ಗುಂಡ್ಯ : ಶಿರಾಡಿ ಗ್ರಾಮ ಪಂಚಾಯಿತಿನ ವತಿಯಿಂದ ಸುಸಜ್ಜಿತವಾದ ಸಾರ್ವಜನಿಕ ಶೌಚಾಲಯ

ಶೇರ್ ಮಾಡಿ

ನೇಸರ ಡಿ.31: ಕಡಬ ತಾಲೂಕಿನ ಗುಂಡ್ಯ ಜಂಕ್ಷನ್‌ನಲ್ಲಿ ಶಿರಾಡಿ ಗ್ರಾಮ ಪಂಚಾಯಿತಿನ ವತಿಯಿಂದ ಸುಸಜ್ಜಿತವಾದ ಸಾರ್ವಜನಿಕ ಶೌಚಾಲಯ ನಿರ್ಮಾಣಗೊಂಡಿದ್ದು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.
ಮಂಗಳೂರಿನಿಂದ ಬೆಂಗಳೂರು ಸಂಪರ್ಕಿಸುವವರು ರಾಷ್ಟ್ರೀಯ ಹೆದ್ದಾರಿ ಗುಂಡ್ಯ ಮೂಲಕವೇ ಹಾದುಹೋಗಬೇಕು. ಗುಂಡ್ಯ ದಿನದ 24 ಗಂಟೆಯೂ ಸಾರ್ವಜನಿಕರ ಓಡಾಟವಿರುವ ಪ್ರದೇಶ.ಸಾವಿರಾರು ವಾಹನಗಳು ದಿನಂಪ್ರತಿ ಓಡಾಟ ನಡೆಸುತ್ತಲೇ ಇರುತ್ತವೆ.ರಾಜ್ಯದ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿರುವ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಗುಂಡ್ಯ ಮೂಲಕವೇ ಹಾದು ಹೋಗಬೇಕು. ರಾಜ್ಯದ ಮೂಲೆ ಮೂಲೆಯಿಂದ ಬರುವ ಪ್ರವಾಸಿಗರು, ಭಕ್ತರೂ, ವಾಹನ ಚಾಲಕರು ಗುಂಡ್ಯದಲ್ಲಿ ವಾಹನ ನಿಲ್ಲಿಸಿ ಬಹಿರ್ದೆಸೆಗೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಂಡ್ಯದಲ್ಲಿ ಹೆದ್ದಾರಿಯುದ್ದಕ್ಕೂ ಮೂತ್ರ, ಮಲವಿಸರ್ಜನೆ ಮಾಡಲಾಗುತ್ತಿತ್ತು. ಇದರಿಂದ ಪರಿಸರ ಗಬ್ಬು ವಾಸನೆಯಿಂದ ಕೂಡಿರುತಿತ್ತು. ಇದರಿಂದ ಇಲ್ಲಿನ ವರ್ತಕರು, ಸಾರ್ವಜನಿಕರು ತೀವ್ರ ಸಮಸ್ಯೆಗೆ ಗುರಿಯಾಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದು ಹೋಗುವ ಲಾರಿ ಚಾಲಕರಿಗೂ ಗುಂಡ್ಯದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಹಾಸನದಿಂದ ದ.ಕ.ಜಿಲ್ಲೆ ಪ್ರವೇಶಿಸುವ ಗುಂಡ್ಯದಲ್ಲಿ ಸಾರ್ವಜನಿಕ ಶೌಚಾಲಯ ಆಗಬೇಕೆಂಬ ಕೂಗು ಪದೇ ಪದೇ ಸಾರ್ವಜನಿಕರಿಂದ ಕೇಳಿಬರುತ್ತಿತ್ತು.

ಎಲ್ಲಾ ನಗರಗಳಂತೆ ಗುಂಡ್ಯವೂ ಬೆಳೆಯುತ್ತಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಇರುವುದರಿಂದ ಸ್ಥಳೀಯ ವರ್ತಕರು, ರಿಕ್ಷಾ ಚಾಲಕರೂ ಸಂಕಷ್ಟ ಎದುರಿಸುತ್ತಿದ್ದರು. ಗುಂಡ್ಯದಲ್ಲಿ ಸಾರ್ವಜನಿಕ ಶೌಚಾಲಯ ಆಗಬೇಕೆಂಬುದು ಸುಮಾರು 25 ವರ್ಷಗಳ ಬೇಡಿಕೆಯಾಗಿತ್ತು. ಶೌಚಾಲಯಕ್ಕಾಗಿ ಗ್ರಾಮ ಪಂಚಾಯಿತಿಯಿಂದ ಸಚಿವರ ತನಕವೂ ಮನವಿ ಸಲ್ಲಿಕೆಯಾಗಿದೆ. ಗುಂಡ್ಯ ಪೇಟೆಯು ಅರಣ್ಯ ಪ್ರದೇಶದಿಂದಲೇ ಸುತ್ತುವರಿದಿದೆ. ಇಲ್ಲಿ ಶೌಚಾಲಯ ನಿರ್ಮಾಣಕ್ಕೆ ಸೂಕ್ತ ಜಾಗದ ಕೊರತೆ ಉಂಟಾಗಿತ್ತು. ಈ ಹಿಂದೆ ಜಾಗ ಗುರುತಿಸಿದರೂ ಕೆಲವೊಂದು ಸಮಸ್ಯೆಗಳಿಂದಾಗಿ ನೆನೆಗುದಿಗೆ ಬಿದ್ದಿತ್ತು.

