ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು 244 ದಿನ ಕರ್ತವ್ಯ ನಿರ್ವಹಿಸಲಿವೆ. ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಶಾಲಾ ಕರ್ತವ್ಯ ದಿನಗಳಲ್ಲಿ ಭಾರೀ ಕಡಿತವಾಗಿದೆ. ಅದೇ ರೀತಿ ಕಲಿಕಾ ದಿನಗಳಲ್ಲಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ, 48 ದಿನಗಳಷ್ಟು ಇಳಿಕೆ ಕಂಡು ಬಂದಿದೆ.
2022-23ರ ಶೈಕ್ಷಣಿಕ ವರ್ಷದಲ್ಲಿ 270 ಕರ್ತವ್ಯದ ದಿನಗಳಿದ್ದವು. ಈ ಮೂಲಕ ಹೆಚ್ಚುವರಿಯಾಗಿ 26 ರಜಾ ದಿನಗಳು ಈ ವರ್ಷ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಿಗಲಿದೆ. ಒಟ್ಟಾರೆಯಾಗಿ ಹಿಂದಿನ ವರ್ಷದ ಶೇ. 74ರಷ್ಟು ದಿನ ಶಿಕ್ಷಣ ಸಂಬಂಧಿ ಚಟುವಟಿಕೆ ನಡೆದಿದ್ದರೆ, ಈ ವರ್ಷ ಶೇ.67ರಷ್ಟು ದಿನ ನಡೆಯಲಿದೆ.
ಕಳೆದ ವರ್ಷದಲ್ಲಿ ಹೆಚ್ಚುವರಿಯಾಗಿದ್ದ ಕಲಿಕಾ ಚೇತರಿಕೆ ಈ ವರ್ಷ ಇಲ್ಲದಿರುವುದು ಮತ್ತು ಈ ವರ್ಷ ದಸರಾ ರಜೆ ಹೆಚ್ಚಾಗಿರುವುದರಿಂದ ಶಾಲಾ ದಿನಗಳು ಕಡಿಮೆಯಾಗಿವೆ.
ಕಳೆದ ಬಾರಿ ಕೊರೊನಾ ಕಾರಣದಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆಗಿರುವ ಹಿನ್ನಡೆಯನ್ನು ಸರಿದೂಗಿಸಲು ಮೇ ತಿಂಗಳ 14ರಿಂದ ಶಾಲಾ ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗಿತ್ತು. ಮೇ ತಿಂಗಳಲ್ಲಿ 14 ದಿನ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಈ ವರ್ಷ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯುವುದಿಲ್ಲ. ಮೇ 29ರಿಂದ ಶಾಲೆ ಆರಂಭಗೊಳ್ಳಲಿದೆ.
10 ದಿನ ದಸರಾ ರಜೆ
ಹಾಗೆಯೇ ಕಳೆದ ಶೈಕ್ಷಣಿಕ ವರ್ಷದಲ್ಲಿ ಅ. 3ರಿಂದ 16ರ ವರೆಗೆ ಅಂದರೆ, 14 ದಿನ ಮಾತ್ರ ದಸರಾ ರಜೆ ನಿಗದಿ ಪಡಿಸಲಾಗಿತ್ತು. ಆದರೆ ಈ ವರ್ಷ ಅ. 8ರಿಂದ ಅ. 25ರ ತನಕ ಒಟ್ಟು 20 ದಿನ ರಜೆ ಇರಲಿದೆ. ಅದೇ ರೀತಿ ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್, ಜುಲೈಯಲ್ಲಿ ಒಂದು ದಿನ ಮತ್ತು ಡಿಸೆಂಬರ್‌ನಲ್ಲಿ ಮೂರು ರಜಾ ದಿನ ಹೆಚ್ಚಿದೆ.
180 ದಿನ ಮಾತ್ರ ಪಾಠ
ಅದೇ ರೀತಿ ಕಳೆದ ಶೈಕ್ಷಣಿಕ ವರ್ಷದಲ್ಲಿ 228 ಬೋಧನಾ – ಕಲಿಕೆ ದಿನಗಳಿದ್ದರೆ ಈ ವರ್ಷ ಕೇವಲ 180 ಕಲಿಕಾ ದಿನಗಳಿರಲಿವೆ. ಈ ಶೈಕ್ಷಣಿಕ ವರ್ಷದಲ್ಲಿ 244 ಶಾಲಾ ಕರ್ತವ್ಯದ ದಿನಗಳನ್ನು ಸರಕಾರ ನಿಗದಿ ಪಡಿಸಿದೆ. ಇದರಲ್ಲಿ ಬೋಧನಾ – ಕಲಿಕೆ ಪ್ರಕ್ರಿಯೆಗೆ ಕೇವಲ 180 ದಿನ ಉಳಿಯಲಿದೆ. ಉಳಿದಂತೆ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಪ್ರಕ್ರಿಯೆಗಳಿಗಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳ / ಪಠ್ಯ ಚಟುವಟಿಕೆಗಳ/ ಸ್ಪರ್ಧೆಗಳ ನಿರ್ವಹಣೆ ಕಾರ್ಯಕ್ಕಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು ಮತ್ತು ಶಾಲಾ ಸ್ಥಳೀಯ ರಜೆಗಳು ಎಂದು ನಾಲ್ಕು ದಿನವನ್ನು ನಿಗದಿಪಡಿಸಲಾಗಿದೆ.