ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ರಿಕ್ಷಾ ಚಾಲಕನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಾಡಿ ಗ್ರಾಮದ ಪೇರಮಜಲು ನಿವಾಸಿ ವಿಶ್ವನಾಥ ಬಿ.(40ವ.)ಹಲ್ಲೆಗೊಳಗಾದ ರಿಕ್ಷಾ ಚಾಲಕ. ವಿಶ್ವನಾಥ ಹಾಗೂ ಕೇರಳ ನೊಂದಾಣಿಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ನಡುವೆ ಅಡ್ಡಹೊಳೆಯಲ್ಲಿ ಓವರ್‌ಟೇಕ್ ವಿಚಾರಕ್ಕೆ ಸಂಬಂಧಿಸಿ ಜಗಳ ನಡೆದು ಕಾರಿನಲ್ಲಿದ್ದ ಅಪರಿಚಿತರು ವಿಶ್ವನಾಥರವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ವರದಿಯಾಗಿದೆ. ಹಲ್ಲೆಯಿಂದ ಗಾಯಗೊಂಡಿದ್ದ ವಿಶ್ವನಾಥರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ:
ವಿಶ್ವನಾಥರವರು ಎ.27ರಂದು ಸಂಜೆ ತನ್ನ ರಿಕ್ಷಾ (ಕೆಎ21, ಸಿ 2821)ಕ್ಕೆ ಪೆಟ್ರೋಲ್ ತುಂಬಿಸುವುದಕ್ಕಾಗಿ ಗುಂಡ್ಯದಿಂದ ಅಡ್ಡಹೊಳೆ ಕಡೆಗೆ ಬರುತ್ತಿದ್ದ ವೇಳೆ ಅಡ್ಡಹೊಳೆ ಸೇತುವೆ ಬಳಿ ತಲುಪಿದಾಗ ಹಿಂದಿನಿಂದ ಬಂದ ನೇರಳೆ ಬಣ್ಣದ ಸ್ಕಾರ್ಫೀಯೋ ವಾಹನವೊಂದನ್ನು ಅದರ ಚಾಲಕ ಒವರ್ ಟೇಕ್ ಮಾಡುತ್ತಾ ಆಟೋ ರಿಕ್ಷಾದ ತೀರಾ ಬದಿಗೆ ಬಂದಿದ್ದು ಇದರಿಂದ ಗಲಿಬಿಲಿಗೊಂಡ ವಿಶ್ವನಾಥರವರು ನೋಡಿಕೊಂಡು ಚಲಾಯಿಸುವಂತೆ ಸ್ಕಾರ್ಪಿಯೋ ಚಾಲಕನಿಗೆ ತಿಳಿಸಿದ್ದರು. ಬಳಿಕ ವಿಶ್ವನಾಥರವರು ಅಡ್ಡಹೊಳೆ ಪೆಟ್ರೋಲ್ ಬಂಕ್ ಬಳಿ ತಲುಪುತ್ತಿದ್ದಂತೆ ಆರೋಪಿತರು ಸ್ಕಾರ್ಪಿಯೋ ವಾಹನವನ್ನು ಆಟೋ ರಿಕ್ಷಾಕ್ಕೆ ಅಡ್ಡವಾಗಿ ನಿಲ್ಲಿಸಿ, ಅದರಲ್ಲಿದ್ದ ಸುಮಾರು 7-8 ಜನರು ಇಳಿದು ಬಂದು ವಿಶ್ವನಾಥರವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಅಲ್ಲದೇ ಅಲ್ಲಿಯೇ ವ್ಯಾಗನರ್ ಕಾರಿನಲ್ಲಿದ್ದವರು ಸಹ ಬಂದು ವಿಶ್ವನಾಥರಿಗೆ ಕೈಯಿಂದ ಹೊಡೆದಿರುತ್ತಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೆ ಸಂಬಂಧಿಸಿ ವಿಶ್ವನಾಥರವರು ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 148, 341, 323, 324, 506 ಜೊತೆಗೆ 149 ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.