ಚಿಕ್ಕಮಗಳೂರು ಜಿಲ್ಲಾ ವಿಭಾಗದ ಚಾರ್ಮಾಡಿ ಘಾಟಿಯ ಆಲೇಖಾನ್ ಹೊರಟ್ಟಿ ಗುಡ್ಡದಲ್ಲಿ ಭಾನುವಾರ ಭಾರಿ ಪ್ರಮಾಣದ ಕಾಡ್ಗಿಚ್ಚು ಕಂಡು ಬಂದಿದೆ.
ಎತ್ತರ ಪ್ರದೇಶದ ಗುಡ್ಡದಲ್ಲಿ ಧಗ-ಧಗ ಹೊತ್ತಿ ಬೆಂಕಿ ಉರಿಯುತ್ತಿದ್ದು ಅರಣ್ಯ ಇಲಾಖೆ ಹತೋಟಿಗೆ ತರಲು ಹರಸಾಹಸ ನಡೆಸುತ್ತಿದೆ.
ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಇದ್ದು, ಅಪಾರ ಪ್ರಮಾಣದ ಅರಣ್ಯ ಬೆಂಕಿಗಾಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ. ಎತ್ತರ ಪ್ರದೇಶವಾದ್ದರಿಂದ ಅಗ್ನಿಶಾಮಕ ವಾಹನ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಮಠದ ಮಜಲು ಬಳಿ ಬೆಂಕಿ
ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಚಾರ್ಮಾಡಿ ಪ್ರದೇಶದ ಮಠದ ಮಜಲು ಬಳಿ ಹೆದ್ದಾರಿ ಬದಿ ಇದ್ದ ತ್ಯಾಜ್ಯದ ರಾಶಿಗೆ ಯಾರೋ ಬೆಂಕಿ ಹಚ್ಚಿದ್ದು,ಅದು ಅರಣ್ಯ ಪ್ರದೇಶದತ್ತ ಆವರಿಸುತ್ತಿದ್ದಂತೆ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿ ಕ್ರಮ ಕೈಗೊಂಡ ಕಾರಣ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.