ಮಂಗಳೂರು:ಮೂಡುಶೆಡ್ಡೆಯಲ್ಲಿ ಬುಧವಾರ ಸಂಜೆ ನಡೆದ ಗಲಭೆಗೆ ಕಾಂಗ್ರೆಸ್ ಅಭ್ಯರ್ಥಿಯೇ ನೇರ ಕಾರಣ. ಅಭ್ಯರ್ಥಿಯಾದವರು ಕಾರ್ಯಕರ್ತರನ್ನು ತಡೆಯುವ ಪ್ರಯತ್ನ ಮಾಡಬೇಕೇ ಹೊರತು, ಗಲಭೆಗೆ ಪ್ರೇರಣೆ ನೀಡಬಾರದು. ಚುನಾವಣೆಯಲ್ಲಿ ಸೋಲುವ ಭಯದಿಂದ ಹತಾಷರಾಗಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.
ಗುರುವಾರ ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಶೆಡ್ಡೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಜತೆಯಾಗಿ ಬಲಿಷ್ಠವಾಗಿದೆ. ಬಿಜೆಪಿ ಕಾರ್ಯಕರ್ತರು ಕುಳಿತಿದ್ದ ಚುನಾವಣ ಕೌಂಟರ್ ಬಳಿಗೆ ಬಂದು ಕಾರು ನಿಲ್ಲಿಸಿರುವುದು ಅವರು ಮಾಡಿದ ದೊಡ್ಡ ತಪ್ಪು ಎಂದರು.
ಸಂಯಮ ವಹಿಸಿ ಕಾಂಗ್ರೆಸ್ ಪಕ್ಷದವರು ಇದ್ದಲ್ಲೇ ಕಾರು ನಿಲ್ಲಿಸಿದ್ದಲ್ಲಿ ಗಲಭೆಗೆ ಆಸ್ಪದವೇ ಇರಲಿಲ್ಲ. ದಿನವಿಡೀ ಅವರು ನೂರಾರು ಬೂತ್ಗಳಿಗೆ ಅವರು ಭೇಟಿ ನೀಡಿದ್ದಾರೆ. ಅಲ್ಲಿಯೂ ಬಿಜೆಪಿ ಕೌಂಟರ್ಗಳಿತ್ತು. ಅಲ್ಲಿ ಯಾಕೆ ಗಲಭೆ ನಡೆದಿಲ್ಲ ಎಂದು ಪ್ರಶ್ನಿಸಿದರು.