ಬೆಳ್ತಂಗಡಿ: ಪಟ್ರಮೆ ಗ್ರಾಮದ ಸಂಕೇಶ ಎಂಬಲ್ಲಿ ವಾಸದ ಮನೆಯ ಹಿಂಬದಿಯಲ್ಲಿ ಕೋಟಿಯ್ಯಪ್ಪ ಎಂಬಾತ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಬಕಾರಿ ಇಲಾಖೆ ದಾಳಿ ನಡೆಸಿ 5ಲೀ ಕಳ್ಳಭಟ್ಟಿ ಸಾರಾಯಿ ಹಾಗೂ ಅದಕ್ಕೆ ಉಪಯೋಗಿಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡ ಪ್ರಕರಣ ವರದಿಯಾಗಿದೆ.
ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಅಬಕಾರಿ ನಿರೀಕ್ಷಕರು ಕೇಸ್ ದಾಖಲಿಸಿರುತ್ತಾರೆ. ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಬಕಾರಿ ಉಪ ಆಯುಕ್ತಕರು, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಅಬಕಾರಿ ಉಪ ಅಧೀಕ್ಷಕರು ಬಂಟ್ವಾಳ ಉಪವಿಭಾಗ ರವರ ನಿರ್ದೆಶನದಂತೆ ಗಸ್ತು ನಡೆಸುತ್ತಿರುವ ವೇಳೆ ಈ ಪ್ರಕರಣ ಪತ್ತೆಯಾಗಿದೆ.
ಕಳ್ಳಭಟ್ಟಿ ಸಾರಾಯಿಯನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ ಸುಮಾರು 5,200 ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ನವೀನ್, ಉಪ ನಿರೀಕ್ಷಕ ಸಯ್ಯದ್ ಶಬೀರ್ ಹಾಗೂ ಹೆಡ್ಕಾನ್ಸ್ಟೇಬಲ್ ಭೋಜ.ಕೆ., ವಿನೋಯ್ ಸಿ.ಜಿ ಮತ್ತು ವಾಹನ ಚಾಲಕ ನವೀನ್ ಪಿ. ಭಾಗವಹಿಸಿದ್ದರು.