ಪುತ್ತೂರು: ಪುತ್ತೂರಿನ ಹಿರಿಯ ನ್ಯಾಯವಾದಿ ಎಪಿಎಂಸಿ ರಸ್ತೆ ನೆಲ್ಲಿಕಟ್ಟೆ ನಿವಾಸಿ ಕೆ.ಪಿ.ಜೇಮ್ಸ್ ಎಂಬವರು ಮಂಗಳೂರು ತಿರುವನಂತಪುರ ಕಡೆ ಚಲಿಸುತ್ತಿದ್ದ ಮಲಬಾರ್ ಎಕ್ಸ್ಪ್ರೆಸ್ ರೈಲಿನಲ್ಲಿ ಫೆ. 15ರ ತಡ ರಾತ್ರಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೆ.ಪಿ.ಜೇಮ್ಸ್ ಮತ್ತು ಅವರ ಪತ್ನಿ ಫೆ.15ರಂದು ಸಂಜೆ ಚೆಂಗನೂರಿನ ಬಳಿ ಪ್ರಪಂಚದ ಅತಿ ದೊಡ್ಡ ಕ್ರಿಶ್ಚಿಯನ್ ಧಾರ್ಮಿಕ ಕನ್ವೆನ್ಸನ್ ನಾದ ಮಾರಾಮಣ್ ಕನ್ವೆನ್ಷನ್ ಗೆ ರೈಲಿನಲ್ಲಿ ತೆರಳುತ್ತಿದ್ದರು. ಹವಾನಿಯಂತ್ರಿತ ಕೋಚ್ನಲ್ಲಿದ್ದ ಅವರು ರಾತ್ರಿ ವೇಳೆ ಕೆ.ಪಿ.ಜೇಮ್ಸ್ ಶೌಚಾಲಯಕ್ಕೆಂದು ಹೋದವರು ಹೃದಯಾಘಾತಕ್ಕೊಳಗಾಗಿ ರೈಲಿನಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ.
ಅವರು ಕಣ್ಣೂರು ಮತ್ತು ಕ್ಯಾಲಿಕಟ್ ಮಧ್ಯೆ ಬಿದ್ದಿರಬಹುದು ಎಂದು ತಿಳಿದು ಬಂದಿದೆ. ತನ್ನ ಗಂಡ ಶೌಚಾಲಯಕ್ಕೆ ಹೋದವರು ಬಾರದೆ ಇರುವುದನ್ನು ನೋಡಲು ಹೋದಾಗ ಗಂಡ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಕಿರುಚಾಡಿದಾಗ ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದಿದ್ದಾರೆ ಎಂದು ರೈಲಿನಲ್ಲಿದ್ದ ಉಳಿದವರು ಹೇಳಿದರು. ತಲ್ಚೇರಿ ಬಳಿಯ ಧರ್ಮಡಮ್ ಎಂಬಲ್ಲಿ ರೈಲ್ವೇ ಹಳಿಯಲ್ಲಿ ಮೃತ ದೇಹ ಪತ್ತೆಯಾಗಿರುವ ಕುರಿತು ರೈಲ್ವೇ ಪೊಲೀಸರು ಪತ್ತೆ ಮಾಡಿ ತಲ್ಚೇರಿಯ ಆಸ್ಪತ್ರೆಯ ಶವಾಗಾರದ ಕೊಠಡಿಯಲ್ಲಿ ಇರಿಸಿದ್ದರು.
ಕೆ.ಪಿ ಜೇಮ್ಸ್ ಅವರ ಪತ್ನಿ ನನ್ನ ಗಂಡ ರೈಲಿನಲ್ಲಿ ನಾಪತ್ತೆಯಾಗಿರುವ ಕುರಿತು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿಗೆ ಸಂಬಂಧಿಸಿ ರೈಲ್ವೇ ಪೊಲೀಸರು ಪತ್ತೆಯಾದ ಮೃತ ದೇಹವನ್ನು ಪರಿಶೀಲಿಸಿ ಮೃತ ದೇಹದ ಜೊತೆಯಲ್ಲಿದ್ದ ವಕೀಲ ಸದಸ್ಯತ್ವದ ಗುರುತುಚೀಟಿ ಮತ್ತು ಅದರಲ್ಲಿರುವ ಭಾವಚಿತ್ರ ಆಧರಿಸಿ ಮೃತ ದೇಹ ಕೆ.ಪಿ. ಜೇಮ್ಸ್ ಅವರದ್ದು ಎಂದು ಖಾತ್ರಿ ಪಡಿಸಲಾಯಿತು.
