ಬೆಂಗಳೂರು: ಸರ್ಕಾರಿ ನೌಕರರಿಗೆ ಶೇ. 17 ರಷ್ಟು ವೇತನ ಹೆಚ್ಚಳ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ. 7 ನೇ ವೇತನ ಆಯೋಗ ರಚನೆಗೆ ಆಗ್ರಹಿಸಿ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರ ಈ ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಿದೆ. ಈ ನಡುವೆ ಅಧಿಕೃತವಾದ ಆದೇಶವನ್ನೂ ಪ್ರಕಟ ಮಾಡಲಾಗಿದೆ.
ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಹಿರಿಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದರು. ಸಭೆಯ ಬಳಿಕ ಈ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕೇವಲ ಭರವಸೆ ಕೊಟ್ಟಿದ್ದಾರೆ. ಆದರೆ ಅಧಿಕೃತವಾಗಿ ಆದೇಶ ಬಂದ ಬಳಿಕ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೇಳಿದ್ದಾರೆ.
ಸರ್ಕಾರ ಕೇವಲ ಹೇಳಿಕೆಯಷ್ಟೇ ನೀಡಿದೆ. ಆದರೆ ಯಾವುದೇ ಅಧಿಕೃತ ಆದೇಶ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಸ್ಪಷ್ಟ ಆದೇಶ ಹೊರತಾಗಿ ನಾವು ಮುಷ್ಕರವನ್ನು ವಾಪಸ್ ಪಡೆಯುವುದಿಲ್ಲ. ಸಿಎಂ ಅವರು ಶೀಘ್ರದಲ್ಲೇ ಆದೇಶ ಆಗುತ್ತದೆ ಎಂದಿದ್ದಾರೆ. ಆದರೆ ಯಾವಾಗ ಎಂದಿಲ್ಲ. ಈ ನಿಟ್ಟಿನಲ್ಲಿ ಸ್ಪಷ್ಟತೆಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಸರ್ಕಾರಿ ನೌಕಕರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಯಂತ್ರ ಸ್ಥಗಿತಗೊಂಡಿದೆ. ವಿಧಾನಸೌಧಕ್ಕೂ ಮುಷ್ಕರದ ಬಿಸಿ ತಟ್ಟಿದೆ. ಮತ್ತೊಂದು ಕಡೆಯಲ್ಲಿ ಸರ್ಕಾರಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರು ಪರದಾಟ ನಡೆಸುವಂತಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಸಿಎಂ ಸರ್ಕಾರಿ ನೌಕರರ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಆದರೆ ಸಭೆಯಲ್ಲಿ ಯಾವುದೇ ಫಲಪ್ರದವಾಗಿರಲಿಲ್ಲ. ಈ ನಿಟ್ಟಿನಲ್ಲಿ ಬುಧವಾರ ಮುಷ್ಕರ ಆರಂಭಗೊಂಡ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆಗೆ ಸಿಎಂ ಸಭೆ ನಡೆಸಿ ತುರ್ತು ತೀರ್ಮಾನವನ್ನು ಕೈಗೊಂಡಿದ್ದಾರೆ.
ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ
ಸರ್ಕಾರಿ ನೌಕರರಿಗೆ 17 ಶೇ ವೇತನ ಹೆಚ್ಚಳ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವೇತನ ಹೆಚ್ಚಳ ಮಾಡಿ ಮಧ್ಯಂತರ ಹರಿಹಾರ ನೀಡಿ ಸಿಎಂ ಆದೇಶಕ್ಕೆ ಸೂಚನೆ ನೀಡಿದ್ದರು. ಆದರೆ ಅಧಿಕೃತ ಆದೇಶ ಬಂದ ಬಳಿಕ ತಮ್ಮ ನಿರ್ಧಾರ ಪ್ರಕಟ ಮಾಡುವುದಾಗಿ ನೌಕರರ ಸಂಘ ಹೇಳಿತ್ತು. ಅದರಂತೆ ಇದೀಗ ಅಧಿಕೃತ ಆದೇಶ ಪ್ರಕಟವಾಗಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.