ಕೊನೆಗೂ ಶಿರಾಡಿ ಗ್ರಾ.ಪಂ.ಆಡಳಿತ ಮಂಡಳಿಯ ಮುತುವರ್ಜಿಯಿಂದ ಜನರ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗುಂಡ್ಯ ಜಂಕ್ಷನ್‌ನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಗೊಂಡಿದೆ. ಜಿ.ಪಂ.ನ ನಿಕಟಪೂರ್ವ ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ.ನ ನಿಕಟಪೂರ್ವ ಸದಸ್ಯೆ ಆಶಾ ಲಕ್ಷ್ಮಣ್‌ರವರು ಗ್ರಾಮ ಪಂಚಾಯತ್‌ಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ದ.ಕ.ಜಿಲ್ಲಾ ಪಂಚಾಯತ್ ಹಾಗೂ ಕಡಬ ತಾಲೂಕು ಪಂಚಾಯತ್‌ನಿಂದಲೂ ಬೆಂಬಲ ಸಿಕ್ಕಿದೆ. ಕಳೆದ ಜುಲೈನಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಗೊಂಡು ಡಿಸೆಂಬರ್ ವೇಳೆಗೆ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ. ಗಂಡಸರಿಗೆ, ಮಹಿಳೆಯರಿಗೆ ಹಾಗೂ ವಿಕಲಚೇತನರಿಗೆ ಪ್ರತ್ಯೇಕವಾಗಿ ಶೌಚಾಲಯ, ಸ್ನಾನಗೃಹ ಮಾಡಲಾಗಿದೆ. ಶೌಚಾಲಯದ ಒಂದು ಬದಿಯಲ್ಲಿ ಪುರುಷರಿಗಾಗಿ ಮೂರು ಶೌಚಾಲಯ, 2 ಸ್ನಾನಗೃಹ, ಇನ್ನೊಂದು ಬದಿಯಲ್ಲಿ ಮಹಿಳೆಯರಿಗಾಗಿ ನಾಲ್ಕು ಶೌಚಾಲಯ, 2 ಸ್ನಾನಗೃಹವಿದೆ. ಜನಸೇವಾ ಪೌಂಡೇಶನ್, ಹಾಸನ ಇವರು ಶೌಚಾಲಯದ ನಿರ್ವಹಣೆ ಮಾಡುತ್ತಿದ್ದಾರೆ. ಶೌಚಾಲಯದ ಗೋಡೆಯಲ್ಲಿ ಚಿತ್ರ ಬಿಡಿಸಲಾಗಿದ್ದು ನೋಡಲು ಆಕರ್ಷಣೀಯವಾಗಿದೆ.

ಸ್ವಚ್ಛ ಭಾರತ ಮಿಷನ್ ಯೋಜನೆಯಿಂದ ರೂ.8.40ಲಕ್ಷ ಹಾಗೂ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯ ರೂ.3.10 ಲಕ್ಷ ಅನುದಾನ ಸೇರಿ ಒಟ್ಟು 12 ಲಕ್ಷ ರೂ.,ಅನುದಾನದಲ್ಲಿ ಶೌಚಾಲಯ ನಿರ್ಮಾಣಗೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶೌಚಾಲಯಕ್ಕೆ ಟೈಲ್ಸ್, ಆವರಣ ಹಾಗೂ ಗ್ರಿಲ್ ಅಳವಡಿಕೆಗೆ 1.50 ಲಕ್ಷ ರೂ., ಧನ ಸಹಾಯ ಸಿಕ್ಕಿದೆ. ತಡೆ ಗೋಡೆಗೆ ಜಿ.ಪಂ.,ಹಾಗೂ ತಾ.ಪಂ.,ನಿಂದ ತಲಾ ರೂ.3 ಲಕ್ಷದಂತೆ ಅನುದಾನ ದೊರೆತಿದೆ. ಶಿರಾಡಿ ಗ್ರಾ.ಪಂ.ನ ಅಧ್ಯಕ್ಷೆ ವಿನೀತಾ,ಪಿಡಿಒ ವೆಂಕಟೇಶ್ ಪಿ.,ಉಪಾಧ್ಯಕ್ಷ ಕಾರ್ತಿಕೇಯನ್ ಹಾಗೂ ಎಲ್ಲಾ ಸದಸ್ಯರ ಮುತುವರ್ಜಿಯಿಂದ ಜನರ 25 ವರ್ಷಗಳ ಬೇಡಿಕೆಯೊಂದು ಪೂರೈಕೆಯಾಗಿದೆ. ಯಾವುದೇ ಯೋಜನೆ ಅನುಷ್ಠಾನಕ್ಕೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗದಲ್ಲಿ ಇಚ್ಛಾಶಕ್ತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿರಾಡಿ ಗ್ರಾ.ಪಂ.ನ ಈ ಯೋಜನೆಗೆ ಜನರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

ಜಾಹೀರಾತು

Leave a Reply

error: Content is protected !!