ಕೆ.ಪಿ ಜೇಮ್ಸ್ ದಂಪತಿ ಪ್ರಯಾಣಿಸುತ್ತಿದ್ದ ಅದೇ ರೈಲಿನಲ್ಲಿ ಚೆಂಗನೂರಿಗೆ ತೆರಳುತ್ತಿದ್ದ ನೆಲ್ಯಾಡಿ ಸಮೀಪದ ಲಾವತಡ್ಕ ಎಂಬಲ್ಲಿಯ ಅಬ್ರಾಹಂ ತೋಮಸ್ ಎಂಬವರು ಕೂಡಾ ಇದ್ದರು.ಮಹಿಳೆಯೊಬ್ಬರು ಕಿರುಚಾಡಿದ್ದನ್ನು ಗಮನಿಸಿ ಅವರು ವಿಚಾರಿಸಿದ ವೇಳೆ ಪುತ್ತೂರು ಮೂಲದವರೆಂದು ತಿಳಿದು ಬಳಿಕ ಅವರು ಕ್ಯಾಲಿಕಟ್ನಲ್ಲಿ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿ ಕೆ.ಪಿ.ಜೇಮ್ಸ್ ಅವರ ಪತ್ನಿಯನ್ನು ರೈಲಿನಿಂದ ಇಳಿಸಿ ಅವರ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಅಲ್ಲಿಂದ ಬಳಿಕ ರೈಲ್ವೇ ಪೊಲೀಸರ ಮಾಹಿತಿಯಂತೆ ಧರ್ಮಡಮ್ ಎಂಬಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದ್ದು ಅವರ ಕಿಸೆಯಲ್ಲಿದ್ದ ಡೈರಿಯಲ್ಲಿ ಕೆ.ಪಿ.ಜೇಮ್ಸ್ ಎಂಬ ಹೆಸರಿದೆ ಎಂದು ಮಾಹಿತಿ ನೀಡಿದ್ದರು. ಅದರಂತೆ ಕೆ.ಪಿ.ಜೇಮ್ಸ್ ಸಂಬಂಧಿಕರು ಮೃತದೇಹವನ್ನು ಗುರುತು ಪತ್ತೆ ಮಾಡಿದ್ದಾರೆ. ರೈಲಿನಲ್ಲಿದ್ದ ಅಬ್ರಾಹಂ ರವರು ತನ್ನ ಸಹೋದರ ಲಾವತ್ತಡ್ಕದ ನಿವಾಸಿ ಸಿಬಿ ವರ್ಗೀಸ್ ರವರಿಗೆ ಮಾಹಿತಿ ತಿಳಿಸಿದ್ದರು. ಅವರು ಪುತ್ತೂರು ನ್ಯಾಯವಾದಿ ನೂರುದ್ದೀನ್ ಸಾಲ್ಮರರವರಿಗೆ ಮಾಹಿತಿ ನೀಡಿದರು ಎಂಬುದಾಗಿ ಘಟನೆಯ ವಿವರವನ್ನು ಲಾವತ್ತಡ್ಕದ ಅಬ್ರಾಹಂ ತೋಮಸ್ ನೇಸರ ನ್ಯೂಸ್ ಗೆ ವಿವರ ತಿಳಿಸಿದರು
ಶ್ರದ್ದಾಂಜಲಿ:
ಕೆ.ಪಿ.ಜೇಮ್ಸ್ ಅವರ ನಿಧನದ ಹಿನ್ನೆಲೆಯಲ್ಲಿ ಪುತ್ತೂರು ವಕೀಲರ ಸಂಘದ ವತಿಯಿಂದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರ ಅಧ್ಯಕ್ಷತೆಯಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಯಿತು.