ನೆಲ್ಯಾಡಿ: ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ 2022-23ನೇ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟವು ಗಾಂಧಿ ಮೈದಾನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಎಂಜಿನಿಯರಿಂಗ್ ನ ಸಹಾಯಕ ಪ್ರಾಧ್ಯಾಪಕರಾದ ವರುಣ್ ಕೆ. ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯಾವುದೇ ಉದ್ಯೋಗ ಪಡೆಯಲು ಬೇಕಾದ ಮೂಲಭೂತ ಆರ್ಹತೆಗಳು, ಕೌಶಲ್ಯಗಳು ಹಾಗೂ ಸಂದರ್ಶನವನ್ನು ಎದುರುಸಲು ವಿದ್ಯಾರ್ಥಿಗಳಿಗೆ ಬೇಕಾಗುವ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡುತ್ತಾ ವಿದ್ಯಾರ್ಥಿಗಳೊಂದಿಗೆ ಪ್ರಾಯೋಗಿಕ ನಿದರ್ಶನಗಳ ಮೂಲಕ ಸಂವಾದ ನಡೆಸಿದರು.
ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಸುರೇಶ್ ಅವರು ಅಧ್ಯಕ್ಷೀಯ ನುಡಿಯೊಂದಿಗೆ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಸೋತಾಗ ಕುಗ್ಗದೇ ಗೆದ್ದಾಗ ಅಹಂನ್ನು ಬೆಳೆಸಿಕೊಳ್ಳದೇ ಸಮಾನವಾಗಿ ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳಲು ಸಲಹೆ ನೀಡಿದರು.
ಈ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ಅವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗಿಸ್, ಶಿಕ್ಷಕ-ರಕ್ಷಕ ಸಂಘದ ಕಾರ್ಯಾಧ್ಯಕ್ಷರಾದ ಅಬ್ದುಲ್ ಖಾದರ್, ಸಂತಜಾರ್ಜ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕರಾದ ಮಹಮ್ಮದ್ ಹ್ಯಾರಿಸ್. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಆನಂದ್ ಕೆ, ವಿದ್ಯಾರ್ಥಿ ಸಂಘದ ಕ್ರೀಡಾ ಕಾರ್ಯದರ್ಶಿ ಪ್ರಜಿತ್ ಉಪಸ್ಥಿತರಿದ್ದರು.
ಎಲ್ಲಾ ಗಣ್ಯರು ಸೇರಿ 2022-23 ರ ಶೈಕ್ಷಣಿಕ ವರ್ಷದ ಕ್ರೀಡಾಕೂಟವನ್ನು ಬಲೂನ್ ಹಾರಿಸುವುದರ ಮೂಲಕ “ಕ್ರೀಡಾಕೂಟದ ಪ್ರತಿಭೆಯ ಗಗನ ವಿಸ್ತಾರ” ಎಂಬ ಧ್ಯೇಯವಾಕ್ಯ ಘೋಷಣೆಯೊಂದಿಗೆ ಚಾಲನೆ ನೀಡಿದರು.
ಕ್ರೀಡಾಕೂಟದ ಸಭಾ ಕಾರ್ಯಕ್ರಮಕ್ಕೆ ಅರ್ಥಶಾಸ್ತ್ರ ಉಪನ್ಯಾಕಿಯಾದ ಶ್ರೀಮತಿ ಶ್ರುತಿ ಇವರು ಸರ್ವರನ್ನು ಸ್ವಾಗತಿಸಿದರು. ಉದ್ಘಾಟಕರ ಪರಿಚಯವನ್ನು ಇಂಗ್ಲೀಷ್ ಉಪನ್ಯಾಸಕಿಯಾದ ವನಿತಾ ಪಿ ಅವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರಾಜ್ಯಶಾಸ್ತ್ರದ ಉಪನ್ಯಾಸಕಿಯಾದ ಶ್ರೀಮತಿ ಡೀನಾ ಪಿ ಪಿ ನಿರ್ವಹಿಸಿದರು. ವಾಣಿಜ್ಯಶಾಸ್ತ್ರದ ಉಪನ್ಯಾಸಕಿಯಾದ ಶ್ರೀಮತಿ ವೆರೋನಿಕಾ ಪ್ರಭಾ ವಿ ಪಿ ವಂದನಾರ್ಪಣೆ ನಡೆಸಿಕೊಟ್ಟರು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ದೈಹಿಕ ಶಿಕ್ಷಣ ನಿರ್ದೇಶಕರಾದ ಆನಂದ್ ಕೆ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಕ್ರೀಡೆಗಳು ನೆರವೇರಿದವು.