಾವಿರ ಶಾಲೆಗಳನ್ನು ‘ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ’ (ಪಿಎಂ ಶ್ರೀ) ಶಾಲೆಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ವಯಸ್ಕರ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ‘ನವಭಾರತದ ಸಾಕ್ಷರತಾ ಯೋಜನೆ’ಯನ್ನು (NILP) ಅನುಷ್ಠಾನಗೊಳಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನವನ್ನು ಒದಗಿಸಿದೆ.

ಒಳಗೊಳ್ಳುವಿಕೆ ಹಾಗೂ ದೀರ್ಘಾವದಿ ಅಭಿವೃದ್ದಿಗೆ ಒತ್ತು
ಒಳಗೊಳ್ಳುವಿಕೆ ಮತ್ತು ಸಮೃದ್ಧಿಯನ್ನು ಕೇಂದ್ರವಾಗಿಸಿ ಭಾರತಕ್ಕೆ ಸ್ಪಷ್ಟ ದೃಷ್ಟಿಯನ್ನು ಒದಗಿಸಿರುವುದು ಮಹತ್ವದ ಅಂಶವಾಗಿದೆ. ಬಜೆಟ್‌ನ ಗಮನವು ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಪೀಡಿತ ಆರ್ಥಿಕತೆಯ ಚೇತರಿಕೆಗೆ ಒತ್ತು ನೀಡಿದ್ದ ಸರಕಾರ ಇದೀಗ ಬಜೆಟಿನಲ್ಲಿ ಆರ್ಥಿಕತೆಯ ಪ್ರಮಾಣವನ್ನು ಹೆಚ್ಚಿಸಲು ಮತ್ತು ದೀರ್ಘಾವಧಿಯ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಗಮನ ನೀಡಿರುವುದು ಗಮನಾರ್ಹ.
ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಹಾಗೆಯೇ ಆರ್ಥಿಕತೆಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಢಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅತ್ಯಂತ ಆವಶ್ಯಕ. ಕಾರ್ಪೊರೇಷನ್‌ಗಳಿಗೆ ಅನುಸರಣೆ ಹೊರೆಯನ್ನು ಕಡಿಮೆ ಮಾಡುವ ಸರ್ಕಾರದ ನಿರಂತರ ಪ್ರಯತ್ನಗಳ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಸರಣಿ ಕ್ರಮಗಳನ್ನು ಘೋಷಿಸಿದ್ದಾರೆ. ಹೂಡಿಕೆದಾರರ ರಕ್ಷಣೆ ಹಾಗೂ ಪ್ರೋತ್ಸಾಹಿಸುವ ಪ್ರಕ್ರಿಯೆಯಲ್ಲಿ ಒಂದು ಮೈಲುಗಲ್ಲು

ವಿತ್ತೀಯ ಕೊರತೆ
ಈ ಬಾರಿಯೂ ಕೊರತೆ ಬಜೆಟ್ ಆಗಿದ್ದು, ಶೇಕಡಾವಾರು ಕಡಿಮೆಯಾಗಿದೆ. 2023–24ನೇ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 5.9ಕ್ಕೆ ತಗ್ಗಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. 2022–23ನೇ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯು ಶೇ 6.4ರಷ್ಟು ಇರಲಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ. 2025–26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ 4.5ಕ್ಕೆ ತಗ್ಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸರಕಾರವು ಬಜೆಟ್ ನಲ್ಲಿ ಖರ್ಚು ಕಡಿಮೆ ಮಾಡಿದರೆ ಸಾಮಾಜಿಕ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯಾಗುತ್ತದೆ. ತೆರಿಗೆ ಹೆಚ್ಚಿಸಿದರೆ ಉತ್ಪಾದನಾ ವಲಯದಲ್ಲಿ ಮಂಕು ಆವರಿಸುತ್ತದೆ. ಹೆಚ್ಚುವರಿ ತೆರಿಗೆಯ ಬರೆ ನೀಡದೆ, ಜನಪ್ರಿಯ ಯೋಜನೆಗಳ ಘೋಷಣೆಯಿಲ್ಲದೆ, ಅಗತ್ಯ ಕ್ಷೇತ್ರಗಳಿಗೆ ಹಣಕಾಸನ್ನು ಒದಗಿಸುವ ಜಾಣ ನಡೆಯನ್ನು ಕಾಣಬಹುದಾಗಿದೆ.

