ಬೆಂಗಳೂರು: ಬಿಜೆಪಿ ಟಿಕೆಟ್ ನಿರಾಕರಣೆಯಿಂದ ತೀವ್ರ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಖರ್ಗೆ ಅವರು ಶೆಟ್ಟರ್ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ಶೆಟ್ಟರ್ ಒಬ್ಬರು ಶ್ರೇಷ್ಠ, ಹಾಗೂ ಸರಳ, ಸಜ್ಜನಿಕೆಯ ರಾಜಕಾರಣಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ರಾಜ್ಯದ ಸಿಎಂ ಆಗಿ, ಸ್ಪೀಕರ್ ಆಗಿ ಕೆಲಸ ಮಾಡಿದ್ದಾರೆ ಇಂದು ಕರ್ನಾಟಕ ರಾಜ್ಯದಲ್ಲಿ ಬಹಳ ಸಂತಸದ ದಿನವೆಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿ, ಜಗದೀಶ್ ಶೆಟ್ಟರ್ ಯೊಬ್ಬ ಉತ್ತಮ ನಾಯಕ. ಅವರು ನಮ್ಮ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಶೆಟ್ಟರ್ ಕಾಂಗ್ರೆಸ್ ಸೇರುತ್ತಿದ್ದಾರೆ. ಶೆಟ್ಟರ್ ಪಕ್ಷ ಸೆರ್ಪಡೆಯಿಂದ ಉತ್ತರ ಕರ್ನಾಟಕದ ಭಾಗಕ್ಕೆ ಶಕ್ತಿ. ಶೆಟ್ಟರ್ ಅಭಯ್ ಸಿಂಗ್ ಪಾಟೀಲ್ ಸೇರಿ, ಹಲವು ನಾಯಕರು ಕಾಂಗ್ರೆಸ್ ಸೆರ್ಪಡೆಯಾಗುತ್ತಿದ್ದಾರೆ. ಶೆಟ್ಟರ್ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅದೇ ರೀತಿ ನಮ್ಮ ಪಕ್ಷದಲ್ಲೂ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಕರ್ನಾಟಕದಲ್ಲಿ ನಾವು 150 ಸ್ಥಾನವನ್ನು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಜಗದೀಶ್ ಶೆಟ್ಟರ್ ಅವರನ್ನು ಸ್ವಾಗತಿಸುತ್ತೇನೆ ಎಂದರು.
ಈ ವೇಳೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಡಿ.ಕೆ.ಶಿವಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.