ಬೆಂಗಳೂರು: ಸರ್ಕಾರಿ ನೌಕರರ ವೇತನ 17 % ಹೆಚ್ಚಳಕ್ಕೆ ಆದೇಶ ಹೊರಡಿಸಲಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಹೋರಾಟ ಸಫಲವಾಗಿದೆ. ಈ ನಿಟ್ಟಿನಲ್ಲಿ ಮುಷ್ಕರವನ್ನು ಕೈಬಿಡಲು ನಿರ್ಧಾರ ಮಾಡಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದರು.
ವಿಧಾನಸೌಧದಲ್ಲಿ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗಿನ ಮಾತುಕತೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರ ವೇತನವನ್ನು ಶೇ 17 ರಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರದ ಆದೇಶವನ್ನು ಪಡೆದಿದ್ದೇವೆ.
ಎಲ್ಲವೂ ಧನಾತ್ಮಕವಾಗಿದೆ ಎಂದರು. ನಮ್ಮ ಬೇಡಿಕೆಗೆ ಈಡೇರಿಕೆಗೆ ಮುಷ್ಕರ ಇವತ್ತು ನಡೆದಿದೆ. ಈ ನಡುವೆ ಸರ್ಕಾರದ ಆದೇಶ ಆಗಿದೆ. ಈ ಮೂಲಕ ನಮ್ಮ ಹೋರಾಟ ಸಫಲವಾಗಿದೆ ಎಂದು ಅಭಿಪ್ರಾಯಪಟ್ಟದರು.
ತಮ್ಮ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲು ನಿರ್ಧಾರ ಮಾಡಲಾಗಿದೆ. ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರ ಸಂಘದ ಅಧ್ಯಕ್ಷ ಸಿ.ಎನ್ ಷಡಕ್ಷರಿ ಅವರು ಸೂಚನೆ ನೀಡಿದ್ದಾರೆ.
7 ನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘ ಬುಧವಾರ ಮುಷ್ಕರ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತುರ್ತು ಸಭೆಯನ್ನು ನಡೆಸಿ ಶೇ 17 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು.
ಸರ್ಕಾರಿ ನೌಕರರು ಶೇ 40 ರಷ್ಟು ಹೆಚ್ಚಳಕ್ಕೆ ಬೇಡಿಕೆ ಇಟ್ಟರೂ ಸದ್ಯ ಮಧ್ಯಂತರ ಪರಿಹಾರವಾಗಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಸರ್ಕಾರ ಈ ಆದೇಶವನ್ನು ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ತಮ್ಮ ಹೋರಾಟವನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ.
ಆದೇಶದಲ್ಲಿ ಏನಿದೆ?
2018 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್ 1 , 2023 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರ ಹರ್ಷಿಸುತ್ತದೆ.
ಮಧ್ಯಂತರ ಪರಿಹಾರದ ಉದ್ದೇಶಕ್ಕಾಗಿ ಮೂಲ ವೇತನ ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ ಅ- ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗಿದ್ದರೆ, ಆ ಸ್ಥಗಿತ ವೇತನ ಬಡ್ತಿ.
ಆ- 2018 ರ ಕರ್ನಾಟಕ ನಾಗರೀಕ ಸೇವಾ ( ಪರಿಷ್ಕೃತ ವೇತನ) ನಿಯಮಗಳ ನಿಯಮ 3 (ಸಿ) ಯನ್ನು ಓದಿಕೊಂಡು 7 ನೇ ನಿಯಮದ (3) ನೇ ಉಪ ನಿಯಮದ ಮೇರೆಗೆ ಅವನಿಗೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ ಆ ವೈಯಕ್ತಿಕ ವೇತನ ಇ- ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ ಅವುಗಳು ಸೇರುತ್ತವೆ ಎಂದು ಉಲ್ಲೇಖ ಮಾಡಲಾಗಿದೆ.
ಹಳೆ ಪಿಂಚಣಿ ಪದ್ದತಿಗೆ ಜಾರಿಗೆ ಅಧ್ಯಯನ ನಡೆಸಲು ಸಮಿತಿ ರಚನೆ
ಸದ್ಯ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಳೆ ಪಿಂಚಣಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲು ಸರ್ಕಾರ ಆದೇಶ ಮಾಡಿದೆ. ಎರಡು ತಿಂಗಳೊಳಗಾಗಿ ವರದಿಯನ್ನು ನೀಡುವಂತೆ ಸೂಚಿಸಿದೆ.