ಹಣಕಾಸಿನ ವಿವೇಕತೆ
ಅಗತ್ಯ ಕ್ಷೇತ್ರಗಳಗೆ ದೊಡ್ಡ ಉತ್ತೇಜನವನ್ನು ನೀಡುವ, ಸಬ್ಸಿಡಿಗಳನ್ನು ತೀವ್ರವಾಗಿ ಕಡಿತಗೊಳಿಸುವ ಬಜೆಟ್ ಸಹಜವಾಗಿ ಹಣಕಾಸಿನ ವಿವೇಕಕ್ಕೆ ಬದ್ದತೆ ನೀಡಿರುವುದು ಸ್ಪಷ್ಟವಾಗಿದೆ. ಇದರೊಂದಿಗೆ ವೆಚ್ಚದ ಗುಣಮಟ್ಟ ಮತ್ತು ಪಾರದರ್ಶಕತೆಗೆ ಒತ್ತು ನೀಡಿರುವುದು ಗಮನಾರ್ಹವಾಗಿದೆ. ಆರ್ಥಿಕ ಸ್ಥಿರತೆ ಮತ್ತು ಹಣಕಾಸಿನ ಶಿಸ್ತಿನ ಬಗ್ಗೆ ಸರಕಾರದ ನಿಸ್ಸಂದಿಗ್ಧ ಬದ್ಧತೆಯನ್ನು ಬಜೆಟ್ ಒತ್ತಿ ಹೇಳುತ್ತದೆ. ಹೂಡಿಕೆ, ಉದ್ಯಮ ಮತ್ತು ಮೂಲ ಸೌಕರ್ಯಗಳಲ್ಲಿ ಬಜೆಟ್ ಹಲವು ಧನಾತ್ಮಕ ದೀರ್ಘಕಾಲೀನ ಬದಲಾವಣೆಗಳನ್ನು ತರಲಿದೆ. ಜನಸಾಮಾನ್ಯರಿಗೆ ತೆರಿಗೆ ಹೊರೆಯಾಗದಂತೆ ಎಚ್ಚರ ವಹಿಸಲಾಗಿದೆ.

ಬೆಳವಣಿಗೆಗೆ ರೆಕ್ಕೆ
ಪ್ರತಿ ಬಾರಿ ಬಜೆಟ್ ಮಂಡನೆಯಾಗುವಾಗ ಪ್ರತಿಯೊಬ್ಬರೂ ಕಾತರತೆಯಿಂದ ತಮಗೆ ಅನುಕೂಲಕರ ಬದಲಾವಣೆಯನ್ನು ತರುತ್ತದೆ ಎಂದೇ ಕಾಯುತ್ತಾರೆ. ಪ್ರಸ್ತುತ ಬಜೆಟ್ ನಲ್ಲಿ ಆರೋಗ್ಯ, ಕೃಷಿ, ಗ್ರಾಮೀಣ ಅಭಿವೃದ್ಧಿ, ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಸರಕಾರ ವಿಶೇಷ ಪ್ರಯತ್ನ ತೋರುತ್ತದೆ. ಆದರೆ ಈ ಯಶಸ್ಸು ಮುಂದಿನ ಸಾಲಿನಲ್ಲಿ ಸಂಗ್ರಹವಾಗುವ ತೆರಿಗೆ ಹಾಗೂ ಇನ್ನಿತರ ಸರಕಾರಿ ಆದಾಯದ ಮೇಲೆ ಅವಲಂಬಿಸಿರುತ್ತದೆ.
2023 ರ ಬಜೆಟ್ ಹೂಡಿಕೆ, ಹೆಚ್ಚಿದ ಖರ್ಚು, ಉದ್ಯೋಗ, ವ್ಯವಹಾರವನ್ನು ಸುಲಭಗೊಳಿಸುವ ಮೂಲಕ ಭಾರತದ ಬೆಳವಣಿಗೆಯ ಕಥೆಗೆ ರೆಕ್ಕೆಗಳನ್ನು ಒದಗಿಸಿದೆ. ಯಾವಾಗ ಸುಧಾರಣಾ ಕ್ರಮಗಳನ್ನು ರಾಷ್ಟ್ರೀಯ ಪ್ರಗತಿಯೊಡೆಗಿನ ಹೆಜ್ಜೆಗಳು ಎಂದು ನೋಡಲು ಸಾಧ್ಯವಾಗುತ್ತದೋ ಆಗ ಮಾತ್ರವೇ ಅವು ವ್ಯಾಪಕ ಮಟ್ಟದಲ್ಲಿ ಸ್ವೀಕೃತಿಯಾಗುತ್ತವೆ.

Leave a Reply

error: Content is protected !!