ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಈ ಮೂಲಕ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಅನುಮತಿ ನೀಡಿದೆ.
ಈ ಹಿಂದೆ ಖಾಸಗಿ ಶಾಲೆಗಳ ಸಂಘ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ 5 ಮತ್ತು 8ನೇ ತರಗತಿಗಳ ಮೌಲ್ಯಾಂಕನವನ್ನು ಮುಂದೂಡುವಂತೆ ಅರ್ಜಿ ಸಲ್ಲಿಸಿದ್ದವು. ಇಂದು ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿರುವ ಹಿನ್ನಲೆಯಲ್ಲಿ, ನಿಗದಿಯಾದ ದಿನಾಂಕಗಳಂದು ಮೌಲ್ಯಾಂಕನ ನಡೆಯಲಿದೆ.
ಈ ಹಿಂದಿನ ವೇಳಾಪಟ್ಟಿಯ ಪ್ರಕಾರ, 5ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 27-03-2023 ರಿಂದ 30-03-2023 ರವರೆಗೆ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 27-03-2023 ರಿಂದ 01-04-2023 ರವರೆಗೆ ಮೌಲ್ಯಾಂಕನವನ್ನು ನಡೆಸಲಾಗುತ್ತದೆ. ಎಲ್ಲಾ ಪರೀಕ್ಷೆಗಳು ಮಧ್ಯಾಹ್ನ 2.30 ರಿಂದ ಆರಂಭವಾಗಲಿವೆ.
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ ಒಂದು ವಿಷಯದಂತೆ ಮೌಲ್ಯಾಂಕನ ನಡೆಸಲಾಗುತ್ತದೆ. ಪ್ರತಿ ವಿಷಯದ ಮೌಲ್ಯಂಕನಕ್ಕೆ ಎರಡು ಗಂಟೆಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ತರಗತಿವಾರು ಪ್ರತಿ ವಿಷಯಕ್ಕೆ 40 ಅಂಕಗಳ ಲಿಖಿತ ಮೌಲ್ಯಾಂಕನಕ್ಕೆ 28 ಪ್ರಶ್ನೆಗಳನ್ನೊಳಗೊಂಡ 1 ಅಂಕದ 20 ಬಹುಆಯ್ಕೆ ಪ್ರಶ್ನೆಗಳು, 2 ಅಂಕಗಳ 5, 3 ಅಂಕಗಳ 2 ಹಾಗೂ 4 ಅಂಕಗಳ 1 ವಿವರಣಾತ್ಮಕ ಪ್ರಶ್ನೆಗಳು ಪ್ರತ್ಯಕ ಪ್ರಶ್ನೋತ್ತರ ಪತ್ರಿಕೆಯನ್ನು ನೀಡಲಾಗುತ್ತದೆ.
10 ಅಂಕಗಳ ಮೌಖಿಕ ಮೌಲ್ಯಾಂಕನವನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸಲು ತಿಳಿಸಲಾಗಿದೆ. 40 ಅಂಕಗಳ ಲಿಖಿತ ಮೌಲ್ಯಾಂಕನ ಮತ್ತು 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸುವುದು.